
ಆದರಣೀಯ ಮೋದಿಜಿ,
ಮೊದಲನೆಯದಾಗಿ G20 ಸಮಾವೇಶದ ಮೂಲಕ ಭಾರತದ ಗೌರವವನ್ನು ವಿಶ್ವದ ವೇದಿಕೆಯಲ್ಲಿ ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದದಕ್ಕೆ ಎಲ್ಲ ದೇಶವಾಸಿಗಳ ಪರವಾಗಿ ಧನ್ಯವಾದಗಳು. ಇದೇ ಸೆಪ್ಟೆಂಬರ್17 ಕ್ಕೆ ಎಪ್ಪತ್ಮೂರನೇ ವರ್ಷಕ್ಕೆ ಕಾಲಿಡುತ್ತಿದ್ದೀರಿ. ಕಳೆದ ಹತ್ತು ವರ್ಷಗಳಿಂದ ವಿಶ್ರಾಂತಿಯನ್ನೇ ತೆಗೆದುಕೊಳ್ಳದೇ ದಿನಕ್ಕೆ 18 ಗಂಟೆಗಳ ಕಾಲ ನಮಗಾಗಿ ಕೆಲಸ ಮಾಡಿದ್ದೀರಿ. ಬಹುಶಃ ಇದೇ ಕಾರಣಕ್ಕಾಗಿ ಯಾವ ರಾಜಕಾರಣಿಯೂ ಕೇಳದಷ್ಟು ಬೈಗುಳಗಳನ್ನು ರಾಜಕೀಯ ವಿರೋಧಿಗಳಿಂದ ಕೇಳಿದ್ದೀರಿ ಮತ್ತು ಬೈಗುಳದ ಸಾವಿರಪಟ್ಟು ಹೆಚ್ಚು ಪ್ರೀತಿಯನ್ನು ಜನಸಾಮಾನ್ಯರಿಂದ ಪಡೆದಿದ್ದೀರಿ. ರಾಜಕೀಯದ ಗಂಧಗಾಳಿಯೂ ಕೇಳಿರದ ಮಕ್ಕಳೂ ಟಿವಿಯ ಪರದೆಯ ಮೇಲೆ ನಿಮ್ಮನ್ನು ನೋಡಿದರೆ ‘ಮೋದಿ ತಾತ’ ಅಂತ ಖುಷಿಪಡುತ್ತಾರಂದ್ರೆ ನಿಮ್ಮಲ್ಲಿ ಅದೇನೋ ದೈವಿಕ ಶಕ್ತಿ ಇರಲೇಬೇಕು.
ಈ ಹತ್ತು ವರ್ಷದಲ್ಲಿ ನಮ್ಮೆಲ್ಲರ ಅಭಿವೃದ್ಧಿಯ ಕಲ್ಪನೆಯನ್ನೇ ಬದಲಿಸಿ ಬಿಟ್ಟಿದ್ದೀರಿ. ದೇಶದೊಳಗಿನ ರಸ್ತೆಗಳು ಮಾತ್ರವಲ್ಲ ಗಡಿಯ ರಸ್ತೆಗಳೂ ಈಗ ಮಜುಬೂತಾಗಿವೆ. ಹವಾಯಿ ಚಪ್ಪಲಿ ಹಾಕುವ ಜನ ಈಗ ವಿಮಾನದಲ್ಲಿ ಓಡಾಡುವ ವಾತಾವರಣ ನಿರ್ಮಾಣವಾಗುತ್ತಿದೆ. ಉಜ್ಜಯಿನಿ, ಕಾಶಿ, ಅಯೋಧ್ಯೆಯಂತಹ ಆಧ್ಯಾತ್ಮಿಕ ಕ್ಷೇತ್ರಗಳು ಪುನರುತ್ಥಾನಗೊಂಡಿವೆ. ರಾಜ್ಯ ಸಭೆಯಲ್ಲಿ ಡಿಜಿಟಲ್ ವಹಿವಾಟಿನ ಬಗ್ಗೆ ಕುಹಕವಾಡಿದ್ದ ಚಿದಂಬರಂ ಸಹ ಈಗ ಫೋನ್ ಪೇ, ಗೂಗಲ್‌ಪೇ ಮಾಡುತ್ತಿದ್ದಾರೆ. ಬ್ಯಾಂಕನ್ನೇ ನೋಡಿರದ ಹಳ್ಳಿಯ ಜನಗಳ ಬಳಿ ಈಗ ಜನಧನ ಖಾತೆ ಇವೆ. ಇನ್ನು ಶಾಲೆಯ ಚಿಕ್ಕ ಮಗೂ ಸಹ ಸ್ವಚ್ಛ ಭಾರತದ ಬಗ್ಗೆ ಪಾಲಕರಿಗೆ ಹೇಳುತ್ತಿದ್ದಾರೆ. ಹಾ! ಜನರ ಮನಸ್ಥಿತಿಯಲ್ಲೂ ಎಷ್ಟೆಲ್ಲ ಬದಲಾವಣೆ ತಂದಿದ್ದೀರಿ ನೀವು. ಮೊದಲೆಲ್ಲ ಜೆಎನ್‌ಯು ವಿಶ್ವವಿದ್ಯಾಲಯದಲ್ಲೇ ಭಾರತವನ್ನು ತುಂಡರಿಸುವ ಘೋಷಣೆಗಳು ಕೇಳಿಬರುತ್ತಿದ್ದವು, ಈಗ ಕಾಶ್ಮೀರದಲ್ಲೇ ಕೃಷ್ಣ ಜನ್ಮಾಷ್ಟಮಿಯನ್ನು ಸಂಭ್ರಮಿಸುತ್ತಿದ್ದಾರೆ. ಭಾರತೀಯರ ನೆಮದಿಯನ್ನು ಕಂಡ POKಯ ಜನ ಸಹ ನಮ್ಮನ್ನು ಸೇರಿಸಿಕೊಳ್ಳಿರೆಂದು ಗೋಗರೆಯುತ್ತಿದ್ದಾರೆ. ಭಾರತದ ಅಂತಃಸತ್ವದ ತಾಕತ್ತನ್ನು ಪರಿಚಯಿಸಿದ ನಿಮಗೆ ಅನಂತ ಅಭಿನಂದನೆಗಳು.
ಕೆಲ ವರ್ಷಗಳ ಹಿಂದೆ ಭಾರತ ವಿಶ್ವಗುರು ಆಗುತ್ತದೆ ಎಂದು ಕನಸು ಕಟ್ಟಿಕೊಂಡಿದ್ದೆವು. ನಮ್ಮ ಕಾಲದಲ್ಲೇ ಅದನ್ನು ಸಾಕಾರಗೊಳಿಸಿದ್ದೀರಿ. ದೇಶವೇ ಮನೆ, ಭಾರತೀಯರೇ ಕುಟುಂಬ ಎಂದು ಬದುಕುತ್ತಿರುವ, ಕಳೆದ ಹತ್ತು ವರ್ಷದಿಂದ ರಜೆ ತೆಗೆದುಕೊಳ್ಳದ ದಣಿವರಿಯದ ಜೀವ ನಿಮ್ಮದು . ವರ್ಷಕ್ಕೊಮ್ಮೆ ಜನ್ಮದಿನಕ್ಕೆ ಮಾತ್ರ ತಾಯಿಯ ಆಶೀರ್ವಾದಕ್ಕೆಂದು ಮನೆಗೆ ಹೋಗುತ್ತಿದ್ದಿರಿ. ಆ ಮಹಾತಾಯಿ ನಿಮ್ಮ ತಲೆಯ ಮೇಲೆ ಕೈಯಿಟ್ಟು ಆಶೀರ್ವದಿಸುವ ಫೋಟೋಗಳು ಆಪ್ಯಾಯಮಾನವಾಗಿದ್ದವು. ಈ ಬಾರಿ ಮನೆಯಲ್ಲಿ ತಾಯಿಯೂ ಇಲ್ಲ. ಚಿಂತಿಸಬೇಡಿ ದೇಶದ ಮನೆ ಮಗನಿಗೆ ಈ ನೆಲದ ಪ್ರತಿ ತಾಯಿಯ ಆಶೀರ್ವಾದ, ಹಾರೈಕೆ ಇದ್ದೇ ಇರುತ್ತದೆ. ನಮ್ಮ ಆಯಸ್ಸೂ ಭಗವಂತ ನಿಮಗೆ ಕೊಟ್ಟು ಮತ್ತಷ್ಟು ದೇಶ ಸೇವೆಗೆ ಹರಸಲಿ. ತಾಯಿ ಭಾರತಿಯ ಪುನರ್ ವೈಭವ ಮತ್ತೆ ನಾವು ನೋಡುವಂತಾಗಲಿ ಎಂಬುದಷ್ಟೇ ನಮ್ಮ ಪ್ರಾರ್ಥನೆ. ಅದರ ಸಾಕಾರಕ್ಕಾಗಿ ನಿಮ್ಮ ಜೊತೆ ನಾವಿದ್ದೇವೆ.
ಮತ್ತೊಮ್ಮೆ ಹ್ಯಾಪಿ ಬರ್ತಡೆ ಮೋದಿಜಿ.
ನಿಮ್ಮ ಪ್ರೀತಿಯ
ಕನ್ನಡಿಗ.
Post a Comment