370 ತೆಗೆದ ಮೋದಿಗೆ 370 ಸೀಟು ಕೊಡದಿದ್ದರೆ ಹೇಗೆ?!

ಸಮಾಜದಲ್ಲಿ ಜಾಗೃತಿ ಮೂಡಿಸಲು ಮತ್ತು ಆಖ್ಯಾಯಿಕೆಯನ್ನು(Narrative) ರೂಪಿಸಲು ಸಿನಿಮಾ ಅತ್ಯಂತ ಜನಪ್ರಿಯ ಹಾಗೂ ಪ್ರಬಲ ಮಾಧ್ಯಮ. ಇದನ್ನು ಪರಿಣಾಮಕಾರಿಯಾಗಿ ಬಳಸಿಕೊಂಡಿದ್ದು ಎಡಪಂಥೀಯರು. ತಮ್ಮ ಸಿದ್ಧಾಂತವನ್ನು ಸದ್ದಿಲ್ಲದೆ ಸಿನಿಮಾ, ನಾಟಕಗಳ ಮೂಲಕ ಜನರ ತಲೆಗೆ ತುಂಬುವಲ್ಲಿ ಸಫಲರಾಗಿದ್ದು ಇದರ ಮೂಲಕವೇ. ಅದರಲ್ಲೂ ಬಾಲಿವುಡ್ ಅಂತೂ ಭಾರತ ವಿರೋಧಿತನದ ಬೌದ್ಧಿಕ ಭಯೋತ್ಪಾದನೆಯ ಭದ್ರಕೋಟೆಯಾಗಿ ರೂಪುಗೊಂಡಿತು. ಭಾರತವನ್ನು ಕೀಳಾಗಿ ಬಿಂಬಿಸುವುದು, ಹಿಂದೂಗಳನ್ನು ಅವಮಾನಿಸುವುದು, ಭಯೋತ್ಪಾದಕರನ್ನು ಅಮಾಯಕರಂತೆ ಚಿತ್ರಿಸುವುದೇ ಪ್ರಶಸ್ತಿ ಗಿಟ್ಟಿಸಿಕೊಳ್ಳಲು ಇರುವ ಏಕಮಾತ್ರ ಮಾನದಂಡವಾಗಿತ್ತು‌. ಆದರೆ 2014ರ ನಂತರ ಮೋದಿ‌ ನೇತೃತ್ವದ ರಾಷ್ಟ್ರವಾದಿ ಸರ್ಕಾರ ದೇಶದ ವಾತಾವರಣ ಬದಲಾಯಿತು. ತದನಂತರ ಬೇಬಿ, ಕಾಶ್ಮೀರ್ ಫೈಲ್ಸ್, ರಾಝಿ, ಉರಿ-ಸರ್ಜಿಕಲ್ ಸ್ಟ್ರೈಕ್ ತರಹದ ಒಂದಷ್ಟು ಸಿನಿಮಾಗಳು ನಿರ್ಮಾಣವಾದವು.
ಎರಡು ವರ್ಷಗಳ ಹಿಂದೆ ತೆರೆಕಂಡಿದ್ದ ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ಕಾಶ್ಮೀರ್ ಫೈಲ್ಸ್‌ ಸಿನಿಮಾ 1990 ರ ಆಸುಪಾಸಿನಲ್ಲಿ ಕಾಶ್ಮೀರದ ಹಿಂದೂಗಳ ದುಸ್ಥಿತಿಯನ್ನು ಸಿನಿಮಾ ಮೂಲಕ ಪ್ರೇಕ್ಷಕರಿಗೆ ಪರಿಚಯಿಸುವಲ್ಲಿ ಯಶಸ್ವಿಯಾಗಿದ್ದಷ್ಟೇ ಅಲ್ಲ, ಬಾಕ್ಸ್ ಆಫೀಸ್‌ ಸಂಗ್ರಹದಲ್ಲೂ ದಾಖಲೆ ನಿರ್ಮಿಸಿತ್ತು. ಇತ್ತೀಚಿಗೆ ಬಿಡುಗಡೆಯಾದ ‘ಆರ್ಟಿಕಲ್ 370’ ಸಿನಿಮಾ‌ ಕಾಶ್ಮೀರದ 370ನೇ ವಿಧಿಯನ್ನು ಹೇಗೆ ರದ್ದು ಮಾಡಲಾಯಿತು, ಅದಕ್ಕೆ ಕಾರಣವಾದ ಘಟನೆಗಳು ಯಾವುವು, ಈ ನಿರ್ಧಾರ ಯಶಸ್ವಿಯಾಗಲು ಕಾರಣಕರ್ತರು ಯಾರು ಎಂಬುದನ್ನು ತಿಳಿಸುತ್ತದೆ. ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಬೇಕೆಂಬ ಜವಾಹರ್ ಲಾಲ್ ನೆಹರೂ‌ ಮಾಡಿದ ಒಂದು ಪ್ರಮಾದ ಕಾಶ್ಮೀರದ ಜನರ ಬದುಕನ್ನು ಉಧ್ವಸ್ಥಗೊಳಿಸಿ ಭಾರತದ ಅಖಂಡತೆಗೆ ಕಂಟಕಪ್ರಾಯವಾಯಿತು.

ಇಷ್ಟಕ್ಕೂ ಏನಿದು ಆರ್ಟಿಕಲ್ 370?

ವಾಸ್ತವವಾಗಿ ಆರ್ಟಿಕಲ್ 370 ಸಂವಿಧಾನದೊಳಗಿನ ತಾತ್ಕಾಲಿಕ ವಿಧಿ. ಅದರ ಮೂಲಕ ಜಮ್ಮು-ಕಾಶ್ಮೀರಕ್ಕೆ ವಿಶೇಷವಾದ ಮತ್ತು ಸ್ವಾಯತ್ತ ಅಧಿಕಾರವನ್ನು ನೀಡಲಾಗಿತ್ತು. ಸ್ವಾತಂತ್ರ್ಯದ ಹೊಸ್ತಿಲಲ್ಲಿ ಅನೇಕ ರಾಜ್ಯಗಳು ಭಾರತದೊಂದಿಗೆ ವಿಲೀನಗೊಳ್ಳುವಾಗ ಜಮ್ಮು-ಕಾಶ್ಮೀರ ರಕ್ಷಣೆ, ವಿದೇಶಾಂಗ ಮತ್ತು ಸಂವಹನ ವಿಚಾರಗಳಲ್ಲಲ್ಲದೇ ಬೇರೆ ಯಾವ ವಿಚಾರದಲ್ಲೂ ಕೇಂದ್ರಸರ್ಕಾರ ಮೂಗು ತೂರಿಸುವಂತಿಲ್ಲ ಎಂದು ಕೇಳಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಆರ್ಟಿಕಲ್ 370 ಸಂವಿಧಾನದೊಳಗೆ ತಾತ್ಕಾಲಿಕ ವಿಧಿಯಾಗಿ ಸೇರ್ಪಡೆಗೊಂಡಿತ್ತು. ಸ್ವತಃ ಜಮ್ಮು-ಕಾಶ್ಮೀರ ಸರ್ಕಾರ ಕೇಂದ್ರಸರ್ಕಾರವನ್ನು ಈ ವಿಧಿ ತೆಗೆಯುವಂತೆ ಕೇಳಿಕೊಳ್ಳಬಹುದು ಎಂಬ ನಿಯಮ ಅದರಲ್ಲಿ ಸೇರಿತ್ತು. ಇದರೊಟ್ಟಿಗೆ ಆರ್ಟಿಕಲ್ 35ಎ ಜಮ್ಮು-ಕಾಶ್ಮೀರದ ನಾಗರೀಕರನ್ನು ಗುರುತಿಸುವ ದೃಷ್ಟಿಯಿಂದ ರೂಪಿಸಲ್ಪಟ್ಟಿತ್ತು. ಈ ವಿಧಿಗಳಿಂದ ಜಮ್ಮು-ಕಾಶ್ಮೀರಕ್ಕೆ ಪ್ರತ್ಯೇಕ ಧ್ವಜ ದೊರೆತಿತ್ತು ಮತ್ತು ಸ್ವಯಮಾಧಿಕಾರ ಸಿದ್ದಿಸಿತ್ತು. ಅಲ್ಲಿನ ಮುಖ್ಯಮಂತ್ರಿಯನ್ನು ಪ್ರಧಾನಮಂತ್ರಿ ಎಂದೇ ಹೇಳಿಕೊಳ್ಳಲಾಗುತ್ತಿತ್ತು. ಒಟ್ಟಿನಲ್ಲಿ ಕಾಶ್ಮೀರ ಕೊಳ್ಳದ ಮುಸಲ್ಮಾನ- ರಿಗೆ ವಿಶೇಷ ಅಧಿಕಾರವಿದ್ದು ಉಳಿದವರೆಲ್ಲ ಕಣ್ಣೀರಿನಲ್ಲಿ ಕೈತೊಳೆಯುವಂತಹ ಪರಿಸ್ಥಿತಿಯನ್ನೇ ಆರ್ಟಿಕಲ್ 370 ಎನ್ನಬಹುದು. ಜಮ್ಮು-ಕಾಶ್ಮೀರವನ್ನು ಇಡಿಯ ಭಾರತದಿಂದ ಸದಾ ಪ್ರತ್ಯೇಕವಾಗಿರಿಸುವಲ್ಲಿ ಈ ವಿಧಿಯ ಪಾತ್ರ ಬಲುದೊಡ್ಡದ್ದಾಗಿತು. ಈ ಕಾರಣದಿಂದಾಗಿಯೇ ಪ್ರತ್ಯೇಕತಾವಾದಿಗಳಿಗೆ ಸಾಕಷ್ಟು ಶಕ್ತಿ ದೊರೆತಿತ್ತಲ್ಲದೇ ಜಮ್ಮು-ಕಾಶ್ಮೀರದ ಅಭಿವೃದ್ಧಿ ನನೆಗುದಿಗೆ ಬಿದ್ದಿತ್ತು. ಸೈನ್ಯದಿಂದಲೇ ಕಾಶ್ಮೀರವನ್ನು ಕಾಪಾಡಿಕೊಳ್ಳುವ ಮತ್ತು ಈ ಕಾರಣಕ್ಕಾಗಿ ಜಗತ್ತಿನೆದುರು ತಲೆತಗ್ಗಿಸುವ ವಾತಾವರಣ ನಮ್ಮದಾಗಿತ್ತು. ಭಾರತದ ವಿರುದ್ಧ ಬೇಕೆಂದಾಗ ಕತ್ತಿ ಪ್ರಯೋಗಿಸುವ ಅವಕಾಶವನ್ನು ಚೀನಾ ಆದಿಯಾಗಿ ಅನೇಕ ವಿದೇಶೀ ಶಕ್ತಿಗಳಿಗೆ ಕಾಶ್ಮೀರ ಕೊಟ್ಟಿತ್ತು. ಅದನ್ನು ತೆಗೆದು ಬಿಸಾಡುವುದು ಸವಾಲಷ್ಟೇ ಅಲ್ಲ, ಭಾರತದ ಪಾಲಿಗೆ ಸಾವು-ಬದುಕಿನ ನಿರ್ಣಯವೂ ಆಗಿತ್ತು.

ಹೀಗೆ ತಾತ್ಕಾಲಿಕವಾಗಿದ್ದ ಈ 370ನೇ ವಿಧಿಯನ್ನು ಮೋದಿ ಸರ್ಕಾರ ಆಗಸ್ಟ್ 5, 2019 ರಂದು ಸಂವಿಧಾ‌ನ ಬದ್ಧವಾಗಿ ತೆಗೆದುಹಾಕಿ ದಶಕಗಳ ಈ ಅಪಸವ್ಯವನ್ನು ಸರಿಪಡಿಸಿದರು. ಆರ್ಟಿಕಲ್ 370 ನ್ನು ತೆಗೆಯುವುದು ಭಾಜಪದ ದಶಕಗಳ ಗುರಿಯಾಗಿತ್ತಾದರೂ ಈ ದಿಟ್ಟ ನಿರ್ಧಾರವನ್ನು ಕೈಗೊಳ್ಳಲು ಮೋದಿ-ಷಾ ಜೋಡಿಯೇ ಬರಬೇಕಾಯ್ತು. 370 ನೇ ವಿಧಿಯ ರದ್ದತಿಯ ಪೂರ್ವದಲ್ಲಿ ಕೇಂದ್ರ ಸರ್ಕಾರ ತೆಗೆದುಕೊಂಡ ಮುನ್ನೆಚ್ಚರಿಕೆ ಮತ್ತು ಕ್ರಮಗಳು ನಿಜಕ್ಕೂ ಪ್ರಶಂಸನೀಯ.
ನಿರ್ಧಾರವನ್ನು ಜಾರಿಗೆ ಬಂದ ನಂತರ ನಡೆಯಬಹುದಾದ ವ್ಯಾಪಕವಾದ ಕೋಮು ಗಲಭೆಗಳು, ಪಾಕಿಸ್ತಾನ ಮತ್ತು ಚೀನಾಗಳು ಭಾರತದ ವಿರುದ್ಧ ಇದನ್ನು ಬಳಸಿಕೊಳ್ಳುವ ಅವಕಾಶ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಇದರ ಪರಿಣಾಮಗಳು ಹೀಗೆ ಎಲ್ಲದಕ್ಕೂ ಪರಿಹಾರ ಕಂಡುಕೊಂಡೇ ಈ ನಿರ್ಧಾರಕ್ಕೆ ಅಣಿಯಾಗಿದ್ದರು. ಕೇಂದ್ರ ಸರ್ಕಾರ ಈ ಮಹತ್ವದ ತೀರ್ಮಾನದ ವಿಷಯವನ್ನು ಗೌಪ್ಯವಾಗಿಟ್ಟಿತ್ತೆಂದರೆ ಗೃಹಮಂತ್ರಿಗಳು ರಾಜ್ಯಸಭೆಯಲ್ಲಿ ಮಂಡಿಸುವವರೆಗೆ ವಿರೋಧ ಪಕ್ಷದ ನಾಯಕರಾದಿಯಾಗಿ ಮಾಧ್ಯಮಗಳಿಗೆ ಅನೇಕ ಸ್ವಪಕ್ಷದ ನಾಯಕರಿಗೂ ತಿಳಿದಿದ್ದಿಲ್ಲ. ಆರ್ಟಿಕಲ್‌ 370 ಚಲನಚಿತ್ರ ವಿವಿಧ ಅಧ್ಯಾಯಗಳ ಮುಖಾಂತರ ಈ ಎಲ್ಲ ಘಟನೆಗಳನ್ನು ಸುಂದರವಾಗಿ ತಿಳಿಸಿಕೊಡುವ ಪ್ರಯತ್ನಮಾಡಿದೆ. ಆರ್ಟಿಕಲ್‌ 370 ರದ್ದುಪಡಿಸುವ ಮೊದಲು ಹಲವು ತಿಂಗಳುಗಳ ಕಾಲ NIA ನಡೆಸಿದ ಕಾರ್ಯಾಚರಣೆಗಳು, ಕಾಶ್ಮೀರದಲ್ಲಿ ನಡೆಯುವ ಗಲಭೆಗಳಿಗೆ ನೆರವಾಗುವ ಆರ್ಥಿಕ ಮೂಲಗಳನ್ನು ಸರ್ಕಾರ ಸಮರ್ಥವಾಗಿ ನಿಯಂತ್ರಿಸಿದ ರೀತಿ, ಪ್ರತ್ಯೇಕತಾವಾದಿಗಳು ಮತ್ತು ಭ್ರಷ್ಟ ಅಧಿಕಾರಿಗಳ ವಿರುದ್ಧ ಕೈಗೊಂಡ ಕ್ರಮಗಳು, ಭಯೋತ್ಪಾದನೆಯನ್ನು ಹಂತ ಹಂತವಾಗಿ ಮಟ್ಟಹಾಕಿದ ಚತುರತೆ ಇತ್ಯಾದಿ ಒಳಹುಗಳನ್ನು ಸಿನಿಮಾದಲ್ಲಿ ಸೂಕ್ಷ್ಮವಾಗಿ ತೋರಿಸಲಾಗಿದೆ. ಆರ್ಟಿಕಲ್ 370 ಸಿನಿಮಾದ ಬಹುಪಾಲು ನೈಜ ಘಟನೆಗಳಿಂದ ಪ್ರೇರಿತವಾದ ಚಿತ್ರವಾಗಿದ್ದರೂ ತಯಾರಕರ ಸೃಜನಶೀಲ ಸ್ವಾತಂತ್ರ್ಯ ಚಲನಚಿತ್ರದ ಕೊನೆಯ ಅರ್ಧಗಂಟೆಯನ್ನು ಮತ್ತಷ್ಟು ರೋಚಕಗೊಳಿಸುತ್ತದೆ.’ಕಾಶ್ಮೀರಕ್ಕಾಗಿ ಪ್ರಾಣ ಕೊಡ್ತೇವೆ’ ಅಂತ ಅಮಿತ್ ಶಾ ಪಾತ್ರಧಾರಿ ಹೇಳಿದಾಗ ಅದೊಂದು ರೋಮಾಂಚನಕಾರಿ ಅನುಭವ.

ಕಾಶ್ಮೀರದಲ್ಲಿ ಉಗ್ರರ ಪೋಸ್ಟರ್ ಬಾಯ್‌ ಆಗಿದ್ದ ಭಯೋತ್ಪಾದಕ ಬುರ್ಹಾನ್ ವಾನಿಯನ್ನು ಸೇನೆ 2016 ರಲ್ಲಿ ಎನ್‌ಕೌಂಟರ್ ಮಾಡಿದ್ದನ್ನು ಉಗ್ರ ಸಂಘಟನೆಗಳು, ಎಡಪಂಥೀಯರು, ಪತ್ರಕರ್ತರ ಮತ್ತು ಪ್ರತ್ಯೇಕತಾವಾದಿಗಳು ಹೇಗೆಲ್ಲಾ ಬಳಸಿಕೊಂಡರು ಎಂಬುದನ್ನು ಚಲನಚಿತ್ರ ಮತ್ತೊಮ್ಮೆ ನೆನಪಿಸಿದೆ. ರಾಜದೀಪ್ ಸರ್ದೇಸಾಯಿಯಂತಹ ಪತ್ರಕರ್ತರು ಉಗ್ರ ಬುರ್ಹಾನಿ ವಾನಿಯನ್ನು ಭಗತ್ ಸಿಂಗ್‌ಗೆ ಹೋಲಿಸಿದ್ದನ್ನು, ಮಾಧ್ಯಮಗಳು ಆತನನ್ನು ‘ಬಡ ಹೆಡ್‌ಮಾಸ್ಟರ್ ಮಗ’ ಅಂತ ಬಿಂಬಿಸಲು ಯತ್ನಿಸಿದ್ದು ಇನ್ನೂ ಹಸಿಯಾಗಿದೆ‌.ಒಟ್ಟಾರೆಯಾಗಿ ಆರ್ಟಿಕಲ್ 370 ನಾವೆಲ್ಲರೂ ನೋಡಲೇಬೇಕಾದ ಸಿನಿಮಾ.ಸಿನಿಮಾ ಬಿಡುಗಡೆಯಾದ ನಂತರ ಕೆಲವು ಆಂದೋಲನಾ ಜೀವಿಗಳು ಮೋದಿಗೇಕೆ ಇದರ ಕ್ರೆಡಿಟ್ಟು ಅಂತ ಕೇಳಲು ಶುರು ಮಾಡಿದ್ದಾರೆ‌.ಆರ್ಟಿಕಲ್ 370 ತೆಗೆದಿದ್ದರ ಕ್ರೆಡಿಟ್ ಮೋದಿಗಲ್ಲದೇ ರಾಹುಲ್ ಗಾಂಧಿಗೆ ನೀಡಲು ಸಾಧ್ಯವೇನು?.

370 ನೇ ಮತ್ತು 35ಎ ವಿಧಿಗಳನ್ನು ತೆಗೆದ ನಂತರ ಕಾಶ್ಮೀರ ಅಭಿವೃದ್ಧಿಗೆ ತನ್ನನ್ನು ತಾನು ತೆರೆದುಕೊಂಡಿದೆ. ಕಲ್ಲು ಎಸೆಯುವ ಘಟನೆಗಳು ನಿಂತು ಹೋಗಿವೆ, ಪ್ರವಾಸಿಗರ ಸಂಖ್ಯೆ ಮೊದಲಿಗಿಂತ ಹೆಚ್ಚಾಗಿದೆ. ಸಾವಿರಾರು ಕೋಟಿ ಹೂಡಿಕೆಯಾಗುತ್ತಿದೆ.ಹೊಸಹೊಸ‌ ಉದ್ಯೋಗಾವಕಾಶಗಳು ಸೃಷ್ಟಿಯಾಗಿವೆ. ಯುವಕರ ಮನಸ್ಥಿತಿ ಬದಲಾದಂತೆ ಕಾಣುತ್ತಿದೆ‌.ನರೇಂದ್ರ ಮೋದಿ ಸರ್ಕಾರ ಜಮ್ಮು-ಕಾಶ್ಮೀರದಲ್ಲಿ ಮಾಡುತ್ತಿರುವ ಅಭಿವೃದ್ಧಿಯನ್ನು ಕಂಡು ನೆರೆಯ ಪಾಕ್ ಆಕ್ರಮಿತ ಕಾಶ್ಮೀರದ ಜನರೂ ಪಿಒಕೆಯನ್ನು ಭಾರತದೊಂದಿಗೆ ವಿಲೀನಗೊಳಿಸುವಂತೆ ಚಳವಳಿ ಮಾಡುತ್ತಿದ್ದಾರೆ. ಭಾರತದೊಂದಿಗೆ ಕಾಶ್ಮೀರ ಏಕರಸವಾಗುತ್ತಿದೆ. ಕರ್ನಾಟಕದಲ್ಲಿ ಪಾಕಿಸ್ತಾನದ ಪರ ಘೋಷಣೆ ಮೊಳಗಿದ್ದಕ್ಕೆ ಭಾರತದ ಪರವಾಗಿ ಕಾಶ್ಮೀರದಲ್ಲಿ ಪ್ರತಿಭಟಿಸುತ್ತಾರೆಂದರೆ ಎಂತಹ ಬದಲಾವಣೆ ನೀವೇ ಊಹಿಸಿ.

ಏನೇ ಹೇಳಿ ಭಾರತೀಯರಿಗೆ ಮರೆವು ತುಸು ಹೆಚ್ಚೇ. ಕೇವಲ ಹತ್ತು ವರ್ಷದ ಹಿಂದೆ ನಮ್ಮ ರೈಲು ನಿಲ್ದಾಣಗಳು, ರಸ್ತೆಗಳು ಹೇಗಿದ್ದವು ಅನ್ನೋದನ್ನು ಮರೆತು ಬಿಟ್ಟಿದ್ದೇವೆ. ಪುಲ್ವಾಮಾ ದಾಳಿಯ ನಂತರ ಸಮರ್ಥ ನಾಯಕತ್ವದ ಪರಿಣಾಮ ಭಾರತದ ಸೇನೆ ಮಾಡಿದ ಸರ್ಜಿಕಲ್ ಸ್ಟ್ರೈಕ್ ನಮಗೀಗ ಬೇರೆಯವರು ನೆನಪಿಸಬೇಕು. ಹಾಗಾಗಿ ಈ ಅಪ್ರತಿಮ ಸಾಹಸ ಸಾಧನೆಗಳನ್ನು ನೆನೆಪಿಸಲು ಈ ರೀತಿಯ ಸಿನಿಮಾಗಳು ಅವಶ್ಯ.

ನರೇಂದ್ರ ಮೋದಿಯವರು ಸಾಹಸ ಪ್ರಿಯ. ವಿರೋಧಿಗಳು ಚಾಲೆಂಜ್ ಮಾಡಿದಷ್ಟೂ ಅವರು ಬಲವಾಗುತ್ತಾರೆ. ತಾಕತ್ತಿದ್ರೆ ಕಾಶ್ಮೀರದ 371ನೇ ವಿಧಿಯನ್ನು ತೆಗೆದು ನೋಡಿ ಅಂತ ಫರೂಕ್ ಅಬ್ದುಲ್ಲಾ ಸೇರಿದಂತೆ ಅನೇಕರು ಸವಾಲೆಸೆದಿದ್ದರು‌.ಈಗ ಆರ್ಟಿಕಲ್ 371 ಇತಿಹಾಸದ ಪುಟಗಳಲ್ಲಿ ಸೇರಿತು. ‘ರಾಮ ಮಂದಿರ ಕಟ್ಟಲು ಸಾಧ್ಯವೇ ಇಲ್ಲ ಅದೊಂದು ಕೇವಲ ಚುನಾವಣಾ ಆಶ್ವಾಸನೆ ಮಾತ್ರ’ ಎನ್ನುತ್ತಿದ್ದವರಿಗೆ ಅಯೋಧ್ಯೆಯಲ್ಲಿ ನಿಂತಿರುವ ಭವ್ಯ ರಾಮ ಮಂದಿರವೇ ಉತ್ತರ. ‘ತಮಿಳುನಾಡಿನಲ್ಲಿ ಬಿಜೆಪಿ ಸಾಧಿಸಿ ತೋರಿಸಲಿ’ ಎಂದು ರಾಹುಲ್ ಗಾಂಧಿ ಹಿಂದೊಮ್ಮೆ ಹೇಳಿದ್ದ, ಈಗ ಮೋದಿಯ ಮಾರ್ಗದರ್ಶನದಲ್ಲಿ ಅಣ್ಣಾಮಲೈ ತಮಿಳುನಾಡಿನಲ್ಲಿ ಧೂಳೆಬ್ಬಿಸುತ್ತಿದ್ದಾರೆ. ಇಂಗ್ಲೀಷ್ ಬರದ ಮೋದಿ ವಿದೇಶಾಂಗ ನೀತಿಯನ್ನು ಹೇಗೆ ನಿಭಾಯಿಸುತ್ತಾರೆ ಎಂದು ಕೊಂಕು ನುಡಿದವರು ಮೋದಿಯ ಆಡಳಿತದಲ್ಲಿ ವಿದೇಶಗಳು ಭಾರತವನ್ನು ನಾಯಕನೆಂದು ಒಪ್ಪಿಕೊಳ್ಳುತ್ತಿರುವುದನ್ನು ನೋಡಿ ಹತಾಶರಾಗಿದ್ದಾರೆ. ಇದು ಮೋದಿಯ ತಾಕತ್ತು. ಅದು 2024 ರ ಲೋಕಸಭಾ ಚುನಾವಣೆಯಲ್ಲೂ ಮುಂದುವರೆಯಲಿ.ಅದಕ್ಕೆ ನಮ್ಮೆಲ್ಲರ ಬೆಂಬಲವಿರಲಿ.

-ಗುರುಪ್ರಸಾದ್ ಆರ್