ಆಯೆ ಗಾ ತೊ, ಮೋದಿ ಹೀ !

“ಭಾರತವೀಗ ಸಣ್ಣ ಕನಸನ್ನು ಕಾಣುವಂತಿಲ್ಲ, ಸಣ್ಣ ಸಂಕಲ್ಪವನ್ನೂ ಮಾಡುವಂತಿಲ್ಲ. ಇನ್ನೇನಿದ್ದರೂ ಕನಸೂ ದೊಡ್ಡದಾಗಿರುತ್ತದೆ, ಸಂಕಲ್ಪವೂ ವಿರಾಟ್ ಆಗಿರುತ್ತದೆ. ನಾವು ಭಾರತವನ್ನು ವಿಕಸಿತಗೊಳಿಸಬೇಕು ಎನ್ನುವುದು ನಮ್ಮ ಕನಸೂ ಹೌದು ಮತ್ತು ನಮ್ಮೆಲ್ಲರ ಸಂಕಲ್ಪವೂ ಹೌದು. ಮುಂದಿನ ಐದು ವರ್ಷ ಭಾರತ ಮೊದಲಿಗಿಂತಲೂ ಹೆಚ್ಚು ವೇಗವಾಗಿ ಕಾರ್ಯ ನಿರ್ವಹಿಸಬೇಕು. ಮುಂದಿನ ಐದು ವರ್ಷ ವಿಕಸಿತ ಭಾರತದತ್ತ ನಾವೆಲ್ಲ ದಾಪುಗಾಲಿಡಬೇಕು. ದೇಶದ ಕೋಟಿ ಕೋಟಿ ಯುವಕರು, ಮಹಿಳೆಯರು, ಬಡವರ ಕನಸೇ ಮೋದಿಯ ಸಂಕಲ್ಪ”, ಇವು ಸ್ವತಃ ಪ್ರಧಾನಮಂತ್ರಿ ನರೇಂದ್ರಮೋದಿಯರ ಮಾತುಗಳು. ಇತ್ತೀಚೆಗಷ್ಟೇ ದೆಹಲಿಯ ಭಾರತ ಮಂಟಪಂನಲ್ಲಿ ಬಿಜೆಪಿಯ ಕಾರ್ಯಕರ್ತರಿಗೆಂದೇ ನಡೆದ ಕಾರ್ಯಕಾರಿಣಿ ಸಭೆಯಲ್ಲಿ ಆಡಿದ ಮಾತುಗಳಿವು. ನೀವು ಒಪ್ಪಿ, ಬಿಡಿ. ರಾಜನೊಬ್ಬ ತನ್ನ ಸೈನಿಕ ಪಡೆಯನ್ನು ಹುರಿದುಂಬಿಸುವಂತೆ ಅಂದು ಮೋದಿ ತಮ್ಮ ಪಕ್ಷದ ಕಾರ್ಯಕರ್ತರಿಗೆ ಉತ್ಸಾಹಭರಿತ ಮಾತುಗಳಿಂದ ಪ್ರೇರೇಪಿಸಿದ್ದರು ಎಂದರೆ ತಪ್ಪಾಗಲಾರದು.

ಮುಂದುವರೆದು ಮಾತನಾಡುತ್ತಾ ‘ನಾನು ರಾಜನೀತಿಗಾಗಿ ಅಲ್ಲ, ರಾಷ್ಟ್ರನೀತಿಗಾಗಿ ಕೆಲಸ ಮಾಡುತ್ತಿರೋದು. ಶಿವಾಜಿ ಮಹಾರಾಜರಿಂದ ಪ್ರೇರಣೆ ಪಡೆದಿರುವ ನಾನು, ನನ್ನ ಸುಖ-ವೈಭವಕ್ಕಾಗಿ ಜೀವಿಸಿರುವ ವ್ಯಕ್ತಿಯಲ್ಲ. ರಾಷ್ಟ್ರದ ಸಂಕಲ್ಪತೊಟ್ಟು ಹೊರಟಿರುವ ವ್ಯಕ್ತಿ ನಾನು’ ಎಂಬ ಅವರ ಮಾತುಗಳು ಎಂಥವನಲ್ಲೂ ಶಕ್ತಿ ಸಂಚಾರ ಮಾಡುವಂಥವು. ಅತಿಶಯೋಕ್ತಿ ಎನಿಸಿದರೂ ನಿಜವೇ ಸರಿ, ಕಳೆದ ಐನೂರು ವರ್ಷಗಳಲ್ಲಿ ಮೋದಿಯಂತಹ ರಾಜನನ್ನು, ಜನನಾಯಕನನ್ನು ಭಾರತ ಕಂಡಿರಲಿಲ್ಲ. ಪ್ರತಿಕ್ಷಣವೂ ಭಾರತದ ಏಳ್ಗೆಗಾಗಿ ಮಿಡಿಯುತ್ತಿರುವ ಹೃದಯವದು. ಹಾಗಂತ ಬರಿ ಮಾತಷ್ಟೇ ಅಲ್ಲ, ಕಳೆದ ಹತ್ತು ವರ್ಷಗಳಲ್ಲಿ ಮೋದಿಯವರ ಸರ್ಕಾರ ಸಾಧಿಸಿರುವ ಮೈಲಿಗಲ್ಲುಗಳೇ ಇದಕ್ಕೆ ಸಾಕ್ಷಿ. ಕೆಂಪುಕೋಟೆಯಿಂದ ಶೌಚಾಲಯದ ಸಮಸ್ಯೆಯ ಕುರಿತು, ಮಹಿಳೆಯರ ಸುರಕ್ಷತೆಯ ಕುರಿತು ಮಾತನಾಡಿದ ಮೊದಲ ಪ್ರಧಾನಿ ನರೇಂದ್ರಮೋದಿ! ಕಳೆದ ಹತ್ತು ವರ್ಷಗಳಲ್ಲಿ ಮೋದಿಯವರ ಸರ್ಕಾರ ದೇಶದ ನಾರೀಶಕ್ತಿ, ಯುವಶಕ್ತಿಯನ್ನು ಹಲವಾರು ಯೋಜನೆಗಳ ಮೂಲಕ ಮುಟ್ಟಿರುವ ರೀತಿ ಅಪರೂಪದ್ದು. ಇಷ್ಟೂ ವರ್ಷಗಳ ಕಾಲ ಕಾಂಗ್ರೆಸ್ಸು ಯಾವ ಹಿಂದುಳಿದ ವರ್ಗವನ್ನು ಅಧಿಕಾರದಾಸೆಗೆ ತನ್ನ ತುಷ್ಟೀಕರಣದ ನೀತಿಯಿಂದ ದೂರವಿರಿಸಿತ್ತೋ, ಅವರನ್ನೂ ಮೇಲೆತ್ತುವ, ಗೌರವಿಸುವ ಕಾರ್ಯವನ್ನು ಮೋದಿಯವರು ಮಾಡಿಕೊಂಡು ಬಂದಿದ್ದಾರೆ. ಸ್ವಾಮಿ ವಿವೇಕಾನಂದರು ಪದೇ ಪದೇ ಹೇಳುತ್ತಾರಲ್ಲ, ಹಿಂದುಳಿದ ವರ್ಗವನ್ನು ಮತ್ತು ಮಹಿಳೆಯರನ್ನು ಮೇಲೆತ್ತುವ ಕೆಲಸವಾದಾಗ ಮಾತ್ರವೇ ಭಾರತ ಅಭಿವೃದ್ಧಿಗೊಳ್ಳೋದು ಅಂತ. ಆ ಕಾರ್ಯ ಇಂದು ಸಾಕಾರಗೊಳ್ಳುತ್ತಿದೆ.

ಭಾರತವೀಗ ಜಗತ್ತಿನ ಐದು ದೊಡ್ಡ ಆರ್ಥಿಕ ಶಕ್ತಿಗಳಲ್ಲಿ ಒಂದಾಗಿದೆ. ಒಂದು ಕಾಲದಲ್ಲಿ ಚಿನ್ನದ ಹಕ್ಕಿಯಾಗಿದ್ದ ಭಾರತ ಮೊಘಲರು, ಬ್ರಿಟೀಷರ ಸಾಲು-ಸಾಲು ಲೂಟಿಗಳ ನಂತರ ಬಸವಳಿದಿತ್ತು. ಸ್ವಾತಂತ್ರ್ಯಾನಂತರ ಅಧಿಕಾರದಾಸೆಗೆ ಯಾವ ರಾಜಕಾರಣಿಯೂ ಈ ಕುರಿತು ತಲೆಕೆಡಿಸಿಕೊಂಡಿರಲಿಲ್ಲ. ಒಂದು ಟ್ರಿಲಿಯನ್ ಡಾಲರ್ ಆರ್ಥಿಕತೆಗೆ ಏರಲು ಭಾರತಕ್ಕೆ ಸುಮಾರು 60 ವರ್ಷ ಬೇಕಾಯಿತು. ಒಮ್ಮೆ ನೆನಪಿಸಿಕೊಳ್ಳಿ, ಮೋದಿಯ ಮುಂಚಿನ ಹತ್ತು ವರ್ಷಗಳ ಕಾಂಗ್ರೆಸ್ ಅವಧಿಯಲ್ಲಿ ಭಾರತದ ಆರ್ಥಿಕತೆ ಯಾವ ಮಟ್ಟಕ್ಕಿಳಿದಿತ್ತು. 2014ರಲ್ಲಿ ಮೋದಿಯವರು ಅಧಿಕಾರ ವಹಿಸಿಕೊಂಡಾಗ ಭಾರತವನ್ನು ಆರ್ಥಿಕವಾಗಿ ಮೇಲೆತ್ತುವ ಕೆಲಸ ದೂರದ ಬೆಟ್ಟದಂತಿತ್ತು. ಆದರೆ ಹತ್ತೇ ವರ್ಷಗಳಲ್ಲಿ ಎರಡು ಟ್ರಿಲಿಯನ್ ಡಾಲರ್‌ಗಳನ್ನು ಸೇರಿಸಿ, ಭಾರತವನ್ನು ಮೂರು ಟ್ರಿಲಿಯನ್ ಡಾಲರ್ ಆರ್ಥಿಕ ಶಕ್ತಿಯಾಗಿಸಿದ ಗೌರವ ನಿಜಕ್ಕೂ ಮೋದಿ ಸರ್ಕಾರಕ್ಕೇ ಸಲ್ಲಬೇಕು. ಭಾರತ ಜಗತ್ತಿನ ಹನ್ನೊಂದನೇ ದೊಡ್ಡ ಆರ್ಥಿಕ ಶಕ್ತಿಯಾಗಿತ್ತು. ಅದನ್ನು ಒಂದೇ ಒಂದು ಸ್ಥಾನ ಮುಂತರುವಲ್ಲಿಯೂ ಕಾಂಗ್ರೆಸ್ಸಿಗೆ ಹೈರಾಣಾಗಿತ್ತು. ಆದರೆ, ಹತ್ತೇ ವರ್ಷಗಳಲ್ಲಿ ಮೋದಿ ಭಾರತವನ್ನು ಐದನೇ ದೊಡ್ಡ ಆರ್ಥಿಕ ಶಕ್ತಿಯಾಗಿಸಿ ಜಗತ್ತೇ ಅಚ್ಚರಿಗೊಳ್ಳುವಂತೆ ಮಾಡಿದ್ದಾರೆ. ಇದರಿಂದಾಗುವ ಪ್ರಯೋಜನವಾದರೂ ಏನು ಎಂದು ಸುಮ್ಮನಾಗಿಬಿಡಬೇಡಿ. ಇದರ ಪರಿಣಾಮ ಮೂಲಭೂತ ಸೌಕರ್ಯಗಳಿಗೆ ನೀಡುವ ಬಜೆಟ್ ಮೊತ್ತ ಎರಡು ಲಕ್ಷ ಕೋಟಿಯಿಂದ ಈಗ ಹನ್ನೊಂದು ಲಕ್ಷಕೋಟಿಗೇರಿದೆ. ಈ ಕಾರಣಕ್ಕಾಗಿಯೇ ರಾಷ್ಟ್ರೀಯ ಹೆದ್ದಾರಿ, ಎಕ್ಸ್ ಪ್ರೆಸ್‌ವೇ, ಸಾರಿಗೆಗಳಲ್ಲಿ ಅಭೂತಪೂರ್ವ ಬದಲಾವಣೆ ಬಂದಿರೋದು.

ಹ್ಞಾಂ! ಪ್ರಧಾನಿ ಮೋದಿಯವರು ಇಲ್ಲಿಗೇ ನಿಂತಿಲ್ಲ. ‘ನನ್ನ ಮೂರನೇ ಅವಧಿಯಲ್ಲಿ ಭಾರತವನ್ನು ಮೂರನೇ ದೊಡ್ಡ ಆರ್ಥಿಕ ಶಕ್ತಿಯಾಗಿಸುವ ಸಂಕಲ್ಪವನ್ನು ನಾನು ಹೊತ್ತಿದ್ದೇನೆ. ಇದು ಮೋದಿಯ ಗ್ಯಾರಂಟಿ’ ಎಂದು ಅವರು ಹೇಳಿರುವ ಮಾತುಗಳನ್ನು ನೀವು ಅದಾಗಲೇ ಹಲವು ಬಾರಿ ಕೇಳಿರಬಹುದು. ನೆನಪಿಡಿ, ಮೂರನೇ ದೊಡ್ಡ ಆರ್ಥಿಕ ಶಕ್ತಿ ಆಗುವುದೆಂದರೆ ಭಾರತದ ಪ್ರತಿ ಪರಿವಾರದ ಜೀವನ ಸ್ತರ ವೃದ್ಧಿಗೊಳ್ಳೋದು ಎಂದರ್ಥ, ಭಾರತದ ಸಾರಿಗೆ ವ್ಯವಸ್ಥೆ ಮತ್ತಷ್ಟು ಆಧುನಿಕವಾಗೋದು ಎಂದರ್ಥ. ಭಾರತದಲ್ಲಿ ಉದ್ಯೋಗಕ್ಕಾಗಿ ಹೊಸ-ಹೊಸ ಕ್ಷೇತ್ರಗಳು ತೆರೆದುಕೊಳ್ಳುತ್ತವೆ, ಭಾರತದ ಕಂಪೆನಿಗಳಿಗೆ ಆದಾಯ ದೇಶದೊಳಗಿಂದಲೇ ಬರುತ್ತವೆ ಎಂದರ್ಥ. ಮೂರನೇ ದೊಡ್ಡ ಆರ್ಥಿಕ ಶಕ್ತಿಯಾಗೋದು ಎಂದರೆ ಮಹಿಳೆಯರಿಗೆ ಪ್ರತಿ ಕ್ಷೇತ್ರದಲ್ಲೂ ನೇತೃತ್ವ ವಹಿಸುವ ಅವಕಾಶಗಳು ದೊರೆಯುತ್ತವೆ ಎಂದರ್ಥ, ರೈತರು ಆಧುನಿಕ ಯಂತ್ರಗಳನ್ನು ಬಳಸಿ ಕಾರ್ಯ ನಿರ್ವಹಿಸುತ್ತಾರೆ ಮತ್ತು ಕೃಷಿಕರ ಜೀವನಮಟ್ಟ ವೃದ್ಧಿಯಾಗಲಿದೆ ಎಂದರ್ಥ. ಮತ್ತು ಇದು ಕೇವಲ ಚುನಾವಣಾ ಪ್ರಚಾರಕ್ಕಾಗಿ ಮಾಡುವ ಭಾಷಣವಲ್ಲ ಎಂಬುದು ಈ ಹತ್ತು ವರ್ಷಗಳಲ್ಲಿ ಭಾರತದ ಪ್ರಗತಿಯನ್ನು ಕಾಣುತ್ತಿರುವ ಪ್ರತಿಯೊಬ್ಬನಿಗೂ ಅರ್ಥವಾಗುತ್ತದೆ.

ಏಕ ಭಾರತ, ಶ್ರೇಷ್ಠ ಭಾರತ ಎಂಬ ಗುರಿಯೊಂದಿಗೆ ಮುನ್ನುಗ್ಗುತ್ತಿರುವ ಮೋದಿ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಭಾರತವನ್ನು ಜೋಡಿಸುವಲ್ಲಿ, ಏಕರಸವಾಗಿಸುವಲ್ಲಿ ನಿರಂತರ ಕಾರ್ಯ ನಿರ್ವಹಿಸುತ್ತಿದ್ದಾರೆ. ಐದು ಶತಮಾನಗಳ ನಿರಂತರ ಹೋರಾಟದ ನಂತರ, ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮನ ಮಂದಿರ ಅನಾವರಣಗೊಂಡಿತು. ನೆನಪು ಮಾಡಿಕೊಳ್ಳಿ, ಉದ್ಘಾಟನೆಗೂ ಮುನ್ನ 11 ದಿನಗಳ ಅನುಷ್ಠಾನ ಕೈಗೊಂಡಿದ್ದ ಮೋದಿ ನಾಸಿಕ್, ಲೇಪಾಕ್ಷಿ, ಶ್ರೀರಂಗಂ, ರಾಮೇಶ್ವರಂ ಸೇರಿದಂತೆ ದಕ್ಷಿಣ ಭಾರತದ ವಿವಿಧ ತೀರ್ಥಕ್ಷೇತ್ರಗಳನ್ನು ಸಂದರ್ಶಿಸಿ ಭಾರತದ ಏಕತೆಯ ಪ್ರಾರ್ಥನೆ ಮಾಡಿದ್ದರು. ಈ ಎಲ್ಲೆಡೆಗಳಲ್ಲಿ ಜನ ತೋರಿದ ಪ್ರೀತಿಯನ್ನು ನಾವೂ ಕಂಡಿದ್ದೇವೆ. ಅನ್ಯ ದೇಶಗಳಿಂದ ಸಭೆಗೆಂದು ಬರುವ ಅಧಿಕಾರಿಗಳನ್ನು, ನಾಯಕರನ್ನು, ರಾಜಕಾರಣಿಗಳನ್ನು ವಿವಿಧ ರಾಜ್ಯಗಳ ತೀರ್ಥಕ್ಷೇತ್ರಗಳಿಗೊಯ್ಯುವ ಪ್ರಧಾನಮಂತ್ರಿಯನ್ನು ನಾವು ಹಿಂದೆಂದೂ ಕಂಡಿರಲಿಕ್ಕಿಲ್ಲ. ಚೀನಾದ ಅಧ್ಯಕ್ಷರನ್ನೂ ಕುಂಭಕೋಣಂ ಕೊಂಡೊಯ್ದಿದ್ದು ನರೇಂದ್ರಮೋದಿಯೇ. ‘ಸೌಥ್ ರಿಜೆಕ್ಟ್ಸ್ ಬಿಜೆಪಿ’ ಎನ್ನುವ, ಉತ್ತರ-ದಕ್ಷಿಣ ಭಾರತವನ್ನು ಬೇರ್ಪಡಿಸುವ ಮನಸ್ಸುಳ್ಳವರಿಗೆ ಏಕ ಭಾರತ, ಶ್ರೇಷ್ಠ ಭಾರತದಂತಹ ಭಾವನೆ ಕಲ್ಪನೆಗೂ ಮೀರಿದ್ದು ಬಿಡಿ!

ವಿಕಸಿತ ಭಾರತದಡಿಯಲ್ಲಿ ಮುಂದಿನ ಐದು ವರ್ಷಗಳ ಕಾಲ ನಡೆಯಬೇಕಿರುವ ಕೆಲಸಗಳ ನೀಲಿನಕಾಶೆಯನ್ನು ಅದಾಗಲೇ ಮೋದಿಯವರ ತಂಡ ತಯಾರಿಸುತ್ತಿದೆ. ಈ ದಿಕ್ಕಿನಲ್ಲಿ ಕಳೆದ ಒಂದೂವರೆ ವರ್ಷದಿಂದ ನಿರಂತರ ಕೆಲಸಗಳು ನಡೆಯುತ್ತಿವೆ. ಅದೊಮ್ಮೆ ಕೆಂಪುಕೋಟೆಯ ಮೇಲೆ ನಿಂತು ದೇಶದ ಜನರನ್ನುದ್ದೇಶಿಸಿ ಮಾತನಾಡುತ್ತಾ ಮೋದಿ ‘ನೀವು ಹತ್ತು ಗಂಟೆ ಕೆಲಸ ಮಾಡಿದರೆ, ನಾನು ಹನ್ನೊಂದು ಗಂಟೆಗಳ ಕಾಲ ಕಾರ್ಯ ನಿರ್ವಹಿಸುವೆ. ನೀವು ಹನ್ನೆರಡು ಗಂಟೆ ಕೆಲಸ ಮಾಡಿದರೆ, ನಾನು ಹದಿಮೂರು ಗಂಟೆಗಳ ಕೆಲಸ ಮಾಡುವೆ’ ಎಂದಿದ್ದರಲ್ಲ,‌ ಮೋದಿಯವರು ತಮ್ಮ ಮಾತನ್ನು ಉಳಿಸಿಕೊಂಡು ಹಗಲು-ರಾತ್ರಿ ಭಾರತವನ್ನು ವಿಶ್ವಗುರುತ್ವಕ್ಕೇರಿಸಲು ಕಾರ್ಯ ನಿರ್ವಹಿಸುತ್ತಿದ್ದಾರೆ. ದೇಶದ ವಿವಿಧೆಡೆಗಳಿಂದ 15 ಲಕ್ಷಕ್ಕೂ ಮಿಕ್ಕಿ ಜನ ವಿಕಸಿತ ಭಾರತದ ಕುರಿತ ತಮ್ಮ ಯೋಜನೆಗಳನ್ನು, ವಿಚಾರವನ್ನು ಹಂಚಿಕೊಂಡಿದ್ದಾರೆ. ಅದಾಗಲೇ 2029ರಲ್ಲಿ ಭಾರತದಲ್ಲಿ ನಡೆಯಬೇಕಿರುವ ಯುವ ಒಲಿಂಪಿಕ್ಸ್‌ನ ತಯಾರಿ ಪ್ರಾರಂಭವಾಗಿದೆ. 2030ರ ವೇಳೆಗೆ ರೈಲ್ವೆ ಕ್ಷೇತ್ರದಲ್ಲಿ ಭಾರತವನ್ನು ಕಾರ್ಬನ್ ಮುಕ್ತ ಮಾಡುವಲ್ಲಿ ಕೆಲಸ ಆರಂಭವಾಗಿದೆ. ಮೋದಿಯವರ ಸರ್ಕಾರ ದೊಡ್ಡ ಗುರಿಯೊಂದಿಗೆ ಮುನ್ನುಗ್ಗುತ್ತಿದೆ. ನೆನಪಿಡಿ, ಯಾರು ಗುರಿಯೆಡೆಗೆ ನಿಶ್ಚಿತವಾಗಿ ಸಾಗುವರೋ, ಅವರು ಅದನ್ನು ತಮ್ಮ ಕಣ್ಣೆದುರೇ ಅನಾವರಣಗೊಳಿಸಿಕೊಳ್ಳುವವರೆಗೂ ವಿರಮಿಸುವವರಲ್ಲ.

ಮತ್ತೂ ಅಚ್ಚರಿಯ ಸಂಗತಿ ಗೊತ್ತೇ? ವಿವಿಧ ದೇಶಗಳು ಜುಲೈ, ಆಗಸ್ಟ್, ಸಪ್ಟೆಂಬರ್‌ನಲ್ಲಿ ನಡೆಯಲಿರುವ ಸಭೆಗಳಿಗೆ, ಕಾರ್ಯಕ್ರಮಗಳಿಗೆ ಮೋದಿಯವರನ್ನು ಆಮಂತ್ರಿಸುತ್ತಿದೆ. ಅಂದರೆ, ಇಡಿಯ ಜಗತ್ತು ‘ಆಯೆ ಗಾ ತೊ, ಮೋದಿ ಹೀ’ (ಮೋದಿಯೇ ಮತ್ತೆ ಮರಳುವುದು) ಎಂಬುದನ್ನು ದೃಢವಾಗಿ ನಂಬಿದೆ. ಅವರ ಮೂರನೇ ಅವಧಿಗೆ ಜಗತ್ತು ಸಂಕಲ್ಪ ಮಾಡಿಯಾಗಿದೆ. ನಾವು-ನೀವು ಈ ನಿಟ್ಟಿನಲ್ಲಿ ದೃಢಸಂಕಲ್ಪರಾಗಬೇಕಷ್ಟೇ.

-ಪ್ರಿಯಾ ಶಿವಮೊಗ್ಗ