ನಮೋ ರಾಮೋ‌ ವಿಜಯತೇ!

ಕಳೆದ ಹದಿನೈದು ದಿನಗಳಿಂದ ಫೇಸ್ಬುಕ್‌ನಲ್ಲಿ, ವಾಟ್ಸಾಪ್ ಗ್ರೂಪುಗಳಲ್ಲಿ, ಟಿವಿ ಚಾನಲ್‌ನಲ್ಲಿ ಎಲ್ಲಿ ನೋಡಿದರೂ ರಾಮನ ಗುಣಗಾನವೇ. ಮನೆಗಳ ಮೇಲೆ ಕೇಸರಿ ಬಾವುಟ, ಬೀದಿಗಳಲ್ಲಿ ರಾಮನ ಹೆಸರಿನಲ್ಲಿ ಅನ್ನದಾನ,
ಮನೆಯಂಗಳದ ಮುಂದೆ ರಂಗೋಲಿ, ರಸ್ತೆಗಳು, ವಠಾರಗಳು, ಅಪಾರ್ಟ್ಮೆಂಟುಗಳು,ರಾಮನ ಅವಧಪುರಿಯನ್ನೂ ಸೇರಿದಂತೆ ಹಳ್ಳಿಹಳ್ಳಿಯ ದೇವಸ್ಥಾನಗಳು ಎಲ್ಲವೂ ರಾಮನ ಸ್ವಾಗತಕ್ಕಾಗಿ ಶೃಂಗಾರಗೊಂಡು ನಳನಳಿಸುತ್ತಿದ್ದವು. ರಾಮನೆಡೆಗಿನ ಭಾರತೀಯರ ಶ್ರದ್ಧೆ ಮತ್ತು ಭಕ್ತಿ ಊಹೆಗೂ ಮೀರಿದ್ದು. ಭಾರತ ಕಳೆಗಟ್ಟಿದ ಸಂಭ್ರಮವನ್ನು ಕಣ್ತುಂಬಿಕೊಂಡದ್ದು ನಮ್ಮ ಬದುಕಿನ ಅಮೂಲ್ಯ ಗಳಿಗೆಗಳಲ್ಲೊಂದು ಎಂದರೆ ಅತಿಶಯೋಕ್ತಿಯಲ್ಲ.

ಈ ಸಂಭ್ರಮದ ಘನತೆಯ ತೂಕವನ್ನು ಮತ್ತಷ್ಟು ಹೆಚ್ಚಿಸಿದ್ದು ಪ್ರಧಾನಿ ನರೇಂದ್ರ ಮೋದಿಯವರ ನಡವಳಿಕೆ. ಮೋದಿಯೂ ಸಹ ಇತರ ರಾಜಕಾರಣಿಗಳಂತೆ ನಿಗದಿತ ದಿನದಂದೇ ಆಗಮಿಸಿ ರಿಬ್ಬನ್ ಕತ್ತರಿಸಿ ಮಂದಿರವನ್ನು ಉದ್ಘಾಟಿಸಿ ಹೊರಡಬಹುದಿತ್ತು. ಆದರೆ ಅವರು ಹಾಗೆ ಮಾಡಲಿಲ್ಲ.‌ ಪ್ರಾಣ ಪ್ರತಿಷ್ಠಾಪನೆಯ ಕೈಂಕರ್ಯಕ್ಕೂ ಮುನ್ನ ಶಾಸ್ತ್ರದ ಅನುಸಾರ ಹನ್ನೊಂದು ದಿನಗಳ ಅನುಷ್ಠಾನ ಕೈಗೊಂಡು ಕಠಿಣ ಉಪವಾಸದ ವ್ರತ ಮಾಡಿದರು, ನೆಲದ‌ ಮೇಲೆ ಮಲಗಿದರು. ಅಕ್ಷರಶಃ ಮನೆಯ ಯಜಮಾನನಂತೆ ಕಂಡರು. ಮೋದಿ ಇದ್ಯಾವುದನ್ನೂ ಮಾಡುವ ಅನಿವಾರ್ಯತೆ ಇರಲಿಲ್ಲ. ಧರ್ಮವನ್ನು ಪ್ರಾಮಾಣಿಕತೆಯಿಂದ ಅನುಸರಿಸುವ ಮತ್ತು ದೇಶವಾಸಿಗಳನ್ನು ತನ್ನ ಕುಟುಂಬವೆಂದು ಆತ್ಮಸಾಥ್ ಮಾಡಿಕೊಂಡ ವ್ಯಕ್ತಿಯಿಂದ ಮಾತ್ರ ಇದೆಲ್ಲವೂ ಸಾಧ್ಯ. ಮೋದಿಯಾಕೆ ಪ್ರಾಣ ಪ್ರತಿಷ್ಠಾಪನೆಯಲ್ಲಿ ಪಾಲ್ಗೊಳ್ಳಬೇಕು ಎಂದು ಗೊಂದಲ ಸೃಷ್ಟಿಸುತ್ತಿದ್ದವರಿಗೆ ತಮ್ಮ ಆಚರಣೆಯಿಂದಲೇ ಉತ್ತರ ನೀಡಿದರು‌.

ರಾಮ ಮಂದಿರದಷ್ಟೇ ಸುದ್ದಿಯಾದದ್ದು ಮೋದಿಯವರ ದಕ್ಷಿಣ ಭಾರತ ಪ್ರವಾಸ. ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುತ್ತಲೇ ರಾಜ್ಯಗಳಲ್ಲಿ ಅಭಿವೃದ್ಧಿ ಕಾರ್ಯಗಳಿಗೂ ಚಾಲನೆ ನೀಡಿದರು. ರಾಮ ಲಕ್ಷ್ಮಣ, ಸೀತೆ 14 ವರ್ಷಗಳ ವನವಾಸವನ್ನು ಕಳೆದರು ಎಂಬ ಐತಿಹ್ಯವಿರುವ ಮಹಾರಾಷ್ಟ್ರದ ನಾಸಿಕ್‌‌ನಿಂದ ತಮ್ಮ ಪ್ರಯಾಣವನ್ನು ಆರಂಭಿಸಿದ ಮೋದಿ ಆಂಧ್ರಪ್ರದೇಶದ ಲೇಪಾಕ್ಷಿ ದೇವಾಲಯ, ತ್ರಿಶೂರ್‌ನ ಶ್ರೀ ರಾಮಸ್ವಾಮಿ ದೇವಾಲಯ, ಕೇರಳದ ಗುರುವಾಯೂರ್ ದೇವಾಲಯ, ತಿರುಚಿರಾಪಳ್ಳಿಯ ರಂಗನಾಥಸ್ವಾಮಿ ದೇವಾಲಯ, ರಾಮೇಶ್ವರಂನ ಶ್ರೀ ರಾಮನಾಥಸ್ವಾಮಿ ದೇವಾಲಯ ಮತ್ತು ತಮಿಳುನಾಡಿನ ಧನುಷ್ಕೋಡಿಯ ಕೋದಂಡರಾಮಸ್ವಾಮಿ ದೇವಾಲಯಗಳಿಗೆ ಭೇಟಿಕೊಟ್ಟು ಭಾವಸ್ಫುರಣಗೊಳಿಸಿದರು.ವಿಶೇಷವೆಂದರೆ ಮೋದಿ ಭೇಟಿ ನೀಡಿದ ಸ್ಥಳಗಳೆಲ್ಲವೂ ಶ್ರೀರಾಮ ಮತ್ತು ರಾಮಾಯಣಕ್ಕೆ ಸಂಬಂಧಿಸಿದ ಸಾಂಸ್ಕೃತಿಕ ಮತ್ತು ಧಾರ್ಮಿಕ ಪರಂಪರೆಯುಳ್ಳ ಸ್ಥಳಗಳು‌.

ಸೀತಾಪಹರಣದ ಸಂದರ್ಭದಲ್ಲಿ ಶ್ರೀರಾಮನಿಗೆ ಪಕ್ಷಿ ಜಟಾಯು ಸಿಕ್ಕಿದ್ದು ಲೇಪಾಕ್ಷಿಯಲ್ಲಿ ಎಂಬ ನಂಬಿಕೆ ಇದೆ. ರಾವಣನು ಸೀತೆಯನ್ನು ಅಪಹರಿಸಿಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಪಕ್ಷಿರಾಜ ಜಟಾಯು ಅವನನ್ನು ತಡೆಯಲು ಯತ್ನಿಸಿದ್ದಕ್ಕೆ ಕೋಪಗೊಂಡ ರಾವಣ ಜಟಾಯುವಿನ ರೆಕ್ಕೆಯನ್ನು ಕತ್ತರಿಸಿದ್ದ. ಇದರಿಂದ ಕೆಳಗೆ ಬಿದ್ದ ಪಕ್ಷಿ ಜಟಾಯು ಈ ಮಾರ್ಗವಾಗಿ ಶ್ರೀರಾಮ ಬರುವುದನ್ನೇ ಕಾಯುತ್ತಾ ಕುಳಿತಿತ್ತು. ಸೀತೆಯನ್ನು ಅರಸಿ ಬಂದ ಶ್ರೀರಾಮನನ್ನು ಕಂಡ ಕೂಡಲೇ ರಾವಣನಿಂದ ಸೀತಾಪಹರಣವಾದ ವಿಷಯವನ್ನು ತಿಳಿಸಿತ್ತು. ಗಾಯಗೊಂಡ ಪಕ್ಷಿಯನ್ನು ನೋಡಿದ ಶ್ರೀರಾಮ ಜಟಾಯುವನ್ನು ತನ್ನ ತೋಳುಗಳಲ್ಲಿ ಎತ್ತಿ ಕರುಣೆಯಿಂದ ಅವನಿಗೆ ಪ್ರಜ್ಞೆಯನ್ನು ಮರಳಿ ಪಡೆಯಲು ಸಹಾಯ ಮಾಡಿದನೆಂಬುದು ಇಲ್ಲಿಯ ಇತಿಹಾಸ. ಲೇಪಾಕ್ಷಿಯಲ್ಲಿ ವೀರಭದ್ರೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಅಲ್ಲಿ ರಾಮಾಯಣದ ಶ್ಲೋಕಗಳನ್ನು ಮತ್ತು ಗೊಂಬೆಯಾಟವನ್ನು ವೀಕ್ಷಿಸಿದರು.

ಧನುಷ್ಕೋಡಿಗೆ ಮೋದಿ ಕೋದಂಡ ರಾಮನ ದರ್ಶನ ಪಡೆದರು.ರಾವಣನ ಸಹೋದರ ವಿಭೀಷಣ ಮೊದಲ ಬಾರಿಗೆ ಶ್ರೀರಾಮನನ್ನು ಭೇಟಿ ಮಾಡಿದ್ದು ಇಲ್ಲಿಯೇ ಎನ್ನುವ ಪ್ರತೀತಿ ಇದೆ.ಅಷ್ಟೇ ಅಲ್ಲ, ರಾವಣನನ್ನು ಸೋಲಿಸುವುದಾಗಿ ಧನುಷ್ಕೋಡಿಯಲ್ಲೇ ಶ್ರೀರಾಮ ಪ್ರತಿಜ್ಞೆ ಮಾಡಿ ಲಂಕೆಯತ್ತ ಹೊರಟ ಎಂದೂ ಉಲ್ಲೇಖಿಸಲಾಗಿದೆ. ಶ್ರೀರಾಮ ಶಿವನನ್ನು ಪೂಜಿಸಿದ ಸ್ಥಳ ಮತ್ತು ರಾಮಸೇತು ಆರಂಭವಾಗುವ ಸ್ಥಳದಲ್ಲಿ ಮೋದಿ ಪೂಜೆ ಸಲ್ಲಿಸಿದರು. ಹಿಂದಿನ ಕಾಂಗ್ರೆಸ್ ಸರ್ಕಾರ ರಾಮಸೇತುವನ್ನೇ ಒಡೆದು ಹಾಕಲು ನಿರ್ಧರಿಸಿತ್ತು ಆದರೆ ಇಂದಿನ ಪ್ರಧಾನಿ ಅದೇ ಸೇತುವೆಗೆ ಪೂಜೆ ಸಲ್ಲಿಸಿ ಬದಲಾದ ಭಾರತೀಯ ರಾಜಕಾರಣವನ್ನು ಜಗತ್ತಿಗೆ ಒತ್ತಿ ಹೇಳಿದರು. ಶ್ರೀರಾಮಚಂದ್ರನೇ ಸ್ವತಃ ಆರಾಧಿಸಿ
ಶ್ರೀರಂಗಂನ ರಂಗನಾಥಸ್ವಾಮಿಗೆ ಪೂಜೆ ಸಲ್ಲಿಸಿದ್ದ ಎಂದು ಹೇಳಲಾಗುವ ಶ್ರೀರಂಗಂಗೆ ಯಾವುದೇ ಪ್ರಧಾನಿ ಭೇಟಿ ನೀಡಿರಲಿಲ್ಲ. ಇದೇ ಮೊದಲ ಬಾರಿಗೆ ಪ್ರಧಾನಿಯೊಬ್ಬರು ತಮಿಳುನಾಡಿನ ಶ್ರೀರಂಗಂನ ಶ್ರೀರಂಗನಾಥಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದು ವಿಶೇಷ .ಇನ್ನೊಂದು ಮುಖ್ಯ ಸಂಗತಿ ಎಂದರೆ ಮೋದಿ ಈ ರೀತಿ ಯಾವುದೇ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಿದಾಗಲೂ ಸಾಂಪ್ರದಾಯಿಕ ಶೈಲಿಯ ಉಡುಗೆಗಳನ್ನು ಅತ್ಯಂತ ಹೆಮ್ಮೆಯಿಂದ ಧರಿಸುತ್ತಾರೆ. ಭಾರತೀಯ ಉಡುಗೆಗಳನ್ನು ಹಾಕಿಕೊಳ್ಳುವುದು ಏನು ಮಹಾ ಅಂತ‌ ಎನಿಸಬಹುದು. ಆದರೆ ಹಣೆಗೆ ಕುಂಕುಮ ಹಚ್ಚಿಕೊಂಡರೆ ಕೋಮುವಾದಿ ಎನ್ನುವ, ಮಾಧ್ಯಮದ ಮುಂದೆ ಕುಂಕುಮವನ್ನು ಅಳಿಸಿಕೊಳ್ಳುವ ವಸಾಹತುಶಾಹಿ ಮನಸ್ಥಿತಿಯ ರಾಜಕಾರಣಿಗಳ ನಡುವೆ ಸನಾತನ ಧರ್ಮವನ್ನು ಸ್ವಾಭಿಮಾನದಿಂದ ಪಾಲಿಸೋದು ಚಿಕ್ಕ ಸಂಗತಿಯಲ್ಲ. ಹಾಗಾಗಿ ಮೋದಿಯವರನ್ನು ಈ ವಿಷಯಕ್ಕೆ ಅಭಿನಂದಿಸಲೇಬೇಕು.

ಕೇರಳದ ಗುರುವಾಯೂರ್ ದೇವಸ್ಥಾನಕ್ಕೆ ಪ್ರಧಾನಿ ಮೋದಿ ಭೇಟಿ ನೀಡಿದಾಗ ಮತ್ತೊಂದು ಕುತೂಹಲಕಾರಿ ದೃಶ್ಯವನ್ನು ನೀವು ಗಮನಿಸರಬಹುದು.ಈ ದೇವಾಲಯವು ತನ್ನದೇ ಆದ ಕಟ್ಟುನಿಟ್ಟಾದ ವಸ್ತ್ರ ಸಂಹಿತೆಯನ್ನು ಹೊಂದಿದೆ (ಧೋತಿ ಮತ್ತು ಬಿಳಿ ಶಾಲು) ಮತ್ತು ಈ ಉಡುಗೆ ಇಲ್ಲದೆ ನೀವು ಅಲ್ಲಿಗೆ ಪ್ರವೇಶಿಸಲು ಸಾಧ್ಯವಿಲ್ಲ.ಆದರೆ ಭದ್ರತಾ ಪ್ರೋಟೋಕಾಲ್ ಪ್ರಕಾರ ಪ್ರಧಾನಿಯವರು ಸದಾ ಎಸ್‌ಪಿಜಿ ಕಮಾಂಡೋಗಳಿಂದ ಸುತ್ತುವರೆದಿರುತ್ತಾರೆ ಮತ್ತು ಅವರೂ ತಮ್ಮದೇ ಆದ ಡ್ರೆಸ್ ಕೋಡ್ ಹೊಂದಿದ್ದಾರೆ. ಮೋದಿಯವರ ಸಲಹೆಯಂತೆ ಎಸ್‌ಪಿಜಿ ಕಮಾಂಡೋಗಳು ಕೂಡ ಧೋತಿ ಮತ್ತು ಶಾಲು ಧರಿಸಿ ಅವರೊಟ್ಟಿಗೆ ದೇವಸ್ಥಾನಕ್ಕೆ ತೆರಳಿದರು. ಆ ಮೂಲಕ ಮೋದಿ ದೇವಸ್ಥಾನದ ಪ್ರೋಟೋಕಾಲ್ ಮತ್ತು ಎಸ್‌ಪಿಜಿ ಪ್ರೋಟೋಕಾಲ್ ಎರಡನ್ನೂ ಪಾಲಿಸಿದರು‌.

ಬಾಬರ್ ಸಮಾಧಿಗೆ ನೆಹರು 1959 ರಲ್ಲಿ, ಇಂದಿರಾಗಾಂಧಿ 1968 ರಲ್ಲಿ, ರಾಜೀವ್‌ ಗಾಂಧಿ 1976 ರಲ್ಲಿ ಮತ್ತು ರಾಹುಲ್‌ ಗಾಂಧಿ 2005ರಲ್ಲಿ ಭೇಟಿ ಕೊಟ್ಟಿದ್ದಾರೆ. ಆದರೆ ಇವರ್ಯಾರೂ ರಾಮ ಜನ್ಮಸ್ಥಾನಕ್ಕೆ ಭೇಟಿ ನೀಡಿಲ್ಲ.ಮೊದಲಿನಿಂದಲೂ ಕಾಂಗ್ರೆಸ್‌ಗೆ ರಾಮ ಮಂದಿರವನ್ನು ಕಂಡರೆ ನಖಶಿಖಾಂತ ದ್ವೇಷ. ಮಂದಿರದ ನಿರ್ಮಾಣದ ವಿರುದ್ಧ ವಕೀಲರನ್ನು ನೇಮಿಸಿದ್ದೂ ಇವರುಗಳು ತಾನೇ. ಮಂದಿರದ ನಿರ್ಮಾಣದ ಸಮಯದಲ್ಲಿ “ವಿವಾದಿತ ರಾಮ ಮಂದಿರಕ್ಕೆ ನಾನು ದೇಣಿಗೆ ಕೊಡುವುದಿಲ್ಲ” ಎಂದು ಅವಮಾನಿಸಿದ್ದ ಸಿದ್ದರಾಮಯ್ಯನವರು ಈಗ ಜೈ ಶ್ರೀರಾಮ್ ಘೋಷಣೆ ಹಾಕುತ್ತಿದ್ದಾರೆ!

ರಾಹುಲ್ ಗಾಂಧಿ ಭಾರತ್ ಜೋಡೋ ಅಂತ ಯಾತ್ರೆಗೆ ಹೆಸರನ್ನಿಟ್ಟು ಭಾಷೆಯ ನೆಪದಲ್ಲಿ, ಭೌಗೋಳಿಕವಾಗಿ, ಜಾತಿಯ ಹೆಸರಲ್ಲಿ ದೇಶವನ್ನು ಒಡೆಯುವ ಕೆಲಸ ಮಾಡುತ್ತಿದ್ದರೆ ಮೋದಿ ಮಾತ್ರ ಉತ್ತರದಿಂದ ದಕ್ಷಿಣದವರೆಗೆ ಎಲ್ಲರನ್ನೂ ಬೆಸೆದು ‘ಏಕ್ ಭಾರತ್, ಶ್ರೇಷ್ಠ ಭಾರತ್’ ಅಂತ ಸಾಗುತ್ತಿದ್ದಾರೆ. ತಮ್ಮ ಪ್ರವಾಸದ ಮೂಲಕವೇ ಅಯೋಧ್ಯೆಯಲ್ಲಿ ನಡೆಯುತ್ತಿದ್ದ ರಾಮೋತ್ಸವವನ್ನು ರಾಷ್ಟ್ರೋತ್ಸವವನ್ನಾಗಿ ಮಾಡಿದ ಕೀರ್ತಿ ಮೋದಿಗೆ ಸಲ್ಲುತ್ತದೆ . ಅಯೋಧ್ಯೆಯ ರಾಮ ಮಂದಿರದ ಮುಂದೆ ನಿಂತಾಗ ಪ್ರತಿಯೊಬ್ಬರಿಗೂ ಇದು ತನ್ನದ್ದೇ ದೇವಸ್ಥಾನ ಎಂದು ಭಾಸವಾಗುವಂತಹ ಆಪ್ತ ವಾತಾವರಣವನ್ನು ನಿರ್ಮಿಸಿದ್ದಾರೆ‌. ಇದರಿಂದಾಗಿಯೇ ಬಾಲರಾಮನ ಪ್ರಾಣ ಪ್ರತಿಷ್ಠಾಪನೆಯ ದಿನ ಎಲ್ಲ ಜಾತಿಗಳನ್ನು ಮೀರಿ ಭಾರತ ಸಂಭ್ರಮಿಸಲು ಸಾಧ್ಯವಾಗಿದ್ದು. ದುರಂತವೆಂದರೆ ರಾಮ ಮಂದಿರದ ಉದ್ಘಾಟನಾ ಸಮಾರಂಭವನ್ನೂ ಕಾಂಗ್ರೆಸ್ ಪಕ್ಷ ಸೇರಿದಂತೆ ಅನೇಕ ವಿರೋಧ ಪಕ್ಷಗಳು ಬಹಿಷ್ಕರಿಸಿದವು. ಆದರೆ ಆಗಸ್ಟ್ 2016 ರಲ್ಲಿ ಆಗಿನ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಪೋಪ್ ಫ್ರಾನ್ಸಿಸ್ ಅವರಿಗೆ ಪತ್ರ ಬರೆದು ಮದರ್ ತೆರೇಸಾರ ಸಂತ ಪದವಿ ಸಮಾರಂಭಕ್ಕೆ ಹೋಗಲು ಆಗದಿದ್ದುದಕ್ಕೆ ಕ್ಷಮೆ ಕೋರಿದ್ದಲ್ಲದೇ ಸಮಾರಂಭದಲ್ಲಿ ಮಾರ್ಗರೆಟ್ ಆಳ್ವಾ ಮತ್ತು ಲೌಜಿನ್ಹೋ ಫಲೈರೊ ಕಾಂಗ್ರೆಸ್ ಪಕ್ಷವನ್ನು ಪ್ರತಿನಿಧಿಸುವಂತೆ ನಿರ್ದೇಶಿಸಿದ್ದರು. ದೇಶದ ಬಹುಸಂಖ್ಯಾತರ ಭಾವನೆಗೆ ಬೆಲೆಯನ್ನೇ ಕೊಡದ ಇಂತಹ ಹಿಂದೂ ವಿರೋಧಿ ರಾಜಕಾರಣವನ್ನು ಸಾಮಾನ್ಯ ಜನರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.

ಸ್ವಾತಂತ್ರ್ಯೋತ್ತರದ ರಾಜಕಾರಣದಲ್ಲಿ ನರೇಂದ್ರ ಮೋದಿಯಂತಹ ರಾಜರ್ಷಿಯನ್ನು ಭಾರತ ಕಂಡದ್ದಿಲ್ಲ. ರಾಮ ಮಂದಿರದ ಹೋರಾಟದ ಸಂಘಟನೆ, ರಥ ಯಾತ್ರೆಯಿಂದ ಉದ್ಘಾಟನೆಯವರೆಗೆ ರಾಮಸೇವಕ ಹನುಮನಂತೆ ಕಾರ್ಯ ನಿರ್ವಹಿಸಿದ್ದಾರೆ. ಏನೇ ಹೇಳಿ, ಶತಮಾನಗಳ ಕನಸನ್ನು ಸಾಕಾರಗೊಳಿಸಿದ ಈ ವ್ಯಕ್ತಿಗೆ ನಾವು ಅದೆಷ್ಟು ಋಣಿಯಾಗಿದ್ದರೂ ಕಡಿಮೆಯೇ. ರಾಮೋತ್ಸವದ ಈ ಅಭೂತಪೂರ್ವ ಯಶಸ್ಸು ಮೋದಿ-ಯೋಗಿಯಂತಹ ಬಲಿಷ್ಠ ನಾಯಕತ್ವ ಇರದಿದ್ದರೆ ಸಾಧ್ಯವಾಗುತ್ತಿರಲಿಲ್ಲ ಎಂಬುದು ಸತ್ಯ.ಅಭಿವೃದ್ಧಿಯ ಜೊತೆಗೆ ನಾಗರಿಕತೆಯ ಪುನರುತ್ಥಾನಕ್ಕೆ ಕಂಕಣ ಕಟ್ಟಿಕೊಂಡು ನಿರಂತರವಾಗಿ ಶ್ರಮಿಸುತ್ತಿರುವ ಮೋದಿಯವರಿಗೆ ಕೃತಜ್ಞತೆ ಸಲ್ಲಿಸಲು ನಮಗಿರುವ ಸರಳ ಮಾರ್ಗ ಒಂದೇ.
ಅದು ಮೋದಿಯವರನ್ನು ಮತ್ತೆ ಗೆಲ್ಲಿಸೋದು ಮಾತ್ರ. ಧರ್ಮವನ್ನು ನಾಶಗೊಳಿಸಲು ಸಜ್ಜಾಗಿರುವ ರಾಜಕಾರಣಿಗಳ ನಡುವೆ ಧರ್ಮವನ್ನು ಉಳಿಸಲು ಪಣ ತೊಟ್ಟಿರುವ ಈ ರಾಷ್ಟ್ರ ಸಂತನಿಗೆ ಶರಣು

-ಗುರುಪ್ರಸಾದ್ ಆರ್