ರಸ್ತೆ-ರೈಲು ಮೋದಿ ಸಾಧನೆಯ ಸಾಲು

ಚಿನ್ನದ ಬದಲಿಗೆ ಚಿನ್ನದಂತಹ ರಸ್ತೆಗಳು. ಪ್ರಯಾಣ, ಪ್ರಯಾಸ ಆಗದಂತಹ ರಸ್ತೆಗಳು. ಚಲಿಸುವ ಶೌಚಾಲಯದಿಂದ ಫೈವ್ ಸ್ಟಾರ್ ಹೋಟೆಲ್ ಅನುಭವ ತರುವ ರೈಲು ಭೋಗಿಗಳು. ವಿದೇಶಿ ವಿಮಾನ ನಿಲ್ದಾಣಗಳನ್ನೂ ಮೀರಿಸುವ ರೈಲ್ವೇ ಟರ್ಮಿನಲ್ ಗಳು. ಹೀಗೂ ಮಾಡಬಹುದಾ ಎನ್ನುವಂತಹ ಸಿವಿಲ್ ಇಂಜಿನಿಯರಿಂಗ್ ತಾಂತ್ರಿಕತೆಯ ಬ್ರಿಡ್ಜ್ ಗಳು, ಟನಲ್ ಗಳು. ಇವೆಲ್ಲದರ ಉಸ್ತುವಾರಿ ನೋಡಿಕೊಳ್ಳುವುದಕ್ಕೆ ದಕ್ಷ ಸಚಿವರು ಆ ದಕ್ಷ ಸಚಿವರನ್ನ ಗುರುತಿಸಿ ಸರಿಯಾದ ಜಾಗದಲ್ಲಿ ಕೂರಿಸುವುದಕ್ಕೆ ಒಬ್ಬ ಪ್ರಧಾನಿ.

ದೇಶದ ಅಭಿವೃದ್ದಿಗೆ ಪ್ರಮುಖ ಪಾತ್ರವಹಿಸುವ ಭಾರತದ ನರನಾಡಿಯಾಗಿರುವ ರಸ್ತೆ, ರೈಲು ಮಾರ್ಗಗಳ ಮೂಲ ಸೌಕರ್ಯದ ಬಗ್ಗೆ ದೇಶಕ್ಕೆ ಸ್ವಾತಂತ್ರ ಬಂದು 75 ವರ್ಷಗಳ ತರುವಾಯವೂ ನಾವು ಮಾತನಾಡುತ್ತಿದ್ದೇವೆ ಎಂದರೇ ಅದಕ್ಕೂ ಹಿಂದೆ ನಾವು ಇಂಥ ಅಭಿವೃದ್ದಿ ನೋಡಿಲ್ಲವೆಂದೇ ಅರ್ಥ. 2014 ರಲ್ಲಿ ನರೇಂದ್ರ ಮೋದಿ ಪ್ರಧಾನಿಯಾಗದೇ ಇದ್ದಿದ್ದರೇ…. ಥ್ಯಾಂಕ್ ಗಾಡ್ ನಮ್ಮ ಮುಂದಿನ ಪೀಳಿಗೆ ಮೂಲ ಸೌಕರ್ಯದ ಬಗ್ಗೆ ಅಲ್ಲ, ನೆಕ್ಸ್ಟ್ ಲೆವೆಲ್ ಅಭಿವೃದ್ದಿಯ ಬಗ್ಗೆ ಮಾತನಾಡಲಿದೆ.

ಬೆಂಗಳೂರು – ಮೈಸೂರು ಎಕ್ಸ್ ಪ್ರೆಸ್ ವೇ ಉದ್ಘಾಟನೆಯ ನಂತರ ಜನ ಮಾತನಾಡಿಕೊಂಡಿದ್ದು ಕುಡಿದ ನೀರು ಕುಲುಕದಂತೆ ಪ್ರಯಾಣಿಸಬಹುದು ಎಂದು. ವಂದೇ ಭಾರತ್ ಎಕ್ಸ್ ಪ್ರೆಸ್ ರೈಲುಗಳು, ವಿಸ್ಟ್ರಾಡೋಮ್ ಕೋಚ್ ಗಳನ್ನ ನೋಡಿದಾಗ ಭಾರತದಲ್ಲಿ ಇದೆಲ್ಲ ನೋಡೋದು ಕನಸೇ ಅಂದುಕೊಂಡಿದ್ದೆವು. ಮೇಲಿನ ಮಾತುಗಳೆಲ್ಲ ನಿಮಗೆ ಉತ್ಪ್ರೇಕ್ಷೆ ಅನ್ನಿಸಬಹುದು ಆದರೆ ಪರೀಕ್ಷಿಸಲು ಅಭಿವೃದ್ದಿ ನಿಮ್ಮ ಕಣ್ಣ ಮುಂದಿದೆ. ಅಂಕಿ ಅಂಶಗಳು ಅಭಿವೃದ್ದಿಗೆ ಸಾಕ್ಷಿಯಾಗಿ ನಿಲ್ಲುತ್ತವೆ.

ರಸ್ತೆಗಳ ಕುರಿತು ಮಾತನಾಡುವುದಾದರೆ, ಮೋದಿ ಮಹತ್ವಾಕಾಂಕ್ಷೆಗೆ ತಕ್ಕಂತೆ ನಿರೀಕ್ಷೆಗೂ ಮೀರಿ ಕೆಲಸ ಮಾಡಿದ ವ್ಯಕ್ತಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರಾದ ನಿತಿನ್ ಜೈರಾಮ್ ಗಡ್ಕರಿ. ವಿರೋಧ ಪಕ್ಷಗಳು ಸಹ ಇವರ ಕೆಲಸದ ಬಗ್ಗೆ ಕಿಮಕ್ ಎನ್ನಲಾರವು. ಅಂಥ ಕೆಲಸಗಾರ. 2014 ರಲ್ಲಿ ಅಧಿಕಾವಹಿಸಿಕೊಂಡ ನಂತರ 1 ಲಕ್ಷ ಕೋಟಿಗೂ ಹೆಚ್ಚಿನ ಹಿಂದಿನ ಸರ್ಕಾರದ ಯೋಜನೆಗಳನ್ನ ಪೂರ್ಣಗೊಳಿಸಿದ್ದಲ್ಲದೇ 35 ಸಾವಿರ ಕೋಟಿ ಮೌಲ್ಯದ ಇತರ ಯೋಜನೆಗಳಿಗೆ ಮರು ಬಿಡ್ಡಿಂಗ್ ಕರೆದರು. 2022 – 23 ಹೆದ್ದಾರಿ ನಿರ್ಮಾಣದ ಯೋಜನೆಗಳು 1 ಲಕ್ಷದ 45 ಸಾವಿರದ 240 ಕೋಟಿಗೆ ತಲುಪಿದೆ. ಅಧಿಕಾರವಹಿಸಿಕೊಂಡ ಸಮಯದಲ್ಲಿ ದಿನವೊಂದಕ್ಕೆ 2 ಕಿಮೀ ವೇಗದಲ್ಲಿ ಸಾಗುತ್ತಿದ್ದ ಹೆದ್ದಾರಿ ಕಾಮಗಾರಿಗಳಿಗೆ ಮೊದಲ ವರ್ಷದಲ್ಲೇ 16 ಕಿಮೀ ವೇಗ ತಂದುಕೊಟ್ಟರು. 2019 ಲೋಕಸಭಾ ಚುನಾವಣೆಗೂ ಮುನ್ನ ದಿನಕ್ಕೆ 30 ಕಿಮೀ ವೇಗದಲ್ಲಿ ಹೆದ್ದಾರಿ ಕಾಮಗಾರಿಗಳು ನಡೆಯುವಂತೆ ನೋಡಿಕೊಂಡರು. ಕರೋನಾ ಕಾಲದಲ್ಲಿ ಎಲ್ಲಾ ವಲಯಗಳು ವಿಶ್ರಾಂತ ಸ್ಥಿತಿಯಲ್ಲಿದ್ದಾಗ ದಿನಕ್ಕೆ 37 ಕಿಮೀ ವೇಗದಲ್ಲೂ ಹೆದ್ದಾರಿಗಳು ನಿರ್ಮಾಣಗೊಂಡಿವೆ.

ನಿತಿನ್ ಗಡ್ಕರಿ ಉಸ್ತುವಾರಿಯಲ್ಲಿ ಪೂರ್ಣಗೊಂಡ ಅದ್ಭುತ ಹೆದ್ದಾರಿ ಯೋಜನೆಗಳ ಬಗ್ಗೆ ಕಣ್ಣು ಹಾಯಿಸೋಣ. 4 ಲಕ್ಷದ 50 ಸಾವಿರ ಕೋಟಿ ರುಪಾಯಿ ವೆಚ್ಚದಲ್ಲಿ ಭಾರತ್ ಮಾಲಾ ಯೋಜನೆಯಡಿ 10 ಸಾವಿರ ಕಿಮೀ ಹೆದ್ದಾರಿಯನ್ನ ನಿರ್ಮಿಸಲಾಗಿದೆ. 1 ಲಕ್ಷ ಕೋಟಿ ವೆಚ್ಚದಲ್ಲಿ ದೆಹಲಿ ಮೀರತ್ ಎಕ್ಸ್ ಪ್ರೆಸ್ ವೇ, 47 ಸಾವಿರ ಕೋಟಿ ವೆಚ್ಚದಲ್ಲಿ ಸೂರತ್ – ಚೆನ್ನೈ ಎಕ್ಸ್ ಪ್ರೆಸ್ ವೇ, 37 ಸಾವಿರ ಕೋಟಿ ವೆಚ್ಚದಲ್ಲಿ ದೆಹಲಿ – ಅಮೃತಸರ – ಕತ್ರ ಎಕ್ಸ್ ಪ್ರೆಸ್ ವೇ, 22 ಸಾವಿರ ಕೋಟಿ ವೆಚ್ಚದಲ್ಲಿ ಅಮೃತಸರ – ಜಾಮ್ನಾಗರ್ ಎಕ್ಸ್ ಪ್ರೆಸ್ ವೇ , 12 ಸಾವಿರ ಕೋಟಿ ಮೌಲ್ಯದ ಈಸ್ಟರ್ನ್ ಪೆರಿಫೆರಲ್ ಎಕ್ಸ್ ಪ್ರೆಸ್ ವೇ, 8 ಸಾವಿರದ 500 ಕೋಟಿ ವೆಚ್ಚದಲ್ಲಿ ಬೆಂಗಳೂರು – ಮೈಸೂರು ಎಕ್ಸ್ ಪ್ರೆಸ್ ವೇ ಮತ್ತು 8 ಸಾವಿರ ಕೋಟಿ ವೆಚ್ಚದಲ್ಲಿ ದೆಹಲಿ – ಮೀರತ್ ಎಕ್ಸ್ ಪ್ರೆಸ್ ವೇಗಳನ್ನ ರಚಿಸಲಾಗಿದೆ.

ಇನ್ನು ಪ್ರಯಾಣದ ಸಮಯವನ್ನ ಕಡಿಮೆಗೊಳಿಸಿ ಇಂಧನ ವೆಚ್ಚ ಉಳಿಸುವ ಸುರಂಗ ಮಾರ್ಗಗಗಳದ್ದು ಮತ್ತೊಂದು ಸಾಹಸಮಯ ಕೆಲಸ. ಇದರಲ್ಲೂ ಮೋದಿ ಸರ್ಕಾರ ಹಿಂದೆ ಬಿದ್ದಿಲ್ಲ. ವಿವಿಧ ಕಡೆಗಳಲ್ಲಿ 357 ಕಿಮೀ ವ್ಯಾಪ್ತಿಯ 144 ಸುರಂಗ ಮಾರ್ಗಗಳನ್ನ 2 ಲಕ್ಷ ಕೋಟಿ ರುಪಾಯಿಗಳಲ್ಲಿ ನಿರ್ಮಿಸಲಾಗಿದೆ. ಇದಲ್ಲದೆ 7 ಸಾವಿರ ಕೋಟಿ ವೆಚ್ಚದಲ್ಲಿ ಲಡಾಖ್ ನಲ್ಲಿ ಝೋಜಿಲಾ ಟನಲ್, 4 ಸಾವಿರದ 708 ಕೋಟಿ ವೆಚ್ಚದಲ್ಲಿ ಜಮ್ಮು ಕಾಶ್ಮೀರದಲ್ಲಿ ಡಾ ಶ್ಯಾಮ್ ಪ್ರಸಾದ್ ಮುಖರ್ಜಿ ಟನಲ್, 4 ಸಾವಿರದ ನೂರು ಕೋಟಿ ರೂ. ವೆಚ್ಚದಲ್ಲಿ ಹಿಮಾಚಲ ಪ್ರದೇಶದಲ್ಲಿ ಅಟಲ್ ಟನಲ್, 3 ಸಾವಿರ ಕೋಟಿ ರೂ. ವೆಚ್ಚದಲ್ಲಿ Z Morh ಟನಲ್, 790 ಕೋಟಿ ರೂ. ವೆಚ್ಚದಲ್ಲಿ ಮಧ್ಯಪ್ರದೇಶದಲ್ಲಿ ರೇವಾ ಸಿದ್ದಿ ಟನಲ್ ಮತ್ತು 210 ಕೋಟಿ ವೆಚ್ಚದಲ್ಲಿ ಕೇರಳದಲ್ಲಿ ಗುತ್ತಿರನ್ ಸುರಂಗ ಮಾರ್ಗಗಳನ್ನ ನಿರ್ಮಿಸುವ ಮೂಲಕ ಲಾಜಿಸ್ಟಿಕ್ಸ್ ವ್ಯವಹಾರದಲ್ಲಿ ಸಾವಿರಾರು ಕೋಟಿ ರುಪಾಯಿಗಳನ್ನ ಉಳಿಸಲಾಗಿದೆ.

ಮೋದಿ ಅಧಿಕಾರ ವಹಿಸಿಕೊಂಡ 9 ವರ್ಷಗಳ ಭಾರತದ ರಸ್ತೆ ಸಂಪರ್ಕ 59% ಹೆಚ್ಚಾಗಿದ್ದು, ಹಲವು ದೇಶಗಳನ್ನ ಹಿಂದಿಕ್ಕಿ ವಿಶ್ವದ ಎರಡನೇ ಅತಿ ದೊಡ್ಡ ರಸ್ತೆ ಸಂಪರ್ಕವನ್ನ ಹೊಂದಿರುವ ದೇಶವಾಗಿ ಹೊರಹೊಮ್ಮಿದೆ. ಶೀಘ್ರದಲ್ಲೇ ಅಮೇರಿಕಾವನ್ನ ಹಿಂದಿಕ್ಕಿ ಮೊದಲ ಸ್ಥಾನಕ್ಕೆ ಬರುತ್ತೇವೆ. ಅಚ್ಚರಿಯೇ ಬೇಡ. 2013 – 14 ರ ಕಾಂಗ್ರೆಸ್ ಅವಧಿಯಲ್ಲಿ ಸಂಗ್ರಹವಾಗುತ್ತಿದ್ದ ಟೋಲ್ ಸಂಗ್ರಹ ರೂ 4,770 ಕೋಟಿ. 2022 – 23 ಸಂಗ್ರಹವಾದ ಟೋಲ್ ಮೊತ್ತ 41,342 ಕೋಟಿ ರೂ. ಫಾಸ್ಟ್ಸಾಗ್ ಕಡ್ಡಾಯ ಮಾಡುವ ಮೂಲಕ ಟೋಲ್ ಸಂಗ್ರಹದಲ್ಲಿ ಗಣನೀಯ ರೀತಿಯಲ್ಲಿ ಏರಿಕೆ ಕಂಡು ಬಂದಿದೆ. ಈ ರೀತಿ ಭಾರತ ಆರ್ಥಿಕತೆಗೆ ಸಾವಿರಾರು ಕೋಟಿ ಆದಾಯವನ್ನ ತರುತ್ತಿರುವ ಭಾರತದ ಹೈವೇ ಮ್ಯಾನ್ ಆಫ್ ನಿತಿನ್ ಗಡ್ಕರಿಯವರಿಗೆ ಸಲಾಂ ಹೇಳಲೇಬೇಕು.

ಭಾರತದ ರಸ್ತೆಗಳ ಕುರಿತು ಈಗ ಮಾತನಾಡುವುದಕ್ಕೆ ಪುಟಗಳೇ ಸಾಲುವುದಿಲ್ಲ. ಇನ್ನು ಹಳಿಗಳ ಮೇಲೋಡುವ ರೈಲುಗಳ ಅಭಿವೃದ್ದಿ ರಸ್ತೆ ಅಭಿವೃದ್ದಿ ಜೊತೆ ಪೈಪೋಟಿಗಿಳಿದಿದೆ. ನೀವು ಗಮನಿಸಿದ್ದೀರಾ ? ಇತ್ತೀಚೆಗೆ ರೈಲಿನ ಶೌಚಾಲಯಗಳಲ್ಲಿ ನೀವು ಮಾಡುವ ಮಲ ಹಳಿಗಳ ಮೇಲೇ ಬೀಳುವುದೇ ಇಲ್ಲ. ಯಾಕೆ ಗೊತ್ತಾ ? ಚಲಿಸುವ ಶೌಚಾಲಯ ಎಂದು ಟ್ರೋಲ್ ಆಗುತ್ತಿದ್ದ ರೈಲ್ವೇ ಇಲಾಖೆ ಈಗ 100% ಸ್ವಚ್ಛ ಭಾರತದ ರುವಾರಿ. ರೈಲ್ವೆ ಹಳಿಗಳ ಮೇಲಿನ ಕೊಳೆಯನ್ನ ತೊಡೆದು ಹಾಕಲು ಡಿ ಆರ್ ಡಿ ಓ ಮತ್ತು ರೈಲ್ವೇ ಇಲಾಖೆ ಜಂಟಿಯಾಗಿ ಕೈಗೆತ್ತಿಕೊಂಡ ಯೋಜನೆ ಬಯೋ ಟಾಯ್ಲೆಟ್ ಅಂದ್ರೆ ಜೈವಿಕ ಶೌಚಾಲಯ. ನೀವು ಮಾಡಿದ ಮಲ ಹಳಿಯ ಮೇಲೆ ಬೀಳದೆ ರೈಲಿಗೆ ಅಳವಡಿಸಲಾಗಿರುವ ಬಯೋ ಟ್ಯಾಂಕ್ ಸೇರಿಕೊಳ್ಳುತ್ತದೆ. ಅಲ್ಲಿ ನಿರ್ಧಿಷ್ಟ ಬ್ಯಾಕ್ಟಿರಿಯಾಗಳನ್ನ ಬಳಸಿ ಕೊಳೆಸಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಮೀಥೇನ್ ಅನಿಲ ಮತ್ತು ನೀರು ಮಾತ್ರ ಉಳಿಯುತ್ತದೆ. ಮೀಥೇನ್ ಗಾಳಿಯಲ್ಲಿ ಸೇರುತ್ತದೆ.ಇದರಿಂದ ವಾತವರಣವೇನೂ ಕಲುಷಿತವಾಗುವುದಿಲ್ಲ. ನೀರನ್ನ ಕ್ಲೋರಿಕರಣ ಮಾಡುವ ಮೂಲಕ ಮರುಬಳಕೆ ಮಾಡಿ ರೈಲ್ವೆ ಟ್ರಾಕ್ ಮೇಲೆ ಬಿಡಲಾಗುತ್ತದೆ. ನೆನಪಿಡಿ ದಿನವೊಂದಕ್ಕೆ 497 ಟ್ರಕ್ ಮಲ ಮಿಶ್ರಿತ ಕೊಳಚೆ ನೀರು ರೈಲ್ವೇ ಹಳಿಗಳ ಮೇಲೆ ಬೀಳುತ್ತಿತ್ತಂತೆ. ಇದನ್ನ ಹೋಗಲಾಡಿಸಲು 68 ಸಾವಿರ ರೈಲು ಬೋಗಿಗಳಿಗೆ ಬಯೋ ಟಾಯ್ಲೆಟ್ ಅಳವಡಿಸಿ 100% ಕವರೇಜ್ ಮಾಡಲಾಗಿದೆ. ಈಗ ರೈಲ್ವೆ ಹಳಿ ದಾಟುವಾಗ, ನಿಲ್ದಾಣದಲ್ಲಿ ನಿಲ್ಲುವಾಗ ಮೂಗು ಮುಚ್ಚಿಕೊಳ್ಳುವ ಪ್ರಸಂಗವೇ ಇಲ್ಲ. ಇದೆಲ್ಲವೂ ಸಾಧ್ಯವಾಗಿದ್ದು ಮೋದಿಯವರ ದೂರದರ್ಶಿತ್ವದ ನಾಯಕತ್ವದಿಂದ.

1947 ರಿಂದ 2014 ರವರೆಗೆ ವಿದ್ಯುತ್ ಚಾಲಿತ ರೈಲುಗಳು ಓಡುತ್ತಿದ್ದ ದೂರದ ಸಂಖ್ಯೆ 21,800 ರೂಟ್ ಕಿಲೋ ಮೀಟರ್ . ಮೋದಿ ಸರ್ಕಾರ ರೈಲ್ವೆ ಇಲಾಖೆಗೆ ಮೇಜರ್ ಸರ್ಜರಿ ಮಾಡಲು ಮುಂದಾದ ನಂತರದಿಂದ ರೈಲ್ವೇ ಹಳಿ ವಿದ್ಯುದೀಕರಣ ಶರವೇಗ ಪಡೆದಿದ್ದು ಕೇವಲ 9 ವರ್ಷಗಳಲ್ಲಿ 37,011 ರೂಟ್ ಕಿಲೋ ಮೀಟರ್ ವಿದ್ಯುದೀಕರಣ ಮಾಡಲಾಗಿದೆ. ಜೂನ್ 30 2023ರ ಹೊತ್ತಿಗೆ 59,096 ರೂಟ್ ಕಿಲೋ ಮೀಟರ್ ವಿದ್ಯುದೀಕರಣಗೊಂಡಿದೆ. ಇನ್ನು ಕೆಲವೇ ದಿನಗಳ ಶೇಕಡ 100 ರಷ್ಟು ರೈಲ್ವೇ ಹಳಿ ವಿದ್ಯುದೀಕರಣಗೊಳ್ಳಲಿದೆ. ಡೀಸೆಲ್ ಇಂಜಿನ್ ನಿರ್ವಹಣಾ ವೆಚ್ಚಕ್ಕೆ ಹೋಲಿಸಿದರೆ ವಿದ್ಯುತ್ ಚಾಲಿತ ರೈಲು ಎಂಜಿನ್ ಗಳ ನಿರ್ವಹಣಾ ವೆಚ್ಚ 50ರಷ್ಟು ತಗ್ಗಲಿದೆ.

ಸ್ವದೇಶಿ ನಿರ್ಮಿತ ಅತ್ಯಾಧುನಿಕ ಸೌಲಭ್ಯಗಳುಳ್ಳ ಹೈ ಸ್ಪೀಡ್ ವಂದೇ ಭಾರತ್ ರೈಲುಗಳ ಬಗ್ಗೆ ನೀವೀಗಾಗಲೇ ತಿಳಿದಿದ್ದೀರಿ. ದೇಶಾದ್ಯಂತ 34 ಟ್ರೈನ್ ಗಳು ಭಾರತದಾದ್ಯಂತ ಸಂಚರಿಸುತ್ತಿವೆ. ಮುಂದಿನ ದಿನಗಳ ಇವುಗಳ ಲಭ್ಯತೆ ಸಾಮಾನ್ಯ ರೈಲಿನಂತೆ ದೊರತರೆ ಅತಿಶಯೋಕ್ತಿಯೇನಲ್ಲ. ಅದಕ್ಕೂ ಮುಂದುವರೆದು 180 ಕಿಮೀ ವೇಗದಲ್ಲಿ ಸಂಚರಿಸಬಲ್ಲ ಪ್ರಾದೇಶಿಕ ರೈಲು ಸೇವೆ ರ್ಯಾಪಿಡೆಕ್ಸ್ “ನಮೋ ಭಾರತ್” ಟ್ರೈನ್ಗಳನ್ನೂ ದೇಶಕ್ಕಾಗಿ ಮೋದಿ ಕೆಲವೇ ದಿನಗಳ ಹಿಂದೆ ಸಮರ್ಪಿಸಿದ್ದಾರೆ. ಮೊದಲ ಹಂತವಾಗಿ 30 ಸಾವಿರ ಕೋಟಿ ಬಂಡವಾಳದಲ್ಲಿ ದೆಹಲಿ – ಗಾಜಿಯಾಬಾದ್ – ಮೀರತ್ ರ್ಯಾಪಿಡೆಕ್ಸ್ ಮಾರ್ಗವನ್ನ ಅಭಿವೃದ್ದಿ ಪಡಿಸಲಾಗಿದೆ. ಇಷ್ಟೇ ಅಲ್ಲ ಯಾವುದೇ ರೈಲಿನ ಒಳಗಡೆ ಸಿಗುವ ಸೇವೆಗಳು, ಆಹಾರ, ಟಿಕೆಟ್ ಬುಕ್ಕಿಂಗ್, ಗ್ರಾಹಕರ ಸಮಸ್ಯೆಗಳಿಗೆ ಸ್ಪಂದಿಸುವ ರೀತಿ ಎಲ್ಲಾ ಥರದಲ್ಲೂ ರೈಲ್ವೆ ಇಲಾಖೆ ಪ್ರಯಾಣಿಕರ ಮೆಚ್ಚುಗೆಗೆ ಪಾತ್ರವಾಗುತ್ತಿದೆ. ಇದೆಲ್ಲದರ ಹಿಂದೆ ರೈಲ್ವೇ ಸಚಿವರಾಗಿ ದುಡಿದ ಪಿಯೂಶ್ ಗೋಯೆಲ್, ಸುರೇಶ್ ಪ್ರಭು, ಮತ್ತು ಈಗಿನ ರೈಲ್ವೇ ಸಚಿವರಾದ ಅಶ್ವಿನ್ ವೈಷ್ಣವ್ ರವರ ಅವಿತರ ಶ್ರಮವಿದೆ.

ರಸ್ತೆ – ರೈಲುಗಳಂತೆ ಮೋದಿ ಸಾಧನೆಗಳು ಸಹ ಸಾಲು ಸಾಲಾಗಿವೆ. ನಮ್ಮ ಅರಿವಿಗೆ ಬಾರದಂತೆ ಹಲವು ಬದಲಾವಣೆಗಳಾಗಿವೆ. ದೇಶ ಬದಲಾಗುತ್ತಿದೆ ನಾವು ಬದಲಾಗಬೇಕಿದೆ. ಆದರೆ ಸರ್ಕಾರ ಮಾತ್ರ ಬದಲಾಗದೇ ಹಾಗೇ ಇರಬೇಕಿದೆ, ಅದು ನಿಮ್ಮ ಕೈಯಲ್ಲಿದೆ. ಇಷ್ಟೆಲ್ಲ ಹೇಳಿದ ಮೇಲೂ ನಿಮ್ಮಲ್ಲಿ ಅಪೂರ್ಣ ಭಾವ ಉಳಿದಿದೆಯೆಂದರೆ ನನಗೆ ಗೊತ್ತು ನೀವು ಬುಲೆಟ್ ಟ್ರೈನ್ ಬಗ್ಗೆ ಯೋಚಿಸುತ್ತಿದ್ದೀರೆಂದು. ಮುಂಬೈ – ಅಹಮದಾಬಾದ್ ಬುಲೆಟ್ ಟ್ರೈನ್ ಯೋಜನೆ ಸಹ ಶರವೇಗದಲ್ಲಿ ನಡೆಯುತ್ತಿದೆ. ಶೀಘ್ರದಲ್ಲೇ ನೀವು ಅದರ ಅನುಭವವನ್ನೂ ಪಡೆಯಲಿದ್ದೀರಿ….ಆದರೆ ಆ…ಸ್ಪೀಡ್ ಟ್ರೈನ್ ಗೆ ಕಲ್ಲು ಎಸೆಯಲು ಸಾಧ್ಯವಾ ಎಂಬುದು ನನಗಿನ್ನೂ ಗೊತ್ತಿಲ್ಲ.

ನವೀನ್ ಕುಮಾರ್ ಬಿ. ಸಿ, ನಮೋ ಬ್ರಿಗೇಡ್

Post a Comment