ಮೋದಿಜಿ ಕೊಟ್ಟಿದ್ದು ಪರ್ಫೆಕ್ಟ್ ಆದ ಟೆಂಪಲ್ ಇಂಡಸ್ಟ್ರಿಯನ್ನ!

ಹಿಂದೆಲ್ಲ ರಾಜಮಹಾರಾಜರು ದೊಡ್ಡ ದೊಡ್ಡ ದೇವಸ್ಥಾನಗಳನ್ನ ಕಟ್ಟುತ್ತಿದ್ದರು. ಅಜ್ಜ, ಮಗ ಮೊಮ್ಮಗ ಹೀಗೆ ತಲೆಮಾರುಗಳೇ ದೇವಾಲಯ ಕಟ್ಟುವ ಕೆಲಸದಲ್ಲಿ ತೊಡಗಿಕೊಳ್ಳುತ್ತಿದ್ದರು. ಒಂದನೇ ಪುಲಕೇಶಿ ದೇವಾಲಯ ಕಟ್ಟಲು ಶುರು ಮಾಡಿದ, ಎರಡನೇ ಪುಲಕೇಶಿಯ ಮೊಮ್ಮಗ ಅದನ್ನು ಪೂರ್ಣಗೊಳಿಸಿದ. ೬೦ ವರ್ಷಗಳ ಕಾಲ ಆ ದೇವಾಲಯವನ್ನು ಕಟ್ಟಲಾಯಿತು. ಇಂಥ ವಿವರಗಳನ್ನು ಇತಿಹಾಸದಲ್ಲಿ ಓದಿದ್ದೇವೆ.

ಹಾಗೆ ಇತಿಹಾಸ ಓದುವಾಗ ಹಿಂದಿನವರು ಅಷ್ಟೊಂದು ದೇವಸ್ಥಾನಗಳನ್ನು ಯಾಕೆ ಕಟ್ಟುತ್ತಿದ್ದರು ಎನ್ನುವ ಪ್ರಶ್ನೆ ಬರುತ್ತಿತ್ತು.‌ ದುರಾದೃಷ್ಟ ಅಂದರೆ ನಮ್ಮ ಇತಿಹಾಸಕಾರರು ಅದನ್ನು ಎಲ್ಲಿಯೂ ಸರಿಯಾಗಿ ವಿವರಿಸಲೇ ಇಲ್ಲ.
ಯಾರೋ ಯುದ್ಧ ಗೆದ್ದ ನೆನಪಿಗೆ ಕಟ್ಟಿಸಿದರು, ಇನ್ಯಾರೋ ಹರಕೆ ತೀರಿಸಲು ಕಟ್ಟಿಸಿದರು, ಮತ್ಯಾರೋ ದೇವರ ಭಕ್ತಿಗೆ ಕಟ್ಟಿಸಿದರು ಎಂದೆಲ್ಲ ವಿವರಿಸಲಾಗುತ್ತಿತ್ತೇ ಹೊರತು ಅದಕ್ಕಿರುವ ಎಕಾನಾಮಿಕ್ ಬ್ಯಾಕ್ ಗ್ರೌಂಡ್ ಕುರಿತು ಹೆಚ್ಚು ಹೇಳಲೇ ಇಲ್ಲ.
ಒಂದು ದೇವಾಲಯ ಆ ಸಾಮ್ರಾಜ್ಯದ ಜನರಿಗೆ ಕೊಡುತ್ತಿದ್ದ ಕೆಲಸ, ಅದರಿಂದ ಬರುತ್ತಿದ್ದ ರೆವಿನ್ಯು, ದೇವಸ್ಥಾನ ಸಮುದಾಯಕ್ಕೆ ಬಳಕೆಯಾಗುತ್ತಿದ್ದ ರೀತಿ ಇವನ್ನೆಲ್ಲ ಅರ್ಥ ಮಾಡಿಸುವ ಕೆಲಸ ನಮ್ಮ ಇತಿಹಾಸಕಾರರಿಂದ ಆಗಲೇ ಇಲ್ಲ. ಹಾಗೆ ನೋಡ ಹೋದರೆ, ಆಗಿನ ದೇವಾಲಯಗಳೇ ಆಗಿನ ಇಂಡಸ್ಟ್ರಿಗಳಾಗಿದ್ದವು!

ಇವತ್ತು ರಾಮಮಂದಿರದ ವಿಚಾರದಲ್ಲೂ ಇದೇ ಆಗುತ್ತಿದೆ. ರಾಮಮಂದಿರ ಇರಿಸಿಕೊಂಡು ವಿರೋಧ ಪಕ್ಷಗಳು ಬಿಜೆಪಿಯನ್ನು ಹಣಿಯಲು ನೋಡುತ್ತಿದೆಯೇ ಹೊರತು, ನಾಳೆ ರಾಮಮಂದಿರದಿಂದ ದೇಶಕ್ಕೆ ಬರುವ ಆದಾಯದ ಕುರಿತು ಅಪ್ಪಿತಪ್ಪಿಯೂ ಹೇಳುತ್ತಿಲ್ಲ. ಬಿಜೆಪಿ ರಾಮಮಂದಿರವನ್ನು ವೋಟ್ ಬ್ಯಾಂಕ್ ಪಾಲಿಟಿಕ್ಸ್ ಗೆ ಬಳಸಿಕೊಳ್ತಿದೆ ಎಂಬುದು ಕಾಂಗ್ರೆಸ್ ನ ಆರೋಪ.
ರಾಮಮಂದಿರ ಕಟ್ಟುವ ಬದಲು ಒಂದು ಶಿಕ್ಷಣ ಸಂಸ್ಥೆ ತೆರೆಯಬಹುದಿತ್ತು ಎನ್ನುವುದು ಹಲವರ ಅಂಬೋಣ. ೯೦೦ ಕೋಟಿ ರುಪಾಯಿ ಮೇವು ಹಗರಣ ಮಾಡಿದ ಲಾಲೂ ಪ್ರಸಾದ್ ಯಾದವ್ ಮಗನ ಥರದವರು ಇಂಥ ಹೇಳಿಕೆ ಕೊಡ್ತಾರೆ.
ಇಂಥ ಅಪಸವ್ಯಗಳನ್ನ ಬದಿಗಿಟ್ಟು ನೋಡುವುದಾದರೆ, ರಾಮಮಂದಿರದಿಂದ ಏನು ಲಾಭ? ಅದು ನಮ್ಮ ಆರ್ಥಿಕತೆಗೆ ಮುಂದೆ ಕೊಡಲಿರುವ ಕೊಡುಗೆ ಏನು?
ಆಧುನಿಕ ಕಾಲದಲ್ಲೂ ಒಂದು ದೇವಸ್ಥಾನ ಹೇಗೆ ಪ್ರಸ್ತುತ?
ರಾಮಮಂದಿರ ಕಟ್ಟಲು ಈವರೆಗೆ ಸುಮಾರು 900 ಕೋಟಿ ರುಪಾಯಿಗಳು ಖರ್ಚಾಗಿವೆ. ಅಂದರೆ ಲಾಲೂ ಮಾಡಿದ ಮೇವು ಹಗರಣದಷ್ಟೇ! ಆದರೆ ಲಾಲೂ ಅವನ್ನೆಲ್ಲ ನುಂಗಿ ನೀರುಕುಡಿದ. ಆದರೆ ರಾಮಮಂದಿರ ಇದರ ಹತ್ತಾರು ಪಟ್ಟು ಹಣವನ್ನು ಸಮಾಜಕ್ಕೆ ವಾಪಸ್ ಕೊಡಲಿದೆ.
ರಾಮಮಂದಿರ ಇನ್ನೂ ಪೂರ್ಣಗೊಂಡಿಲ್ಲ. ಅದು ಪೂರ್ಣಗೊಳ್ಳುವ ಹೊತ್ತಿಗೆ ಇನ್ನೂ 200 ಕೋಟಿಯಷ್ಟು ಖರ್ಚಾಗಲಿದೆ. ಅಲ್ಲಿಗೆ ಸುಮಾರು 1100 ಕೋಟಿ ಖರ್ಚಾಗಲಿದೆ.
ಹಾಗಾದರೆ ಇಷ್ಟೊಂದು ಹಣ ವಾಪಸ್ ಬರೋದು ಹೇಗೆ?
ಇದರ ಬಗ್ಗೆ ಖ್ಯಾತ ಹಣಕಾಸು ತಜ್ಞರಾದ ರಂಗಸ್ವಾಮಿ ಮೂಕನಳ್ಳಿಯವರು ವಿವರಿಸೋದು ಹೀಗೆ.
ಜನೆವರಿ ೨೨ ರಂದು ಪ್ರಾಣ ಪ್ರತಿಷ್ಠೆ ಆದ ಮೇಲೆ ಅಯೋಧ್ಯೆಗೆ ದಿನಕ್ಕೆ ಐದು ಲಕ್ಷ ಜನ ಭೇಟಿ ಕೊಡಲಿದ್ದಾರೆ ಎಂದು ಅಂದಾಜಿಸಲಾಗಿದೆ. ಅದರಲ್ಲಿ ಕೇವಲ ಒಂದೇ ಲಕ್ಷದಷ್ಟು ಜನ ಭೇಟಿ ಕೊಟ್ಟರೂ ಅವರು 1000 ಸಾವಿರ ಮಾತ್ರ ಖರ್ಚು ಮಾಡಿದರೂ ಒಂದು ವರ್ಷಕ್ಕೆ 3650 ಕೋಟಿ ಹಣ ಬಂದು ಬಿಡುತ್ತದೆ. ಆಗ ಹೇಳಿದಂತೆ ಕೇವಲ 1000 ಸಾವಿರ ಖರ್ಚಿನಲ್ಲಿ ರಾಮಮಂದಿರ ನೋಡಲಾಗುವುದಿಲ್ಲ. ಊಟ, ವಸತಿ, ದರ್ಶನ ಎಂದು ದಿನಕ್ಕೆ ಕನಿಷ್ಠ 5000 ಖರ್ಚು ಮಾಡಿಯೇ ಮಾಡುತ್ತಾರೆ. ಹೇಗೇ ನೋಡಿದರೂ ಕೇವಲ 22 ದಿನದಲ್ಲಿ ರಾಮಮಂದಿರ ಕಟ್ಟಿದ ಹಣ ವಾಪಸ್ ಬಂದು ಬಿಡುತ್ತದೆ ಎನ್ನುತ್ತಾರೆ ಮೂಕನಳ್ಳಿಯವರು.
ಇಷ್ಟು ಕೋಟಿ ಜನಸಂಖ್ಯೆ ಇರುವಾಗ ಅದು ಖಂಡಿತಾ ಸಾಧ್ಯ.

ನಮ್ಮ ದೇಶದಲ್ಲಿ ಜನಸಂಖ್ಯೆ ಜಾಸ್ತಿ.ಹೀಗಾಗಿ ಯಾವ ಅಭಿವೃದ್ಧಿ ಕೆಲಸಗಳೂ ಆಗಲ್ಲ ಎನ್ನುವುದು ತಪ್ಪು ಕಲ್ಪನೆ. ಇಷ್ಟು ಕೋಟಿ ಜನರಿಗೆ ದುಡಿಯಲು ಮಾರ್ಗಗಳನ್ನು ತೋರಿಸುವಲ್ಲಿ ಈ ಹಿಂದಿನ ಸರ್ಕಾರಗಳು ಎಡವಿದ್ದವು. ಆದರೆ ಮೋದಿ ಅವರ ಟೆಂಪಲ್ ಎಕಾನಮಿ ಮೂವ್ ಇದೆಯಲ್ಲ, ಅದು ಈ ದೇಶದ ಬೆಳವಣಿಗೆಗೆ ಪರ್ಫೆಕ್ಟ್ ಮಾಡೆಲ್.
ನಮ್ಮ ಮುಕ್ಕಾಲು ಪಾಲು ಜನಗಳು ದೇವರು ಧರ್ಮವನ್ನು ನಂಬಿ ಫಾಲೊ ಮಾಡುವವರು. ಇಲ್ಲಿ ಇಂಡಸ್ಟ್ರಿ ಮಾಡೆಲ್ ನಷ್ಟೇ ಟೆಂಪಲ್ ಮಾಡೆಲ್ ಕೂಡ ವರ್ಕ್ ಆಗುತ್ತದೆ.

ಅಯೋಧ್ಯೆ ಇನ್ನು ಮುಂದೆ ನಮ್ಮ ನಿಮ್ಮ ಅಂದಾಜಿಗೆ ಮೀರಿ ಬೆಳೆಯಲಿಕ್ಕಿದೆ. ಎಷ್ಟೆಂದರೆ ಕ್ರಿಶ್ಚಿಯನ್ನರಿಗೆ ಹೇಗೆ ವ್ಯಾಟಿಕನ್‌ ಸಿಟಿಯೋ, ಮುಸಲ್ಮಾನರಿಗೆ ಹೇಗೆ ಮೆಕ್ಕಾ ಮದೀನವೊ, ಭಾರತೀಯರಿಗೆ ಇನ್ನು ಮುಂದೆ ಅಯೋಧ್ಯೆಯೂ ಹಾಗೇ ಆಗಲಿದೆ.
ಕಾಶಿಯಲ್ಲಿ ವಿಶ್ವನಾಥ ಕಾರಿಡಾರ್ ನಿರ್ಮಾಣವಾದ ಮೇಲೆ ಅಲ್ಲಿನ ವಹಿವಾಟು ಎಷ್ಟು ಹೆಚ್ಚಿದೆ ಎಂಬುದು ನಮ್ಮ‌ಕಣ್ಣ ಮುಂದೆಯೇ ಇದೆ.
ಅಂದ ಮೇಲೆ ನೀವೇ ಯೋಚಿಸಿ, ರಾಮ ಮಂದಿರದಿಂದ ಅಯೋಧ್ಯೆಯ ಜನರ ಜೀವನ‌ಮಟ್ಟ ಯಾವ ಹಂತಕ್ಕೆ ಏರಬಹುದು ಎಂದು.

ಒಮ್ಮೆ ರಾಮಮಂದಿರ ಓಪನ್ ಆಯ್ತು ಎಂದರೆ ಪ್ರವಾಸಿಗರ ದಂಡೇ ಅಲ್ಲಿಗೆ ಹೋಗಲಿದೆ. ಹೊರಗಿನವರು ಬರುತ್ತಿದ್ದಂತೆ ಅಯೋಧ್ಯೆಯಲ್ಲಿ ಊಟ ವಸತಿಗೆ ಯಾವ ಪರಿ ಡಿಮ್ಯಾಂಡ್ ಕ್ರಿಯೇಟ್ ಆಗಲಿದೆ ಎಂದರೆ ಅಲ್ಲಿನ ಸ್ಥಳೀಯರು ಈಗಾಗಲೇ ತಮ್ಮ ತಮ್ಮ ಮನೆಯ ಜಗುಲಿ ಕೋಣೆಗಳನ್ನೇ ರೂಮುಗಳನ್ನಾಗಿ ಪರಿವರ್ತಿಸತೊಡಗಿದ್ದಾರೆ. ಪ್ರತೀ ಮನೆಯೂ ಪಿಜಿ, ರೆಸ್ಟೋರಂಟ್, ಲಾಡ್ಜಿಂಗ್ ಗಳಾಗಿವೆ.
ಇದರ ಜೊತೆ ಇನ್ನೊಂದಿಷ್ಟು ಹೊಸ ಕಟ್ಟಡಗಳೂ ತಲೆಯೆತ್ತುತ್ತಿವೆ. ಇವೆಲ್ಲ ಅದೆಷ್ಟು ಉದ್ಯೋಗಗಳನ್ನು ನಿರ್ಮಿಸಬಹುದು ಯೋಚಿಸಿ. ಅದೂ ಅಲ್ಲದೆ ಅಯೋಧ್ಯೆಯ ಭೂಮಿಗೆ ಇನ್ನು ಚಿನ್ನದ ಬೆಲೆ ಬರಲಿದೆ. ಅಲ್ಲಿನ ರಿಯಲ್ ಎಸ್ಟೇಟ್ ದರ ಆಕಾಶಕ್ಕೇರಲಿದೆ.
ಇಷ್ಟೆಲ್ಲ ಆಗುತ್ತಿರುವುದು ಕೇವಲ‌ ಒಂದು ಮಂದಿರದಿಂದ.
ಇನ್ನು ರಾಮಮಂದಿರ ಒಂದನ್ನೇ ಪರಿಗಣಿಸಿದರೂ ಅಲ್ಲಿ ಮಾರಾಟವಾಗುವ ಪೂಜಾ ಸಾಮಗ್ರಿಗಳು, ಪ್ರಸಾದ, ದರ್ಶನ, ಹರಕೆ ದುಡ್ಡು ಎಂದು ಕೋಟ್ಯಂತರ ವ್ಯವಹಾರ ನಡೆಯಲಿಕ್ಕಿದೆ. ಇದೆಲ್ಲ ದೇಶದ ಜಿಡಿಪಿಗೆ ಕೊಡುಗೆ ಕೊಟ್ಟ ಹಾಗಲ್ಲವೆ?

ಕಾಂಬೋಡಿಯಾ ದೇಶದಲ್ಲಿ 900ವರ್ಷಗಳ ಹಿಂದೆ ಹಿಂದೂಗಳು ಕಟ್ಟಿದ್ದ ಆಂಕೋರ್ ವಾಟ್ ದೇವಾಲಯಗಳ ಸಮೂಹ ಇವತ್ತಿಗೂ ಆ ದೇಶಕ್ಕೆ ಶೇ. 32.4 ರಷ್ಟು ಜಿಡಿಪಿ ತಂದುಕೊಡುತ್ತಿದೆ. ಹೀಗಿರುವಾಗ ಕಾಂಬೋಡಿಯಾಕ್ಕಿಂತ ಎಷ್ಟೋ ಪಟ್ಟು ದೊಡ್ಡದಿರುವ ನಮ್ಮ ದೇಶದಲ್ಲಿ ದೇವಾಲಯಗಳು ಜಿಡಿಪಿ ಗೆ ಅದಿನ್ನೆಷ್ಟು ಕೊಡುಗೆ ನೀಡುತ್ತಿರಬಹುದು ನೀವೇ ಯೋಚಿಸಿ.

ಅಯೋಧ್ಯೆ ಮುಂದಿನ ದಿನಗಳ ಹಾಟ್ ಡೆಸ್ಟಿನೇಶನ್ ಆಗುವುದರಲ್ಲಿ ಸಂಶಯವೇ ಬೇಡ. ಒಂದಿಷ್ಟು ಜನರು ರಾಮನ ಮೇಲಿನ ಭಕ್ತಿಯಿಂದ ಅಯೋಧ್ಯೆಗೆ ಹೋದರೆ, ಇನ್ನೊಂದಿಷ್ಟು ಜನ ಜೀವನ ಅರಸಿ ಅಲ್ಲಿಗೆ ಹೋಗಲಿಕ್ಕಿದ್ದಾರೆ. ಮುಂದಿನ ದಿನಗಳಲ್ಲಿ ಉತ್ತರ ಪ್ರದೇಶದಿಂದ ಕೆಲಸ ಅರಸಿ ಬೆಂಗಳೂರಿಗೆ ಬರುವವರ ಸಂಖ್ಯೆಯಲ್ಲಿ ಭಾರೀ ಇಳಿಕೆಯಾಗಲಿದೆ.ಇವತ್ತು ಬೆಂಗಳೂರಿನಲ್ಲಿ ಎಲ್ಲಿ ನೋಡಿದರೂ ಓರಿಸ್ಸಾ, ಯು. ಪಿ, ಬಿಹಾರದಿಂದ ಬಂದವರೇ ತುಂಬಿಕೊಂಡಿದ್ದಾರೆ. ಸೆಕ್ಯುರಿಟಿ ಗಾರ್ಡಿಂದ ಹಿಡಿದು, ಮಾಲ್ ಗಳಲ್ಲಿ ಲಿಪ್ಟ್ ಆಪರೇಟರ್, ರೆಸ್ಟೋರೆಂಟ್ ಗಳಲ್ಲಿ ಸರ್ವರ್ ಗಳು, ಮೆಟ್ರೋ, ಸೂಪರ್ ಮಾರ್ಕೆಟ್, ಪ್ರವಾಸಿ ತಾಣ ಎಲ್ಲೆಂದರಲ್ಲಿ ‘ ಭಯ್ಯಾ’ ಗಳದ್ದೇ ಹಾವಳಿ.
ಕಾರಣ ಇಲ್ಲಿ ಕೆಲಸವಿದೆ ಬರುತ್ತಾರೆ. ಆದರೆ ಇನ್ನು ಮುಂದೆ ಇವರೆಲ್ಲ ಅಯೋಧ್ಯೆ ಕಡೆಗೆ ಮುಖ ಮಾಡಲಿದ್ದಾರೆ. ಅಯೋಧ್ಯೆ ಬೆಂಗಳೂರಿಗಿಂತ ಹತ್ತಿರ. ಯು.ಪಿಯವರಿಗೆ ಇದು ತಮ್ಮದೇ ರಾಜ್ಯವಾಗಿದ್ದರಿಂದ ದೂರದ ಬೆಂಗಳೂರಿಗೆ ಬರುವುದಕ್ಕಿಂತ ಅಯೋಧ್ಯೆಯೇ ಎಲ್ಲ ತರದಲ್ಲೂ ಅನುಕೂಲ.
ಇನ್ನು ಕೇವಲ ಐದೇ ವರ್ಷಗಳಲ್ಲಿ ಜನರಿಗೆ ಅರ್ಥವಾಗಲಿದೆ, ರಾಮಮಂದಿರ ಕಟ್ಟಿ ಏನು ಪ್ರಯೋಜನ ಎನ್ನುವುದು.

ಒಂದು ಪ್ರದೇಶಕ್ಕೆ ಒಂದು ಇಂಡಸ್ಟ್ರಿ ಬಂದರೆ ಅಲ್ಲಿ ಹಲವರಿಗೆ ಉದ್ಯೋಗ ಸೃಷ್ಟಿಯಾಗುತ್ತದೆ ಎಂಬುದು ಯುರೋಪಿಯನ್ ಕಾನ್ಸೆಪ್ಟ್.
ಆದರೆ ಒಂದು ಪ್ರದೇಶದಲ್ಲಿ ಒಂದು ಬೃಹತ್ ದೇವಾಲಯ ಬಂದರೂ ಅಲ್ಲಿ ಉದ್ಯೋಗ ಸೃಷ್ಟಿಯಾಗುತ್ತದೆ ಎಂಬುದು ಭಾರತದ ಕಾನ್ಸೆಪ್ಟ್.

ಹಾಗೆ ನೋಡಿದಲ್ಲಿ ಇದು ಭಾರತದ ಅಧ್ಯಾತ್ಮ ಹಿನ್ನೆಲೆಗೆ, ಧರ್ಮದ ಹಿನ್ನೆಲೆಗೆ ಹೊಂದುವ ಅತ್ಯಂತ ಸರಿಯಾದ ಡೆವಲಪ್ಮೆಂಟ್ ಮಾಡಲ್.
ಟೆಂಪಲ್ ಎಕಾನಮಿ ಎನ್ನುವ ಬದಲು ಟೆಂಪಲ್ ಇಂಡಸ್ಟ್ರಿ ಎಂದೇ ಕರೆಯಬೇಕು ಇದನ್ನು. ಇದಕ್ಕೊಂದು ಮಿನಿಸ್ಟ್ರಿ ತೆರೆದರೂ ತಪ್ಪಿಲ್ಲ.

ಹೀಗಾಗಿ ಬಿಜೆಪಿ ತನ್ನ ಲಾಭಕ್ಕೆ ರಾಮಮಂದಿರ ಕಟ್ಟಿತು ಎನ್ನುವವರು ಸ್ವಲ್ಪ ಈ ನಿಟ್ಟಿನಲ್ಲೂ ಯೋಚಿಸಲಿ. ಹಿಂದೂಗಳಲ್ಲಿ ಶೈವರು, ವೈಷ್ಣವರು, ದ್ವೈತಿ, ಅದ್ವೈತಿ, ಬ್ರಾಹ್ಮಣ, ದಲಿತ ಎಂಬ ಹಲವು ಬಗೆಯ ಭಿನ್ನತೆ ಇರಬಹುದು. ಆದರೆ ಅವರನ್ನೆಲ್ಲ ಒಗ್ಗೂಡಿಸುವುದು ಒಬ್ಬ ರಾಮ.
ರಾಮ ಶೈವರಿಗೂ ಪ್ರಿಯ, ವೈಷ್ಣವರಿಗೂ ಪ್ರಿಯ. ರಾಮನ ಜಪಿಸಲು ಜಾತಿ ಕಟ್ಟಳೆಗಳಿಲ್ಲ, ವರ್ಗ ಪಂಗಡಗಳ ಹಂಗಿಲ್ಲ. ಹೀಗಿರುವುದರಿಂದಲೇ, ತಲೆಮಾರುಗಳ ಬಯಕೆಯಾಗಿತ್ತು ಒಂದು ರಾಮಮಂದಿರ. ಮೋದಿಜಿ ಮತ್ತವರ ತಾತ ಮುತ್ತಾತಂದಿರೂ ಇದರಿಂದ ಹೊರತಲ್ಲ.
ಕೊನೆಯಲ್ಲಿ ಯಾರೆಷ್ಟೇ ನಂಜುಕಾರಿದರೂ, ಕೊನೆಗೂ ರಾಮಮಂದಿರದ ಕೀರ್ತಿ ಸಲ್ಲುವುದು ಬಿಜೆಪಿ ಹಾಗೂ ಮೋದಿಜಿ ಅವರಿಗೆ ಮಾತ್ರ.

-ಗೀರ್ವಾಣಿ ಎಂ.ಎಚ್