ಬಡವರ ತಲೆಗೊಂದು ಸೂರುಕೊಟ್ಟ ಮೋದಿ

ನಗರಗಳಲ್ಲಿ ಅದೆಷ್ಟೋ ಲಕ್ಷ ಲಕ್ಷ ಜನ ಸಂದಿಗೊಂದಿಯಲ್ಲಿ, ಸ್ಲಮ್ ಗಳಲ್ಲಿ, ರೈಲ್ವೇ ಟ್ರಾಕ್ ಪಕ್ಕದಲ್ಲೆಲ್ಲ ಯಾವುದೋ ಅಪಾರ್ಟ್ ಮೆಂಟ್ ಕಟ್ಟಲೆಂದು ಉಪಯೋಗಿಸಿದ ಖಾಲಿ ಸಿಮೆಂಟ್ ಚೀಲದಲ್ಲಿ ಮನೆಯಂತೆ ಮಾಡಿಕೊಂಡು ಅದರಲ್ಲೇ ವಾಸ ಮಾಡಿಕೊಂಡು ಇರುವುದನ್ನು ನಾವು ಅದೆಷ್ಟೋ ಬಾರಿ ಕಂಡಿದ್ದೇವೆ. ನಾವು ಚಿಕ್ಕಂದಿನಲ್ಲಿರುವಾಗ ಆಡಲೆಂದು ಕಟ್ಟಿಕೊಳ್ಳುತ್ತಿದ್ದ ಆಟಿಕೆಯ ಮನೆಯಾದರೂ ಇನ್ನಷ್ಟು ಗಟ್ಟಿ ಹಾಗೂ ಚೆನ್ನಾಗಿರುತ್ತಿತ್ತೋ ಏನೋ. ಹೀಗೆ ಜೋರು ಮಳೆ ಮತ್ತು ಗಾಳಿ ಬಂದರೆ ತಲೆಯ ಮೇಲೆಯೇ ಬೀಳುವಷ್ಟು ದುರ್ಬಲ ಜೋಪಡಿಗಳಲ್ಲಿ ಬದುಕುತ್ತಿದ್ದ ಅದೆಷ್ಟೋ ಕೋಟಿ ಜನರಿಗೆ ಇಂದು ಮೋದಿ ಸರ್ಕಾರದ ಪ್ರಧಾನಮಂತ್ರಿ ಆವಾಸ ಯೋಜನೆಯು ತಲೆಯ ಮೇಲೊಂದು ಗಟ್ಟಿ ಸೂರನ್ನು ಒದಗಿಸಿದೆ. ಕೋಟಿ ಕೋಟಿ ಜನ ಇಂದು ಈ ಯೋಜನೆಯ ಕಾರಣದಿಂದಾಗಿ ತಮ್ಮ ಕನಸಿನ ಮನೆಯನ್ನು ಪಡೆದು ನೆಮ್ಮದಿಯನ್ನು ಹೊಂದಿದ್ದಾರೆ. ಕೇವಲ ನಗರದ ಬಡವರಷ್ಟೇ ಅಲ್ಲದೇ, ಗ್ರಾಮೀಣ ಪ್ರದೇಶದಲ್ಲಿನ ಬಡವರಿಗೂ ಕೂಡ ಈ ಯೋಜನೆಯ ಮೂಲಕ ಮನೆಯನ್ನು ಕಟ್ಟಿಕೊಳ್ಳಲು ಸಹಾಯ ನೀಡಲಾಗಿದೆ. ಈ ಮೂಲಕ ಕೋಟ್ಯಂತರ ಬಡ ಭಾರತೀಯರ ಕನಸು ಮೋದಿ ಸರ್ಕಾರದ ಕೊಡುಗೆಯ ರೂಪದಲ್ಲಿ ನನಸಾಗಿದೆ.
೨೦೧೫ರಲ್ಲಿ ಚಾಲನೆಗೊಂಡ ಪ್ರಧಾನಮಂತ್ರಿ ಆವಾಸ ಯೋಜನೆಯು ಪ್ರಧಾನಮಂತ್ರಿ ಆವಾಸ ಯೋಜನೆ (ನಗರ) ಮತ್ತು ಪ್ರಧಾನಮಂತ್ರಿ ಆವಾಸ ಯೋಜನೆ (ಗ್ರಾಮೀಣ) ಎಂಬ ಎರಡು ವಿಭಾಗಗಳಲ್ಲಿ ಕಾರ್ಯರೂಪಕ್ಕೆ ಬಂದಿದೆ. ಅತ್ಯಂತ ಕಡಿಮೆ ಅವಧಿಯಲ್ಲಿ ಸೂಕ್ತ ಫಲಾನುಭವಿಗಳನ್ನು ಆಯ್ಕೆ ಮಾಡಿ, ವೈಜ್ಞಾನಿಕ ವಿಧಾನಗಳ ಮೂಲಕ, ಅತ್ಯಂತ ಕಡಿಮೆ ವೆಚ್ಚದಲ್ಲಿ ಮನೆಯನ್ನು ಕಟ್ಟಿಕೊಡಲಾಗಿದೆ. ಈ ಯೋಜನೆಯ ಪ್ರಕಾರ ಅತಿ ಬಡವರು ಮತ್ತು ಮಧ್ಯಮ ವರ್ಗದವರು ೬.೫ ಶೇಕಡಾ ಬಡ್ಡಿದರದಲ್ಲಿ ಹನ್ನೆರಡು ಲಕ್ಷಗಳವರೆಗೂ ಸಾಲವನ್ನು ಪಡೆಯಬಹುದಾಗಿದೆ. ಇದಕ್ಕೆ ಕೇಂದ್ರ ಸರ್ಕಾರವು ಸಹಾಯಧನವನ್ನು ನೀಡುತ್ತದೆ. ಇದರಲ್ಲಿ ಪ್ರಧಾನಮಂತ್ರಿ ಆವಾಸ ಯೋಜನೆಯ (ನಗರ) ಯೋಜನೆಯ ಮೂಲಕ ಇದುವರೆಗೆ ೧೧೮.೬೩ ಲಕ್ಷ ಮನೆಗಳು ಮಂಜೂರಾಗಿವೆ. ೧೧೪.೦೧ ಲಕ್ಷ ಮನೆಗಳು ಆರಂಭಗೊಂಡಿವೆ. ಅಷ್ಟೇ ಅಲ್ಲ, ೮೦.೦೨ ಲಕ್ಷ ಮನೆಗಳು ಪೂರ್ಣಗೊಂಡು ಫಲಾನುಭವಿಗಳಿಗೆ ಹಸ್ತಾಂತರಿಸಲ್ಪಟ್ಟಿವೆ. ಎರಡು ಲಕ್ಷ ಕೋಟಿಗಳಷ್ಟು ಹಣವನ್ನು ಕೇಂದ್ರ ಸರ್ಕಾರವು ಈ ಯೋಜನೆಯ ಮೂಲಕ ನೀಡಲು ಬದ್ಧವಾಗಿದೆ. ಈಗಾಗಲೇ ಸುಮಾರು ಒಂದೂವರೆ ಲಕ್ಷ ಕೋಟಿಗಳಷ್ಟು ಮೊತ್ತದ ಸಹಾಯಧನವನ್ನು ಕೇಂದ್ರವು ಬಿಡುಗಡೆ ಮಾಡಿದೆ. ಒಟ್ಟೂ ಎಂಟು ಲಕ್ಷ ಕೋಟಿಗಳಷ್ಟು ಮೊತ್ತವನ್ನು ಈ ಯೋಜನೆಗಾಗಿ ಹೂಡಲು ನಿರ್ಧರಿಸಲಾಗಿದೆ.
ಈ ವರ್ಷದ ಮಧ್ಯಂತರ ಬಜೆಟ್ ನಲ್ಲಿ ದೇಶದ ಆರ್ಥಿಕ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಮಧ್ಯಮ ವರ್ಗದ ಕುಟುಂಬಗಳಿಗೆ ಹೌಸಿಂಗ್ ಸ್ಕೀಮ್ ಯೋಜನೆಯಡಿ ಮನೆ ಕಟ್ಟುವ ಅಥವಾ ಖರೀದಿಸಲು ಕೇಂದ್ರ ಸರ್ಕಾರ ನೆರವು ನೀಡಲಿದೆ. ಕೈಗೆಟುಕುವ ದರದಲ್ಲಿ ಮನೆ ಖರೀದಿ ಅಥವಾ ಮನೆ ಕಟ್ಟಲು ಈ ಬಾರಿಯ ಬಜೆಟ್‌ನಲ್ಲಿ ಕೆಲ ಅನುಕೂಲತೆಗಳನ್ನು ಮಾಡಲಾಗಿದೆ. ಪ್ರಧಾನಿ ಮಂತ್ರಿ ಆವಾಸ್ ಯೋಜನೆ (ಗ್ರಾಮೀಣ) ಹಾಗೂ ಪ್ರಧಾನ ಮಂತ್ರಿ ಅವಾಸ್ ಯೋಜನೆ (ನಗರ) ಯೋಜನೆಗಳ ಮೂಲಕ ಈ ಮನೆ ಕನಸು ನನಸಾಗಿಸಲು ಯೋಜನೆ ರೂಪಿಸಲಾಗಿದೆ ಎಂದು ಘೋಷಿಸಿದ್ದಾರೆ. ಅಷ್ಟೇ ಅಲ್ಲದೇ, ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಅಡಿಯಲ್ಲಿ ಈಗಾಗಲೇ 3 ಕೋಟಿ ಮನೆಗಳನ್ನು ನಿರ್ಮಾಣ ಮಾಡಲಾಗಿದೆ. ಮುಂದಿನ 5 ವರ್ಷದಲ್ಲಿ 2 ಕೋಟಿ ಮನೆ ನಿರ್ಮಾಣವಾಗಲಿದೆ ಎಂದೂ ತಿಳಿಸಿದ್ದಾರೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆ ಹಣಕಾಸನ್ನು ಶೇಕಡಾ 66ರಿಂದ 79,000 ಕೋಟಿ ರೂಪಾಯಿಗೆ ಏರಿಕೆ ಮಾಡಲಾಗಿದೆ. ಇದರ ಪೈಕಿ 25,103 ಕೋಟಿ ರೂಪಾಯಿ ಹಣವನ್ನು ಪ್ರಧಾನಮಂತ್ರಿ ಅವಾಸ್ ನಗರ ಯೋಜನೆಗೆ ಮೀಸಲಿಡಲಾಗಿದೆ. ಇನ್ನುಳಿದ ಹಣವನ್ನು ಪ್ರಧಾನ ಮಂತ್ರಿ ಗ್ರಾಮೀಣ ಯೋಜನೆಗೆ ಮೀಸಲಿಡಲಾಗಿದೆ.
ತ್ವರಿತವಾಗಿ ಭಾರತವನ್ನು ಗುಡಿಸಲು ಮುಕ್ತವಾಗಿಸುವ ದೂರದೃಷ್ಟಿಯ ಮತ್ತು ಅಷ್ಟೇ ವಾಸ್ತವದ ನೆಲೆಯಲ್ಲಿ ಸಾಗುತ್ತಿರುವ ಒಂದು ಬೃಹತ್ ಯೋಜನೆ ಇದಾಗಿದೆ. ಪ್ರಪಂಚದಲ್ಲಿಯೇ ಇಷ್ಟೊಂದು ದೊಡ್ಡ ಆವಾಸ್ ಯೋಜನೆ ಮತ್ತೊಂದಿಲ್ಲ ಎಂಬ ಹೆಗ್ಗಳಿಕೆ ಇದರದ್ದು. ಈ ಯೋಜನೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನವನ್ನು ಉಪಯೋಗಿಸಿ, ವೆಚ್ಚವನ್ನು ಕಡಿತಗೊಳಿಸಲಾಗಿದೆ. ಇಪ್ಪತ್ತೈದು ಲಕ್ಷಕ್ಕೂ ಹೆಚ್ಚು ಫಲಾನುಭವಿಗಳಿಗೆ ಗೃಹಸಾಲದ ಸಹಾಯಧನದ ರೂಪದಲ್ಲಿ ೫೮,೮೬೮ ಕೋಟಿಗಳನ್ನು ಕೇಂದ್ರಸರ್ಕಾರವು ವಿನಿಯೋಗಿಸಿದೆ. ಈ ಯೋಜನೆಯ ಮೂಲಕ ನೇರವಾಗಿ ಹಾಗೂ ಪರೋಕ್ಷವಾಗಿ ಮೂರು ಕೋಟಿಗೂ ಹೆಚ್ಚು ಉದ್ಯೋಗ ಸೃಷ್ಟಿಯಾಗಿದೆ ಎಂದು ಕೇಂದ್ರ ಸರ್ಕಾರದ ಅಂಕಿಅಂಶಗಳು ತಿಳಿಸುತ್ತವೆ. ಈ ಯೋಜನೆಯ ವೈಶಿಷ್ಟ್ಯವೆಂದರೆ ಮನೆಗಳ ಯಾಜಮಾನ್ಯವನ್ನು ಮಹಿಳೆಯರಿಗೆ ಬಿಟ್ಟುಕೊಡುವುದು. ಅಂದರೆ ಮಹಿಳೆಯರ ಹೆಸರಿನಲ್ಲಿ ಮನೆಗಳನ್ನು ಕಟ್ಟಿಸಲಾಗುತ್ತದೆ. ಆ ಮೂಲಕ ಸ್ತ್ರೀ ಸಬಲೀಕರಣವೂ ಕೂಡ ಈ ಯೋಜನೆಯ ಮೂಲಕ ನಡೆಯುತ್ತಿದೆ.

ಸರ್ಕಾರದ ಬೇರೆ ಬೇರೆ ಯೋಜನೆಗಳ ಮೂಲಕ ಈ ಯೋಜನೆಯನ್ನು ಕೂಡಿಸಲಾಗಿದೆ. ಉದಾಹರಣೆಗೆ ಸಹಾಯಧನವನ್ನು ಫಲಾನುಭವಿಗಳಿಗೆ ತಲುಪಿಸಲು ಜನ್ ಧನ್ ಅಕೌಂಟುಗಳನ್ನು ಬಳಸಿಕೊಳ್ಳಲಾಗುತ್ತಿದೆ. ಈ ಮೂಲಕ ನೇರವಾಗಿ ಫಲಾನುಭವಿಗಳಿಗೆ ಸಹಾಯಧನವು ತಲುಪುತ್ತಿದೆ. ಅದೇ ರೀತಿಯಲ್ಲಿ ಸ್ವಚ್ಛ ಭಾರತ್ ಯೋಜನೆಯು ಕೂಡ ಈ ಯೋಜನೆಯೊಂದಿಗೆ ಕೂಡಿಕೊಂಡಿದೆ. ಈ ಯೋಜನೆಯ ಫಲಾನುಭವಿಗಳನ್ನು ಅತಿ ಬಡವರು, ಆರ್ಥಿಕವಾಗಿ ದುರ್ಬಲರು ಮತ್ತು ಮಧ್ಯಮವರ್ಗದವರೆಂದು ವಿಭಾಗಿಸಲಾಗಿದೆ. ಇದರಲ್ಲಿ ಕಡು ಬಡವರಿಗೆ ಹನ್ನೆರಡು ಲಕ್ಷ ರೂಪಾಯಿಗಳವರೆಗೂ ಸಾಲ ಸೌಲಭ್ಯವು ಅತಿ ಕಡಿಮೆ ಬಡ್ಡಿದರದಲ್ಲಿ ದೊರೆಯುತ್ತದೆ. ಹೀಗೆ ಸ್ವಾತಂತ್ರ್ಯಾನಂತರ ಇದೇ ಮೊದಲ ಬಾರಿಗೆಂಬಂತೆ ಯಾವುದೇ ಹಗರಣವೇ ಇಲ್ಲದೇ ಇಷ್ಟೊಂದು ದೊಡ್ಡ ಮಟ್ಟದ ಯೋಜನೆಯೊಂದು ವ್ಯವಸ್ಥಿತವಾಗಿ ನಡೆಯುತ್ತಿದೆ ಎಂದರೆ ಅದಕ್ಕೆ ಮೋದಿ ಸರ್ಕಾರದ ಪಾರದರ್ಶಕತೆ, ಪ್ರಾಮಾಣಿಕವಾದ ಕಾರ್ಯ, ಲಕ್ಷ್ಯದತ್ತ ನಿಷ್ಠೆಯೇ ಕಾರಣ ಎನ್ನಬಹುದು.
ಈ ಯೋಜನೆಯಲ್ಲಿ ಕಾರ್ಯನಿರ್ವಹಿಸಿ ಅನುಭವ ಹೊಂದಿರುವ, ಇತ್ತೀಚೆಗಷ್ಟೇ ಸೇವಾ ನಿವೃತ್ತರಾಗಿರುವ ಅಮರಜೀತ್ ಸಿನ್ಹಾ ಅವರು ಬರೆಯುವಂತೆ, ಈ ಹಿಂದೆಯೂ ದೊಡ್ಡ ಪ್ರಮಾಣದಲ್ಲಿ ಗೃಹನಿರ್ಮಾಣ ಯೋಜನೆಗಳನ್ನು ಸರ್ಕಾರದಿಂದ ತರಲು ಉದ್ದೇಶಿಸಲಾಗಿತ್ತಾದರೂ ಅವ್ಯಾವುದೂ ಯಶಸ್ವಿಯಾಗಿರಲಿಲ್ಲ. ಉದಾಹರಣೆಗೆ ಇಂದಿರಾ ಆವಾಸ್ ಯೋಜನೆಯು ಕೂಡ ಅದರ ಜಾರಿಯಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಿ, ಕೊನೆಗೂ ಅದು ಯಶಸ್ವಿಯಾಗಿರಲಿಲ್ಲ. ಆದರೆ ಮೋದಿ ಸರ್ಕಾರ ಬಂದ ಮೇಲೆ ಪ್ರಾರಂಭಿಸಿದ ಪ್ರಧಾನಮಂತ್ರಿ ಆವಾಸ ಯೋಜನೆಯು ಅದರ ದೂರದರ್ಶಿತ್ವ ಹಾಗೂ ಅದನ್ನು ಜಾರಿಗೆ ತರುವಲ್ಲಿನ ನವೀನ ಉಪಕ್ರಮಗಳು, ದಿಟ್ಟ ಸಂಕಲ್ಪಶಕ್ತಿ, ತಂತ್ರಜ್ಞಾನದ ಬಳಕೆ, ಹಣದ ನೇರವಾದ ಜಮೆ, ಅತ್ಯಂತ ಕಡಿಮೆ ವೆಚ್ಚ, ನಿಜವಾದ ಫಲಾನುಭವಿಗಳ ಹುಡುಕಾಟ ಇಂಥ ಅನೇಕ ಹತ್ತು ಹಲವು ಪ್ರಾಮಾಣಿಕ ಹೆಜ್ಜೆಗಳ ಮೂಲಕ ಈ ಯೋಜನೆಯು ಬಹುಬೇಗ ಕೋಟ್ಯಧಿಕ ಜನರಿಗೆ ತಲೆಯ ಮೇಲೊಂದು ಸೂರನ್ನು ಒದಗಿಸುವಲ್ಲಿ ಯಶಸ್ವಿಯಾಗಿದೆ ಎಂದು ಅವರು ತಮ್ಮ ಅನುಭವವನ್ನು ಹಂಚಿಕೊಳ್ಳುತ್ತಾರೆ.
ಈ ಯೋಜನೆಯು ಜಾರಿಗೆ ಬಂದ ಹೊಸತರಲ್ಲಿ ಒಟ್ಟೂ ನಲವತ್ತು ಮಿಲಿಯನ್ ಜನರ ವಿವರವನ್ನು ದೃಢೀಕರಣಕ್ಕಾಗಿ ಗ್ರಾಮಸಭೆಗಳಿಗೆ ಕಳಿಸಲಾಯಿತು. ಅವುಗಳಲ್ಲಿ ಅನೇಕ ದೋಷಗಳಿಂದ ಕೂಡಿದ್ದವರನ್ನು ಕೈಬಿಟ್ಟು ಒಟ್ಟೂ ಇಪ್ಪತ್ತೈದು ಮಿಲಿಯನ್ ಜನ ಯೋಗ್ಯ ಫಲಾನುಭವಿಗಳನ್ನು ಆರಿಸಲಾಯಿತು. ಅದೇ ಸಮಯದಲ್ಲಿ ನುರಿತ ಎಂಜಿನಿಯರ್ ಗಳನ್ನು ಬೇರೆ ಬೇರೆ ರಾಜ್ಯಗಳಿಗೆ ಕಳುಹಿಸಿ ಅಲ್ಲಿನ ಸ್ಥಿತಿಗಳನ್ನು ಅಧ್ಯಯನ ಮಾಡಿಸಿ, ಮಾಹಿತಿಯನ್ನು ಪಡೆಯಲಾಯಿತು. ಆಮೇಲೆ ಕ್ಯಾಬಿನೆಟ್ ಅಂಗೀಕಾರವನ್ನು ಪಡೆಯಲಾಯಿತು. ಇದರಲ್ಲಿ ಎಂ ನರೇಗಾ ಯೋಜನೆಯಡಿ ಮನೆ ಕಟ್ಟಿಸಲು ಶ್ರಮಿಕರನ್ನು ಬಳಸಿಕೊಂಡು ಅವರಿಗೂ ಉದ್ಯೋಗವನ್ನು ಒದಗಿಸಲಾಯಿತು. ಸ್ವಚ್ಛ ಭಾರತ್ ಯೋಜನೆಯ ಮೂಲಕ ಶೌಚಾಲಯಗಳನ್ನು ಕಟ್ಟಿಸಿಕೊಡಲಾಯಿತು. ಹೀಗೆ ಪ್ರಧಾನಮಂತ್ರಿ ಆವಾಸ ಯೋಜನೆಯ ಅಡಿಯಲ್ಲಿ ಒಂದು ಅಡುಗೆಮನೆ, ಒಂದು ಶೌಚಾಲಯ, ಒಂದು ಕೋಣೆ ಇರುವ ಮನೆಯನ್ನು ಕಟ್ಟಲು ಯೋಜನೆಯನ್ನು ರೂಪಿಸಿ ಅತ್ಯಂತ ವೇಗವಾಗಿ ಈ ಯೋಜನೆಯು ಜಾರಿಗೆ ಬರಲು ಮೋದಿಯವರ ಇಚ್ಛಾಶಕ್ತಿ ಹಾಗೂ ಮೋದಿ ಸರ್ಕಾರದ ಚುರುಕುತನವೇ ಕಾರಣ ಎಂಬುದನ್ನು ಮತ್ತೆ ಹೇಳಬೇಕಿಲ್ಲ.
ಒಂದು ಹಕ್ಕಿಗೂ ಗೂಡೆಂಬುದಿರುತ್ತದೆ. ಆದರೆ ವಾಸಿಸಲು ಒಂದು ಪುಟ್ಟ ಮನೆಯೂ ಇಲ್ಲದಿದ್ದರೆ ಹೇಗೆ? ಹೀಗೆ ಅಸಹನೀಯವಾದ ರೀತಿಯಲ್ಲಿ ಬದುಕುತ್ತಿರುವವರ ಬದುಕಿಗೆ ನೆರವಾದ ಮೋದಿ ಸರ್ಕಾರಕ್ಕೆ ದೇಶ ಋಣಿಯಾಗಿರುತ್ತದೆ. ಒಂದು ರೂಪಾಯಿಯು ಸರ್ಕಾರದಿಂದ ಪ್ರಜೆಗೆ ತಲುಪುವಾಗ ಹದಿನೈದು ಪೈಸೆ ಆಗಿರುತ್ತದೆ ಎಂದು ಸ್ವತಃ ಪ್ರಧಾನಿಯೇ ಅಸಹಾಯಕತೆ ತೋರುತ್ತಿದ್ದ ಕಾಲವೊಂದಿತ್ತು. ಆದರೆ ಈಗ ನಿಮ್ಮ ಒಂದೇ ಒಂದು ವೋಟು ಕೊಡಿ, ಭಾರತ ಮಾತೆಯನ್ನು ವಿಶ್ವಗುರುವಾಗಿಸುತ್ತೇನೆ ಎಂದು ಶಪಥ ಮಾಡುವ ಮತ್ತು ಹಗಲಿರುಳೂ ಆ ಕನಸಿಗಾಗಿ ದುಡಿಯುವ ಮೋದಿಯಂಥವರ ಕಾಲದಲ್ಲಿ ನಾವಿದ್ದೇವೆ.

ವಿಶ್ವನಾಥ ಸುಂಕಸಾಳ