ಮೋದಿ 3.0 Vs ಖಲಿಸ್ಥಾನಿ 2.0 !

“ರಾಮ ಮಂದಿರದ ಉದ್ಘಾಟನೆಯ ಬಳಿಕ ಮೋದಿಯ ಜನಪ್ರಿಯತೆಯ ಗ್ರಾಫ್ ಮತ್ತಷ್ಟು ಏರಿದೆ. ಚುನಾವಣೆಗೆ ಇನ್ನೂ ಕೆಲವೇ ದಿನ ಇದೆ. ಹೇಗಾದರೂ ಮಾಡಿ ಮೋದಿಯ ಜನಪ್ರಿಯತೆಯನ್ನು ಕುಗ್ಗಿಸಬೇಕು, ಅದಕ್ಕೆ ಈ ಆಂದೋಲನ ಒಳ್ಳೆಯ ಅವಕಾಶ” – ಈ ಮಾತು ಹೇಳಿದ್ದು ರೈತ ಮುಖಂಡ ಜಗಜಿತ್ ಸಿಂಗ್ ಎಂಬಾತ. ಮತೊಬ್ಬ ನಾಯಕ “ಕಳೆದ ಸಾರಿ ಹೇಗೋ ಬಚಾವ್ ಆದ, ಈ ಬಾರಿ ಮೋದಿ ಪಂಜಾಬಿಗೆ ಬಂದರೆ ಖಂಡಿತ ಆತ ಜೀವಂತವಾಗಿ ಹೋಗುವುದಿಲ್ಲ” ಎಂದು ಬೆದರಿಕೆ ಹಾಕಿದ್ದಾನೆ. ಇವೆಲ್ಲವನ್ನೂ ನೋಡಿದಾಗ ದೆಹಲಿಯಲ್ಲಿ ನಡೆಯುತ್ತಿರುವ ಹೋರಾಟ ರೈತರಿಗಾಗಿ ನಡೆಸುತ್ತಿರುವ ಆಂದೋಲನವಲ್ಲ, ರಾಜಕೀಯ ಪ್ರೇರಿತವಾದ ಮೋದಿಯ ವಿರುದ್ಧದ ಖಲಿಸ್ತಾನಿಗಳ ಹೋರಾಟ ಮಾತ್ರ ಎಂಬುದು ಖಾತರಿಯಾಗುತ್ತಿದೆ. ಸಾಮಾನ್ಯ ಕೃಷಿಕ ತನ್ನ ಪಾಡಿಗೆ ತಾನು ಹೊಲದಲ್ಲಿ ಬೆವರು ಸುರಿಸುತ್ತಿದ್ದಾನೆ‌. ನಕಲಿ ಹೋರಾಟಗಾರರು ರೈತನ ಹೆಸರಿನಲ್ಲಿ ಶಾಂತಿ ಕದಡುತ್ತಿದ್ದಾರೆ.ದೆಹಲಿಗೆ ಮುತ್ತಿಗೆ ಹಾಕಲು ಹೊರಟವರ ಬೇಡಿಕೆಗಳನ್ನೊಮ್ಮೆ‌ ನೀವೇ ನೋಡಿ‌.

ಎಲ್ಲ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯ(MSP- Minimum Support Price) ಕಾನೂನು ತರಬೇಕು ಎಂಬುದು ಆಂದೋಲನದ ಅತಿ ಪ್ರಮುಖ ಬೇಡಿಕೆ.ಭತ್ತ, ಗೋಧಿ ಸೇರಿದಂತೆ ಹಲವು ಬೇಳೆಕಾಳುಗಳನ್ನು ಅದಾಗಲೇ ಎಂಎಸ್‍ಪಿ ಅಡಿಯಲ್ಲಿ ಸರ್ಕಾರಗಳು ಖರೀದಿಸುತ್ತಿವೆ. ಪಂಜಾಬಿನಲ್ಲಿ ಕಳೆದ ವರ್ಷ ರೈತರು ಬೆಳೆದ 99% ಭತ್ತವನ್ನು ಮತ್ತು 74% ಗೋದಿಯನ್ನು ಕನಿಷ್ಠ ಬೆಂಬಲ ಬೆಲೆ ನೀಡಿ ಸರ್ಕಾರ ಖರೀದಿಸಿದೆ. “ಕನಿಷ್ಠ ಬೆಂಬಲ ಬೆಲೆಯ‌ನ್ನು ಕಾನೂನು ರೀತಿ ತರುವುದು ಸ್ವತಃ ರೈತರಿಗೆ ಮಾರಕ.ಇದು ಭಾರತ‌ ಆರ್ಥಿಕ ವ್ಯವಸ್ಥೆಯನ್ನು ವಿಷಮ‌ ಸ್ಥಿತಿಗೆ ದೂಡುತ್ತದೆ.” ಎಂಬುದು ಕೃಷಿ ಆರ್ಥಿಕ ತಜ್ಞರಾದ ಅಶೋಕ್ ಗುಲಾಟಿಯವರ‌ ಅಭಿಪ್ರಾಯ. ಈಗಾಗಲೇ‌ ಹಲವು ಬೆಳೆಗಳಿಗೆ‌ ಎಮ್‌ಎಸ್‌ಪಿ ಇದೆ.ಅದನ್ನು ಎಲ್ಲ‌ ಬೆಳೆಗಳಿಗೆ‌ ವಿಸ್ತರಿಸಿದರೆ ಕನಿಷ್ಠ ಹತ್ತು ಲಕ್ಷ ಕೋಟಿಯ ಆರ್ಥಿಕ ಹೊರೆ ಬೀಳುತ್ತದೆ. ಇದು ನೇರವಾಗಿ ಗ್ರಾಹಕರ ಮೇಲೆ‌ ಪರಿಣಾಮ ಬೀರುತ್ತದೆ.ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕಾನೂನನ್ನು ಜಾರಿಗೆ ತರುವುದಾಗಿ ರಾಹುಲ್ ಗಾಂಧಿ ಹೇಳಿದ್ದಾರೆ, ಬಹುಶಃ ರಾಜಕೀಯದ ‘ಪಪ್ಪು’ಗೆ ಎಮ್‌ಎಸ್‌ಪಿ ಗೆ ಬೇಕಾಗುವ ಮೊತ್ತವೂ ಗೊತ್ತಿರಲಿಕ್ಕಿಲ್ಲ‌ ಬಿಡಿ.

ಇನ್ನು ಉಳಿದ ಬೇಡಿಕೆಗಳೆಂದರೆ ಎಲ್ಲ ರೈತರಿಗೆ ವರ್ಷಕ್ಕೆ 1,20,000 ರೂ. ಪಿಂಚಣಿ ನೀಡಬೇಕು (ಭಾರತದಲ್ಲಿ‌ ಕನಿಷ್ಠ 15 ಕೋಟಿ‌ ಕೃಷಿಕರಿದ್ದಾರೆ), ನರೇಗಾ ಅಡಿಯಲ್ಲಿ ಕಾರ್ಮಿಕರಿಗೆ 700 ರೂಪಾಯಿ ದೈನಂದಿನ ವೇತನದೊಂದಿಗೆ ಪ್ರತಿ ವರ್ಷ 200 ದಿನಗಳ ಉದ್ಯೋಗ, ಕೃಷಿ ಸಾಲ ಮನ್ನಾ, ಭೂಸ್ವಾಧೀನ ಕಾಯಿದೆ ತಿದ್ದುಪಡಿ, ಪ್ರತಿ ಜಮೀನಿನ ಬೆಳೆ ವಿಮೆಯ ಹಣವನ್ನು ಸರ್ಕಾರವೇ ಭರಿಸಬೇಕು ಮುಂತಾದವು. ಹೀಗೆ ರೈತರ ಈ ಎಲ್ಲ ಬೇಡಿಕೆಗಳನ್ನು ಪೂರೈಸಲು ಸರ್ಕಾರಕ್ಕೆ ಪ್ರತಿವರ್ಷ 36 ಲಕ್ಷ ಕೋಟಿ ರೂಪಾಯಿಗಳು ಬೇಕಾಗುತ್ತವೆ.ಇದು ಭಾರತದ‌ ವಾರ್ಷಿಕ‌ಬಜೆಟ್‌ನ 80% ಮೊತ್ತ! ಇವೆಲ್ಲದರ ಜೊತೆಗೆ ಮತ್ತೊಂದು ವಿಚಿತ್ರವಾದ ಬೇಡಿಕೆ ಎಂದರೆ ಭಾರತ ವಿಶ್ವ ವ್ಯಾಪಾರ ಸಂಸ್ಥೆಯಿಂದ ಹೊರಗೆ ಬರಬೇಕು ಎಂನ ಆಗ್ರಹ. ಅಷ್ಟೇ ಅಲ್ಲ, ಈವರೆಗೆ ವಿಶ್ವ ವ್ಯಾಪಾರ ಸಂಸ್ಥೆ ಜೊತೆ ಮಾಡಿಕೊಂಡಿರುವ ಎಲ್ಲ ಒಪ್ಪಂದಗಳನ್ನೂ ರದ್ದುಪಡಿಸಿ ಎಂದೂ ಆಗ್ರಹಿಸುತ್ತಿದ್ದಾರೆ.

ಈ ಸೋಕಾಲ್ಡ್ ಪಂಜಾಬಿನ ‘ಬಡ’ ಹೋರಾಟಗಾರರು ಖಲಿಸ್ತಾನಿ ಬಾವುಟಗಳನ್ನು ಹಿಡಿದು ಐಶಾರಾಮಿ ಕಾರುಗಳಲ್ಲಿ ದೆಹಲಿ ಕಡೆಗೆ ಬರುತ್ತಿದ್ದಾರೆ, ದಾರಿ ಮಧ್ಯೆ ಉಗ್ರ ಭಿಂದ್ರಾವಾಲ್‌ನ ಟಿ ಶರ್ಟ್‌ಗಳು ರಾರಾಜಿಸುತ್ತಿದೆ. ಹೊಸ ಟ್ಯಾಕ್ಟರ್‌ಗಳನ್ನು ಖರೀದಿಸಿ ಇದಕ್ಕಾಗಿಯೇ ಮಾರ್ಪಾಡು ಮಾಡಿಕೊಂಡು ಬಂದಿದ್ದಾರೆ. ಪೊಲೀಸರ ಮೇಲೆಯೂ ದಾಳಿ ನಡೆಸುತ್ತಿದ್ದಾರೆ. ಪೊಲೀಸರು ದ್ರೋಣ್ ಬಳಸಿದರೆ ಅವುಗಳನ್ನು ಗಾಳಿಪಟದಿಂದ ಅಡ್ಡಿಪಡಿಸುವ ಯೋಜನೆಯನ್ನೂ ಮೊದಲೇ ಮಾಡಿಕೊಂಡಿದ್ದಾರೆ. ರೈಲುಗಳನ್ನು ಅಡ್ಡಗಟ್ಟಿ ಸಾರ್ವಜನಿಕರಿಗೆ ತೊಂದರೆಯನ್ನುಂಟು ಮಾಡುತ್ತಿದ್ದಾರೆ, ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿಪಡಿಸುತ್ತಿದ್ದಾರೆ, ಇನ್ನು ದೆಹಲಿಯ ಜನರಂತೂ ಟ್ರಾಫಿಕ್‌ನಿಂದ ಹೈರಾಣಾಗಿದ್ದಾರೆ. ಇದು ಜನಪರ ಆಂದೋಲನವಲ್ಲ ಜನ ವಿರೋಧಿ ಆಂದೋಲನ.ಒಟ್ಟಾರೆಯಾಗಿ‌ ಚುನಾವಣೆಗೂ ಕೆಲದಿನಗಳ ಮುನ್ನ ದೇಶದಲ್ಲಿ ಅನ್ನದಾತನ ಹೆಸರಲ್ಲಿ ಅರಾಜಕತೆಯ ವಾತಾವರಣವನ್ನು ಸೃಷ್ಟಿಸುವುದೇ ಇವರ ಗುರಿ.

ಚುಕ್ಕಿಗಳನ್ನು ಸೂಕ್ಷ್ಮವಾಗಿ ಕೂಡಿಸುತ್ತಾ ಹೋಗಿ. ಹೋರಾಟದ ನೇತೃತ್ವ ವಹಿಸಿರುವ ರಮಣ್‌ದೀಪ್ ಮನ್ ಮತ್ತು ರಾಹುಲ್ ಗಾಂಧಿಯ ಆಪ್ತ ದೀಪೇಂದರ್ ಹೂಡಾ ನವೆಂಬರ್‌ನಲ್ಲಿ ಭೇಟಿಯಾಗಿದ್ದರು. ಅದಾಗಿ ಕೆಲದಿನಗಳಲ್ಲೇ ಹರಿಯಾಣದಲ್ಲಿ ಟ್ರೈಯಲ್ ತರಹ ಹೋರಾಟ ಆರಂಭವಾಗುತ್ತದೆ. ಅದಾಗಿ ಒಂದು ತಿಂಗಳಲ್ಲಿ ಇದೇ ದೀಪೇಂದರ್ ಹೂಡಾ ವಿದೇಶದಲ್ಲಿ
ಸ್ಯಾಮ್ ಪಿತ್ರೋಡಾರನ್ನು ಭೇಟಿ ಮಾಡುತ್ತಾರೆ.ನಂತರ ರೈತ ಮುಖಂಡರ‌ ಜೊತೆ ಮಾತುಕತೆ ನಡೆಸಿ, ಎರಡು ದಿನದಲ್ಲೇ ರೈತರ ಹೆಸರಿನಲ್ಲಿ ದೆಹಲಿ ಚಲೋದ ದಿನಾಂಕದ ಘೋಷಣೆ ಆಗುತ್ತದೆ. ಸಂಸತ್ತಿನ ಕೊನೆಯ ಅಧಿವೇಶನ ಅದಾಗಲೇ ಮುಗಿದಿದೆ. ಈಗ ಸರ್ಕಾರ ಯಾವುದೇ ಕಾನೂನನ್ನು ಅಧಿಕೃತವಾಗಿ ಜಾರಿಗೆ ತರಲು ಇಚ್ಛಿಸಿದರೂ ಅದು ಕಷ್ಟವೆಂಬುದು ಎಲ್ಲರಿಗೂ ತಿಳಿದಿದೆ.ಅದಾಗ್ಯೂ ಸಾವಿರಾರು ಜನರು ರೈತರ ಹೆಸರಲ್ಲಿ ದೆಹಲಿಗೆ ಬರುತ್ತಾರೆ, ಅದಕ್ಕೆ ಕಾಂಗ್ರೆಸ್ ಕೂಡಲೇ ಅಧಿಕೃತವಾಗಿ ಬೆಂಬಲ ನೀಡುತ್ತದೆ.ರಾಹುಲ್ ಗಾಂಧಿ ತಮ್ಮ ಪಾದಯಾತ್ರೆ ಬಿಟ್ಟು ಇದರಲ್ಲಿ ಭಾಗವಹಿಸುತ್ತಾರೆ.

ಪಂಜಾಬ್ ಸರ್ಕಾರ ಕೇಂದ್ರದ ನಿರ್ದೇಶನವನ್ನು ಧಿಕ್ಕರಿಸಿ ನಕಲಿ ಹೋರಾಟಕ್ಕೆ ಆಸ್ಪದ ಕಲ್ಪಿಸುತ್ತದೆ, ದೆಹಲಿಯ ಆಪ್ ಸರ್ಕಾರ ಸಹ ಹೋರಾಟಕ್ಕೆ ನೆರವಾಗುತ್ತಿದೆ. ಇವೆಲ್ಲವೂ ಇದೊಂದು ಮೋದಿಯ ವಿರುದ್ಧದ ಪ್ರಾಯೋಜಿತ ಹೋರಾಟ ಎಂಬ ವಾದಕ್ಕೆ ಮತ್ತಷ್ಟು ಪುಷ್ಟಿ ನೀಡುತ್ತದೆ . ಮೋದಿಯನ್ನು ಕುಗ್ಗಿಸುವ ಏಕೈಕ ಉದ್ದೇಶದಿಂದ ಕಟ್ಟಿಕೊಂಡಿದ್ದ INDI ಕೂಟ ಈಗ ಮುರಿದುಬಿದ್ದಿದೆ‌. ಹಾಗಾಗಿ ಮೋದಿಯವರ ವಿರುದ್ಧ ವಿಪಕ್ಷಗಳ ಹೊಸ ಕುತಂತ್ರವಿದು.

ನಿಮಗೆ ನೆನಪಿರಲಿ, ಭಾರತ್ ತೇರೆ ತುಕ್ಡೇ ಹೋಂಗೆ ಎಂದವರ ಜೊತೆ ನಿಂತದ್ದು ಕಾಂಗ್ರೆಸ್.ಅಫ್ಜಲ್ ಗುರು ಎಂಬ ಭಯೋತ್ಪಾದಕನ‌ ಬಗ್ಗೆ ವಕಾಲತ್ತು ವಹಿಸಿದ್ದು‌ ಕಾಂಗ್ರೆಸ್. ಸನಾತನ ಧರ್ಮವನ್ನು ನಾಶಮಾಡುವ ಮಾತನ್ನು ‌ಬೆಂಬಲಿಸಿದ್ದು ಕಾಂಗ್ರೆಸ್. ಸೈನ್ಯದ ಸಾಹಸವನ್ನು ‌ಅನುಮಾನಿಸಿದ್ದು ಇದೇ ಕಾಂಗ್ರೆಸ್. ಉತ್ತರ ದಕ್ಷಿಣ‌ನ ಭಾರತವೆಂದು ದೇಶ ಒಡೆಯುವ ಭಾವನೆಗೆ ನೀರೆರೆದಿದ್ದು ಕಾಂಗ್ರೆಸ್. ಹೀಗೆ ಅಧಿಕಾರವಿರದ ಕಾಂಗ್ರೆಸ್‌ ಭಾರತಕ್ಕೆ ಹೆಚ್ಚು ಅಪಾಯಕಾರಿ ಎಂಬುದನ್ನು ಕಳೆದ‌ ಹತ್ತು ವರ್ಷಗಳಿಂದ‌ ನೋಡುತ್ತಾ ಬಂದಿದ್ದೇವೆ.‌ ಅಧಿಕಾರದ ಪಿಪಾಸುತನ ಅವರನ್ನು ಹತಾಶರನ್ನಾಗಿಸಿದೆ‌.
ಮೋದಿಯನ್ನು ಸೋಲಿಸಲು ಚುನಾವಣೆಯ ಸಮಯದಲ್ಲಿ ರಾಷ್ಟ್ರ ಭಂಜಕ Eco System ಮತ್ತೆ ಸಕ್ರಿಯಗೊಂಡಿದೆ ಅಷ್ಟೇ. ಕಳೆದ ಬಾರಿ‌ ಕೃಷಿವಲಯದ ಆದಾಯದ ಹೆಚ್ಚಳಕ್ಕಾಗಿ ಕೇಂದ್ರ ಸರ್ಕಾರ ಜಾರಿಗೆ‌ ತಂದಿದ್ದ ಐತಿಹಾಸಿಕ ಮೂರು ಕಾನೂನಗಳನ್ನು ರದ್ದುಮಾಡಲು ಇದೇ ರೀತಿ ಒತ್ತಡ ಹೇರಿ ಈ ಶಕ್ತಿಗಳು ಯಶಸ್ವಿಯಾಗಿದ್ದವು. ಆದರೆ ಈ ಬಾರಿ ಕೇಂದ್ರ ಸರ್ಕಾರವೂ ಸಹ ಸಜ್ಜಾಗಿಯೇ ನಿಂತಂತೆ ಕಾಣುತ್ತಿದೆ. ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಹೋರಾಟ ನಡೆಸುವ, ನ್ಯಾಯ ಕೇಳುವ ಹಕ್ಕಿದೆ ನಿಜ, ಹಾಗಂತ ಹೀಗೆ ಸರ್ಕಾರವನ್ನು ಬೆದರಿಸುವ ಮೂಲಕ ನಮ್ಮ‌ ಕಾರ್ಯವನ್ನು ಸಾಧಿಸಿಕೊಳ್ಳುತ್ತೇವೆ ಎಂದು ಪದೇಪದೇ ಹೊರಟರೆ ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗುತ್ತದೆ. ಹಾಗಾಗಿ ಕೇಂದ್ರ ಸರ್ಕಾರ ಸಾಮ ದಾನ ಭೇದ ಎಲ್ಲ ನೀತಿಯನ್ನು ಅನುಸರಿಸಿ ಹೋರಾಟವನ್ನು ನಿಯಂತ್ರಿಸುವ ಪ್ರಯತ್ನ ಮಾಡುತ್ತಿದೆ.

ರೈತರನ್ನು ಸ್ವಾವಲಂಬಿಯಾಗಿಸಲು ಮತ್ತು ಅವರು ಸ್ವಾಭಿಮಾನದ ಬದುಕನ್ನು ಕಟ್ಟಿಕೊಳ್ಳಲು ಅನೇಕ‌ ಸೌಲಭ್ಯಗಳನ್ನು ಮೋದಿ ಒದಗಿಸಿದ್ದಾರೆ. ಕಿಸಾನ್ ಸಮ್ಮಾನ್, ಮಣ್ಣಿನ ಆರೋಗ್ಯ ಕಾರ್ಡ್, ಅಯುಷ್ಮಾನ್ ಭಾರತ ಯೋಜನೆಗಳನ್ನು ಕೊಟ್ಟಿದ್ದು ಮೋದಿ.
ತಿಂಗಳಿಗೆ 500 ರೂ ನಂತೆ ವರ್ಷಕ್ಕೆ 6000 ರೂಪಾಯಿಯನ್ನು ರೈತರ ಖಾತೆಗೆ ಹಾಕಿದ್ದು ಮೋದಿ. ಮೊದಲೆಲ್ಲ ರಸಗೊಬ್ಬರಕ್ಕಾಗಿ ರೈತ ಲಾಠಿ ಏಟು ತಿನ್ನುತ್ತಿದ್ದ, ಅದನ್ನು ತಪ್ಪಿಸಿದ್ದು ಮೋದಿ. ಭತ್ತ, ರಾಗಿ, ಅನೇಕ ಬೇಳೆಗಳಿಗೆ ಬೆಂಬಲ ಬೆಲೆಯನ್ನು ಹೆಚ್ಚಿಸಿದ್ದು ಮೋದಿ. ಪ್ರಕೃತಿ ವಿಕೋಪಕ್ಕೆ ಬೆಳೆ ನಾಶವಾದರೆ ರೈತನಿಗೆ ನಷ್ಟವಾಗದಂತೆ ತಡೆಯಲು ಕಡಿಮೆ ಬೆಲೆಯಲ್ಲಿ ಫಸಲ್ ವಿಮಾ ಯೋಜನೆಯನ್ನು ಜಾರಿಗೆ ತಂದಿದ್ದು ಇದೇ ಮೋದಿ‌. ರೈತ ಸಮುದಾಯಕ್ಕೆ ಪ್ರಧಾನಿ ನರೇಂದ್ರ ಮೋದಿ ಮಾಡಿದ ಈ ಯಾವ ಕೆಲಸಗಳನ್ನೂ ಅನ್ನದಾತ ಮರೆತಿಲ್ಲ.ಆತ ಇದರ ನೇರ ಫಲಾನುಭವಿ. ಅದೇ ಕಾಂಗ್ರೆಸ್‌ಗೆ ಮತ್ತು ದಲ್ಲಾಳಿಗಳಿಗೆ ಚಿಂತೆಯಾಗಿರುವುದು. ಈಗ ರೈತ ಎಂಬ ಗುರಾಣಿ ಹಿಡಿದು ಮೋದಿಯನ್ನು ಹೆದರಿಸಲು ಬಂದಿದ್ದಾರೆ.ಆದರೆ ಸಾಮಾನ್ಯ ರೈತ ಸಮೂಹ ಮೋದಿಯ ಜೊತೆಗಿದೆ.ಅವರು ಮೋದಿಯನ್ನು ಮತ್ತೊಮ್ಮೆ ಗೆಲ್ಲಿಸುತ್ತಾರೆ. ಮಲ್ಲಿಕಾರ್ಜುನ ಖರ್ಗೆಯವರೇ ಹೇಳಿದಂತೆ “ಅಬ್ ಕೀ ಬಾರ್ ಚಾರ್ ಸೌ ಪಾರ್” ಖಚಿತ.

ಗುರುಪ್ರಸಾದ್ ಆರ್ ಶಾಸ್ತ್ರಿ