ಎಲ್ಲರೂ ವಿಮಾನ ಹತ್ತುವಂತೆ ಮಾಡಿದ ಮೋದಿಯ ‘ಉಡಾನ್’!

ಈಗೊಂದು ಹತ್ತು ವರ್ಷಗಳ ಹಿಂದಿನವರೆಗೂ ಸ್ಥಿತಿ ಹೇಗಿತ್ತೆಂದರೆ, ಆಕಾಶದಲ್ಲೆಲ್ಲೋ ವಿಮಾನದ ಶಬ್ದವಾದರೆ ಓಡಿ ಹೋಗಿ, ಮುಖ ಮೇಲೆ ಮಾಡಿ, ಕೈಯ್ಯನ್ನು ಹಣೆಗಿಟ್ಟುಕೊಂಡು, ಕಣ್ಣರಳಿಸಿ ವಿಮಾನ ನೋಡಬೇಕಿತ್ತು. ಜೊತೆಗೆ ಅಷ್ಟಕ್ಕೇ ತೃಪ್ತಿಪಟ್ಟುಕೊಳ್ಳಬೇಕಿತ್ತು. ಸಾಮಾನ್ಯರೆಲ್ಲರಿಗೂ ವಿಮಾನವನ್ನು ಪ್ರತ್ಯಕ್ಷವಾಗಿ ಕಾಣುವ ಏಕೈಕ ಸಂದರ್ಭ ಅದಾಗಿತ್ತು. ವಿಮಾನ ಹತ್ತುವುದಿರಲಿ, ಏರ್ಪೋರ್ಟ್ ಹೇಗಿರುತ್ತದೆ ಎಂದು ನೋಡುವುದಕ್ಕೂ ಹತ್ತಿರದಲ್ಲೆಲ್ಲೂ ಏರ್ಪೋರ್ಟ್ ಇರಲಿಲ್ಲ. ವಿಮಾನ ಹತ್ತಿದವನನ್ನು ಯಾವುದೋ ದೊಡ್ದ ಸಾಧನೆ ಮಾಡಿದವನ ರೀತಿಯಲ್ಲಿ ಜನ ನೋಡುವ ಒಂದು ಕಾಲವಿತ್ತು. ಸ್ವಾತಂತ್ರ್ಯ ಬಂದು ಅರವತ್ತೇಳು ವರ್ಷಗಳವರೆಗೂ ಭಾರತದಲ್ಲಿ ಇದೇ ಸ್ಥಿತಿಯಿತ್ತು. ಎಷ್ಟೇ ದೂರವಾದರೂ ಸರಿ, ಜನಸಾಮಾನ್ಯರು ಬಸ್ಸು, ಟ್ರೇನುಗಳಲ್ಲೇ ಹೇಗೋ ಸಾಗಬೇಕಿತ್ತು. ವಿಮಾನದ ದರವೂ ಆಕಾಶದೆತ್ತರಕ್ಕೆ ಇದ್ದುದರಿಂದ ಮತ್ತು ವಿಮಾನ ನಿಲ್ದಾಣಗಳೂ ಕೂಡ ರಾಜ್ಯದಲ್ಲಿ ಒಂದೋ ಎರಡೋ ಇರುತ್ತಿದ್ದುದರಿಂದ ಹೆಚ್ಚಿನವರಿಗೆ ನಿಲುಕದ ಒಂದು ಕನಸಷ್ಟೇ ಆಗಿ ಉಳಿದಿತ್ತು.

೨೦೧೪ರಲ್ಲಿ ಕೇಂದ್ರದಲ್ಲಿ ಮೋದಿ ಸರ್ಕಾರ ಬರುವವರೆಗೆ ಅಂದರೆ ಸ್ವಾತಂತ್ರ್ಯ ಬಂದು ಅರವತ್ತೇಳು ವರ್ಷಗಳ ಅವಧಿಯಲ್ಲಿ ಭಾರತದಲ್ಲಿ ಒಟ್ಟೂ ೭೪ ವಿಮಾನ ನಿಲ್ದಾಣಗಳು ನಿರ್ಮಾಣಗೊಂಡಿದ್ದವು. ಅಂದರೆ ವರ್ಷಕ್ಕೆ ಸುಮಾರು ಒಂದು ವಿಮಾನ ನಿಲ್ದಾಣದ ಸರಾಸರಿಯಲ್ಲಿ ಕಟ್ಟಿಕೊಂಡು ಬರಲಾಗಿತ್ತು. ಆದರೆ ಮೋದಿಯವರು ಜನಸಾಮಾನ್ಯರೂ ವಿಮಾನದಲ್ಲಿ ಓಡಾಡುವಂತಾಗಬೇಕು ಎಂಬ ಮಹತ್ತ್ವಾಕಾಂಕ್ಷೆಯಿಂದ ಮತ್ತು ದೇಶದ ಸಂಚಾರ ವ್ಯವಸ್ಥೆಗೆ ಒಂದು ಹೊಸ ದಿಕ್ಕನ್ನು ನೀಡುವ ಸಂಕಲ್ಪದಿಂದ ೨೦೧೬ರಲ್ಲಿ ಉಡಾನ್ ಎಂಬ ಯೋಜನೆಯನ್ನು ರೂಪಿಸಿ, ಜಾರಿಗೆ ತಂದರು. UDAN – ಅಂದರೆ ‘ಉಡೇ ದೇಶ್ ಕಾ ಆಮ್ ನಾಗರೀಕ್ ಯೋಜನೆ’. ಅರ್ಥಾತ್ ದೇಶದ ಸಾಮಾನ್ಯ ನಾಗರಿಕನೂ ವಿಮಾನದಲ್ಲಿ ಪಯಣಿಸಲಿ ಎಂದು. ಹೆಸರಿಗೆ ತಕ್ಕಂತೆ ಈ ಯೋಜನೆಯನ್ನು ರೂಪಿಸಲಾಗಿದೆ. ಈ ಯೋಜನೆಯ ಅನ್ವಯ ಟೈಯರ್ ಎರಡು ಮತ್ತು ಟೈಯರ್ ಮೂರು ಹಂತದ ನಗರಗಳಿಗೆ ವಿಮಾನ ಸಂಪರ್ಕವನ್ನು ಕಲ್ಪಿಸುವುದಕ್ಕಾಗಿ ಅಂಥ ಸ್ಥಳಗಳಲ್ಲಿ ವಿಮಾನ ನಿಲ್ದಾಣಗಳನ್ನು ನಿರ್ಮಿಸುವುದು ಮುಖ್ಯವಾದ ಅಂಶವಾಗಿದೆ.

ಹೀಗೆ ವಿಮಾನ ನಿಲ್ದಾಣಗಳನ್ನು ನಿರ್ಮಿಸಿ, ಈ ನಿಲ್ದಾಣಗಳನ್ನು ಟೈಯರ್ ಒಂದು ಸ್ತರದ ನಗರಗಳ ಜೊತೆ ಸಂಪರ್ಕಿಸುವ ವಿಮಾನಗಳಿಗೆ ಮೊದಲ ಹಂತದಲ್ಲಿ ವಿಮಾನದ ಒಟ್ಟೂ ಸೀಟಿನ ಅರ್ಧದಷ್ಟು ಸೀಟುಗಳಿಗೆ ಸರ್ಕಾರದ ಸಬ್ಸಿಡಿಯನ್ನು ಕೊಡಲಾಯಿತು. ಸರ್ಕಾರದ ಸಬ್ಸಿಡಿಯ ಮೂಲಕ ಹಾಗೂ ಇನ್ನಿತರ ವಿನಾಯಿತಿಗಳ ಮೂಲಕ ಉಡಾನ್ ಯೋಜನೆಯ ವಿಮಾನದ ಪಯಣದ ದರವನ್ನು ಗಣನೀಯವಾಗಿ ಇಳಿಸಲಾಯಿತು. ಉಡಾನ್ ಯೋಜನೆಯಲ್ಲಿ ಗರಿಷ್ಠ ೫೦೦ ಕಿ.ಮೀ. ಪಯಣಿಸುವ ವಿಮಾನದ ಪ್ರಯಾಣದ ದರವನ್ನು ಕೇವಲ ೨೫೦೦ಕ್ಕೆ ನಿಗದಿಪಡಿಸಲಾಗಿದೆ.

ಇಷ್ಟೇ ದೂರವನ್ನು ಟ್ಯಾಕ್ಸಿಯಲ್ಲಿ ಪ್ರಯಾಣಿಸಿದರೆ ಕಿಮೀ ಗೆ ಹತ್ತು ರೂಪಾಯಿಯಂತೆ ಐದು ಸಾವಿರ ರೂಪಾಯಿ ವೆಚ್ಚವಾಗುತ್ತದೆ. ಅಂದರೆ ರಸ್ತೆ ಪ್ರಯಾಣದ ಅರ್ಧದಷ್ಟು ವೆಚ್ಚದಲ್ಲಿ ವಿಮಾನದಲ್ಲಿ ಪಯಣಿಸುವ ಯೋಜನೆಯನ್ನು ಮೋದಿ ಸರ್ಕಾರ ತಂದಿತು. ಈ ಮೂಲಕ ಹವಾಯ್ ಚಪ್ಪಲಿಯನ್ನು ಧರಿಸುವವರಿಗೂ ಹವಾಯ್ ಜಹಾಜನ್ನು ಹತ್ತುವ ಭಾಗ್ಯವನ್ನು ಮೋದಿಯವರು ಕಲ್ಪಿಸಿದರು. ಮನೆಯಂಗಳದಿಂದ ತಲೆಯೆತ್ತಿ ವಿಮಾನವನ್ನು ನೋಡಿದವರಿಗೆಲ್ಲ ಸ್ವತಃ ವಿಮಾನವನ್ನು ಹತ್ತಿ ಆಕಾಶದಿಂದ ಭೂಮಿಯು ಹೇಗೆ ಕಾಣಿಸುತ್ತದೆ ಎಂದು ನೋಡುವ ವಿಸ್ಮಯವನ್ನು ದಯಪಾಲಿಸುತ್ತಿದೆ ಮೋದಿಯವರ ಉಡಾನ್ ಯೋಜನೆ.

ಉಡಾನ್ ಯೋಜನೆಯ ಮೂಲಕ ಪ್ರತಿವರ್ಷ ಒಂದು ಕೋಟಿ ಪ್ರಯಾಣಿಕರು ಈ ಸಣ್ಣ ಸಣ್ಣ ಕೇಂದ್ರಗಳ ನಡುವೆ ಪಯಣಿಸುವಂತೆ ಮಾಡುವ ಗುರಿಯನ್ನು ಇಟ್ಟುಕೊಳ್ಳಲಾಗಿತ್ತು. ಅದು ಈಗ ಸಾಧಿತವಾಗಿದೆ. ಒಟ್ಟೂ ಒಂದು ಸಾವಿರ ಮಾರ್ಗಗಳನ್ನು ಸಂಪರ್ಕಿಸುವ ಗುರಿಯೂ ಈ ಯೋಜನೆಗಿದೆ. ಏಪ್ರಿಲ್ ೨೦೧೭ ರಲ್ಲಿ ಶಿಮ್ಲಾದಿಂದ ದೆಹಲಿಗೆ ಮೊದಲ ಉಡಾನ್ ವಿಮಾನ್ ಯಾನವು ಆರಂಭಗೊಂಡಿತು. ಅದರ ಅನಂತರ ಇಲ್ಲಿಯವರೆಗೆ ಉಡಾನ್ ಯೋಜನೆಯಿಂದಾಗಿ ನಾಲ್ಕಕ್ಕೂ ಅಧಿಕ ವಿಮಾನನಿಲ್ದಾಣಗಳಿರುವ ರಾಜ್ಯಗಳ ಸಂಖ್ಯೆಯು ಹದಿಮೂರಕ್ಕೆ ಏರಿದೆ. ಅದಕ್ಕೂ ಮುಂಚೆ ಕೇವಲ ಏಳು ರಾಜ್ಯಗಳಲ್ಲಿ ನಾಲ್ಕಕ್ಕೂ ಹೆಚ್ಚು ವಿಮಾನ ನಿಲ್ದಾಣಗಳಿದ್ದವು. ಉಡಾನ್ ಮೊದಲ ಮತ್ತು ಎರಡನೆಯ ಹಂತದ ಯೋಜನೆಯ ಮೂಲಕ ದೇಶದ ಒಟ್ಟೂ ೧೦೮ ವಿಮಾನ ನಿಲ್ದಾಣಗಳನ್ನು ಸಂಪರ್ಕಿಸಲಾಗಿದೆ.
ಈವರೆಗೆ ಎಪ್ಪತ್ತೈದು ಹೊಸ ವಿಮಾನ ನಿಲ್ದಾಣಗಳನ್ನು ನಿರ್ಮಿಸಲಾಗಿದ್ದು, ೨೦೨೪ರವರೆಗೆ ಒಟ್ಟೂ ಒಂದು ನೂರು ಹೊಸ ವಿಮಾನ ನಿಲ್ದಾಣಗಳನ್ನು ನಿರ್ಮಿಸುವ ಗುರಿಯನ್ನು ಇಟ್ಟುಕೊಳ್ಳಲಾಗಿದೆ. ಈಗ ಹೆಚ್ಚೆಂದರೆ ದೇಶದ ಜನಸಂಖ್ಯೆಯ ಕೇವಲ ಮೂರು ಅಥವಾ ನಾಲ್ಕು ಶೇಕಡಾ ಜನ ಮಾತ್ರ ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾರೆ. ಹಾಗಾಗಿ ದೇಶದಲ್ಲಿ ವಾಯುಸಾರಿಗೆಯ ಉದ್ದಿಮೆಗೆ ಹೆಚ್ಚಿನ ಅವಕಾಶಗಳಿವೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. ಚಿಕ್ಕಪುಟ್ಟ ನಗರಗಳಿಗೆ ವಿಮಾನಯಾನದ ಸಂಪರ್ಕವನ್ನು ಸಾಧಿಸುವ ಉಡಾನ್ ಯೋಜನೆಯ ಕಾರಣದಿಂದ ಭಾರತದಲ್ಲಿ ವ್ಯಾಪಾರ ವಹಿವಾಟು, ಉದ್ದಿಮೆಗಳ ಸ್ಥಾಪನೆ, ಪ್ರವಾಸಿಗರ ಭೇಟಿ, ಕರಸಂಗ್ರಹ, ಉದ್ಯೋಗ ಇವೆಲ್ಲವೂ ಗಣನೀಯವಾಗಿ ಹೆಚ್ಚಿದೆ. ಇಂದು ಕರ್ನಾಟಕದಂಥ ರಾಜ್ಯದಲ್ಲಿ ಹುಬ್ಬಳ್ಳಿ, ಮಂಗಳೂರು, ಬೆಳಗಾವಿ, ಬೀದರ್ ನಂಥ ನಗರಗಳಿಂದಲೂ ನೇರವಾಗಿ ದೆಹಲಿಗೆ ಪಯಣಿಸಬಹುದಾಗಿದೆ. ಹಾಗಾಗಿ ದೆಹಲಿ ಈಗ ದೂರವಲ್ಲ.

ಈವರೆಗೆ ಉಡಾನ್ ಯೋಜನೆಯ ಮೂಲಕ ಒಟ್ಟೂ ಎಪ್ಪತ್ತೈದು ಹೊಸ ವಿಮಾನ ನಿಲ್ದಾಣಗಳನ್ನು ನಿರ್ಮಿಸಲಾಗಿದೆ. ಸ್ವಾತಂತ್ರ್ಯ ಬಂದ ವರ್ಷದಿಂದ ೨೦೧೪ರವರೆಗೆ ಅರವತ್ತೇಳು ವರ್ಷಗಳ ಅವಧಿಯಲ್ಲಿ ಕಟ್ಟಲಾದ ಒಟ್ಟೂ ಸಂಖ್ಯೆಯ ವಿಮಾನ ನಿಲ್ದಾಣಗಳಿಗಿಂತ ಹೆಚ್ಚು ಹೊಸ ವಿಮಾನ ನಿಲ್ದಾಣಗಳನ್ನು ಕಳೆದ ಒಂಬತ್ತು ವರ್ಷಗಳಲ್ಲಿ ನಿರ್ಮಿಸಲಾಗಿದೆ. ಅರವತ್ತೇಳು ವರ್ಷಗಳ ಸರಾಸರಿಗೆ ಹೋಲಿಸಿದರೆ ಅದರ ಹತ್ತು ಪಟ್ಟು ಹೆಚ್ಚಿನ ವೇಗದಲ್ಲಿ ಈಗ ದೇಶದಲ್ಲಿ ಎಲ್ಲೆಡೆ ವಿಮಾನ ನಿಲ್ದಾಣಗಳು ತಯಾರಾಗುತ್ತಿವೆ. ಸಣ್ಣ ಪುಟ್ಟ ನಗರಗಳೂ ಈಗ ವಿಮಾನ ಸಂಪರ್ಕವನ್ನು ಪಡೆಯುತ್ತಿವೆ. ಅಕ್ಟೋಬರ್ ೨೦೨೩ರವರೆಗಿನ ಅವಧಿಯಲ್ಲಿ ಒಟ್ಟೂ ೪೯೯ ಮಾರ್ಗಗಗಳನ್ನು ಜೋಡಿಸಲಾಗಿದೆ. ಹನ್ನೊಂದು ವಿಮಾನಯಾನ ಸಂಸ್ಥೆಗಳು ಉಡಾನ್ ಯೋಜನೆಯಲ್ಲಿ ಪಾಲ್ಗೊಂಡು ವಿಮಾನಯಾನದ ಸೇವೆಯನ್ನು ಜನರಿಗೆ ಒದಗಿಸುತ್ತಿದ್ದಾರೆ.
ಸಪ್ಟೆಂಬರ್ ಮೂವತ್ತರವರೆಗೆ ಒಂದು ಕೋಟಿ ಇಪ್ಪತ್ತೆಂಟು ಲಕ್ಷ ಪ್ರಯಾಣಿಕರು ಪ್ರಯಾಣಿಸಿದ್ದಾರೆಂದು ನಾಗರಿಕ ವಿಮಾನ ಯಾನ ಪ್ರಾಧಿಕಾರ ತಿಳಿಸಿದೆ. ೨೦೧೪ರ ಹಿಂದಿನ ಕಾಲಘಟ್ಟಕ್ಕೆ ಹೋಲಿಸಿದರೆ ಈ ಸಂಖ್ಯೆ ಬಹಳ ದೊಡ್ದದು. ಈ ಮೂಲಕ ಕೋಟಿ ಕೋಟಿ ಜನರ ಸಮಯ ಹಾಗೂ ಪರಿಶ್ರಮವು ಉಳಿದಿದೆ. ವ್ಯಾಪಾರ-ವಹಿವಾಟು ವೇಗವನ್ನು ಗಳಿಸಿವೆ. ಎಲ್ಲಕ್ಕಿಂತ ಹೆಚ್ಚಾಗಿ ನಾನಾ ರೀತಿಯಲ್ಲಿ ಉದ್ಯೋಗಗಳು ಹೆಚ್ಚಿವೆ. ವಿಮಾನ ನಿಲ್ದಾಣಗಳು ಹಾಗೂ ವಿಮಾನಗಳ ಸಂಪರ್ಕ ಹೆಚ್ಚಿದಂತೆ ವಿಮಾನ ನಿಲ್ದಾಣದ ನಿರ್ವಹಣೆ, ವಿಮಾನಗಳ ನಿರ್ವಹಣೆ, ಏರ್ ಟ್ರಾಫಿಕ್ ನಿಯಂತ್ರಣ, ತಾಂತ್ರಿಕ ಸಿಬ್ಬಂದಿಗಳ ಆವಶ್ಯಕತೆ ಸೇರಿದಂತೆ ಸ್ಥಳೀಯ ಸಾರಿಗೆ ಸಂಪರ್ಕ, ಪ್ರೇಕ್ಷಣೀಯ ನಗರಗಳಲ್ಲಿನ ವ್ಯಾಪಾರ ವರ್ಧನೆ ಇತ್ಯಾದಿಗಳ ಮೂಲಕ ಉದ್ಯೋಗಾವಕಾಶಗಳು ಹೆಚ್ಚಿವೆ.

ಇಂದು ಇಡೀ ಭಾರತದ ಎಲ್ಲೆಡೆ ಜನರು ಸುತ್ತಾಡುತ್ತಿದ್ದಾರೆ. ವಾರಗಳ ಕಾಲ ಬೇಕಿದ್ದ ದೆಹಲಿ ಪ್ರಯಾಣವು ಇಂದು ಹುಬ್ಬಳ್ಳಿಯ ಜನರಿಗೂ ಕೇವಲ ಎರಡು ಮೂರು ಘಂಟೆಗಳ ಪ್ರಯಾಣ ಎಂಬಂತಾಗಿದೆ. ಜಗತ್ತಿನಲ್ಲೇ ಅತ್ಯಂತ ಕಡಿಮೆ ವ್ಯಯದಲ್ಲಿ ಭಾರತದಲ್ಲಿ ವಿಮಾನದ ಪ್ರಯಾಣವು ಸಾಧ್ಯವಾಗಿದ್ದರೆ ಅದಕ್ಕೆ ಮುಖ್ಯ ಕಾರಣ ಮೋದಿಯವರ ಉಡಾನ್ ಯೋಜನೆ. ಮುಂದಿನ ಐದು ವರ್ಷಗಳಲ್ಲಿ ಭಾರತದ ಒಟ್ಟೂ ವಿಮಾನ ನಿಲ್ದಾಣಗಳ ಸಂಖೆಯ್ಯನ್ನು ಇನ್ನೂರಕ್ಕೆ ಏರಿಸುವ ಗುರಿಯನ್ನು ಸರ್ಕಾರ ಹೊಂದಿದೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಹೇಳಿದ್ದಾರೆ. ಅಂದರೆ ಯಾವ ಪರಿ ವೇಗದಲ್ಲಿ ಭಾರತದ ವಿಮಾನಯಾನ ಕ್ಷೇತ್ರ ಬೆಳೆಯುತ್ತಿದೆ ಎಂಬುದನ್ನು ಊಹಿಸಬಹುದು.
ಮೋದಿ ಸರ್ಕಾರದ ಇಂಥ ಜನಪರ ಯೋಜನೆಗಳಿಂದಾಗಿಯೇ ಉದ್ದಿಮೆಗಳು ಹೆಚ್ಚುತ್ತಿವೆ. ಸ್ವಯಂ ಉದ್ಯೋಗಾವಕಾಶಗಳೂ ಹೆಚ್ಚುತ್ತಿವೆ. ಜನರ ಜೀವನ ಮಟ್ಟ ಸುಧಾರಿಸುತ್ತಿದೆ. ಹಣಕ್ಕಿಂತಲೂ ಸಮಯಕ್ಕೆ ಹೆಚ್ಚಿನ ಮೌಲ್ಯ ಬಂದೊದಗಿದೆ. ಹಾಗಾಗಿ ಈಗ ಯಾರೂ ವಾರಗಟ್ತಲೆ ಪ್ರಯಾಣದಲ್ಲಿಯೇ ಕಳೆದುಬಿಡಲು ಮನಸ್ಸು ಮಾಡುವುದಿಲ್ಲ. ಹೀಗೆ ಹೋಗಿ ಹಾಗೆ ಬರಲು ಎಲ್ಲರೂ ಇಚ್ಛಿಸುತ್ತಿದ್ದಾರೆ. ಅದಕ್ಕೆ ತಕ್ಕಂತೆ ಇಂದು ಎಲ್ಲಿಂದೆಲ್ಲಿಗೆ ಬೇಕಿದ್ದರೂ ದೇಶದಲ್ಲಿ ವಿಮಾನದಲ್ಲಿ ಪಯಾಣಿಸಬಹುದು. ಆ ಮಟ್ಟಿಗೆ ಭಾರತದ ಸಂಪರ್ಕಕ್ರಾಂತಿಯನ್ನು ವಿಮಾನಯಾನ ಕ್ಷೇತ್ರಕ್ಕೂ ವಿಸ್ತರಿಸಿದ್ದು ಮೋದಿಯವರ ಮಹತ್ತ್ವಾಕಾಂಕ್ಷೆಯ ಉಡಾನ್.

ಮೋದಿಯವರ ದೂರದೃಷ್ಟಿಯ ಯೋಜನೆಗಳು ನಮ್ಮ ಜೀವನವನ್ನು ನಮಗೆ ಗೊತ್ತಿಲ್ಲದಂತೆಯೇ ಎತ್ತರಿಸುತ್ತಿವೆ. ವಿರೋಧಿಗಳ ಆಕ್ಷೇಪಗಳಿಗೆ ಮೋದಿಯವರ ಕೆಲಸಗಳೇ ಉತ್ತರಿಸುತ್ತಿವೆ.

~ಸುಂಕಸಾಳ, ನಮೋಬ್ರಿಗೇಡ್

Post a Comment