ಅಭ್ಯರ್ಥಿಯ ವಿಷಯ ಬಿಟ್ಟಾಕಿ, ತಪ್ಪದೇ ಮೋದಿಗೆ ಮತಹಾಕಿ!

ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವದ ಪರ್ವ ಲೋಕಸಭಾ ಚುನಾವಣೆಯ ದಿನಾಂಕ ಘೋಷಣೆಯಾಗಿದೆ. ಅಧಿಕಾರದಲ್ಲಿರುವ ಮೋದಿ ಸರ್ಕಾರ ತನ್ನ ಹತ್ತು ವರ್ಷಗಳ ಸಾಧನೆಗಳ ರಿಪೋರ್ಟ್ ಕಾರ್ಡ್ ಹಿಡಿದುಕೊಂಡು ಚುನಾವಣೆಗೆ ಸಜ್ಜಾಗಿದೆ. ಜನರ ಭಾವನೆ ಮತ್ತು ಮಾಧ್ಯಮಗಳ ಸರ್ವೇಗಳನ್ನು ಗಮನಿಸಿದರೆ ಮೋದಿ ನೇತೃತ್ವದ ಎನ್‌ಡಿಎ ಮತ್ತೆ ಚುಕ್ಕಾಣಿ ಹಿಡಿಯುವುದು ನಿಚ್ವಳವಾಗಿದೆ. ಮೋದಿ ವಿರೋಧಿಗಳು ಶಸ್ತ್ರ ತ್ಯಾಗ ಮಾಡಿದಂತೆ ಕಾಣುತ್ತಿದೆ. ಕಳೆದ ಹಲವು ಚುನಾವಣೆಗಳಿಂದ ಪಾಠ ಕಲಿಯದ ವಿರೋಧ ಪಕ್ಷಗಳು ಪ್ರಧಾನಿಯವರ ವಿರುದ್ಧ ವೈಯಕ್ತಿಕ ಟೀಕೆಗೆ ಇಳಿದಿವೆ. ತಮ್ಮೆಡೆಗೆ ಎಸೆದ ಕಲ್ಲುಗಳಿಂದ ಸಾಧನೆಯ ಸೌಧವನ್ನು ಕಟ್ಟಿಕೊಳ್ಳುವುದರಲ್ಲಿ ನರೇಂದ್ರ ಮೋದಿ ಚಾಣಾಕ್ಷರು. ಗುಜರಾತಿನಲ್ಲಿ ಮುಖ್ಯಮಂತ್ರಿಯಾಗಿದ್ದಾಗಲೂ ಕಾಂಗ್ರೆಸ್ಸಿಗರ ಮತ್ತು ಎಡಪಂಥೀಯರ ಕುತಂತ್ರಗಳನ್ನು ಮೆಟ್ಟಿನಿಂತು ಅವುಗಳನ್ನೇ ಮೆಟ್ಟಿಲಾಗಿ‌ ಪರಿವರ್ತಿಸಿಕೊಂಡು ಪ್ರಧಾನಿ ಅಭ್ಯರ್ಥಿಯಾದರು. ಸಾವಿನ ವ್ಯಾಪಾರಿ, ಚಾಯ್ ವಾಲಾ, ನೀಚ್ ಹೀಗೆ ವಿರೋಧಿಗಳ ನಿಂದಾಸ್ತುತಿ ಮುಂದುವರೆಯುತ್ತಲೇ ಹೋಯಿತು.
ಎಲ್ಲವನ್ನೂ ದಿಟ್ಟವಾಗಿ ಎದುರಿಸಿ ಜಾಣ್ಮೆಯಿಂದ ಉಪಯೋಗಿಸಿಕೊಂಡವರು ಮೋದಿ. ಚಾಯ್ ವಾಲಾ ಅಂದಿದ್ದು ಜನರ ನಡುವೆ ‘ಚಾಯ್ ಪೇ ಚರ್ಚಾ’ ಆಯಿತು. ಚೌಕಿದಾರ್ ಚೋರ್ ಅಂತ ರಾಹುಲ್ ಗಾಂಧಿ ಸುಳ್ಳು ಹೇಳಿದ್ದರ ಪರಿಣಾಮ ದೇಶದ ಕೋಟ್ಯಂತರ ಜನ ‘ನಾನೂ ಚೌಕಿದಾರ’ ಅಂತ ಹೆಮ್ಮೆಯಿಂದ ಹೇಳತೊಡಗಿದರು. ಇನ್ನೇನು 2024ರ ಚುನಾವಣೆಗೆ ದಿನಗಣನೆ ಆರಂಭವಾಗಿರುವ ಈ ಹೊತ್ತಿನಲ್ಲಿ ಕಾಂಗ್ರೆಸ್‌ ಪಕ್ಷದ ಮೈತಿಕೂಟದ ಭಾಗವಾದ ಲಾಲೂ ಪ್ರಸಾದ್ ಯಾದವ್ ಮೋದಿಯವರ ಪರಿವಾರದ ಬಗ್ಗೆ ಮತ್ತು ಅವರ ತಾಯಿಯ ಬಗ್ಗೆ “ಮೋದಿ ಅವರು ಕುಟುಂಬ ರಾಜಕಾರಣದ ಬಗ್ಗೆ ಮಾತಾಡುತ್ತಾರೆ. ಅವರಿಗೆ ಕುಟುಂಬವೇ ಇಲ್ಲ, ಅವರ ತಾಯಿ ತೀರಿಕೊಂಡಾಗ ವಿಧಿಗಳನ್ನೇ ಪಾಲಿಸಿದ ಮೋದಿ ಯಾವ ಹಿಂದೂ” ಎಂದೆಲ್ಲ ಕೆಟ್ಟದಾಗಿ ಮಾತನಾಡಿದ್ದಾರೆ. ಆದರೆ ದಿನಕ್ಕೆ ಹದಿನೆಂಟು ತಾಸು ಕೆಲಸ ಮಾಡುತ್ತಾ ಸರ್ವಸ್ವವನ್ನೂ ಭಾರತಕ್ಕೆ ಸಮರ್ಪಿಸಿರುವ ಕಾಯಕಯೋಗಿಗೆ 140 ಕೋಟಿ ಜನರೇ ಪರಿವಾರ ದನಗಳ ಆಹಾರದಲ್ಲೂ ಭ್ರಷ್ಟಾಚಾರ ಮಾಡಿ ಜೈಲಿಗೆ ಸೇರಿದ್ದ ಲಾಲೂ ಪ್ರಸಾದನಿಗೆ ಹೇಗೆ ಅರ್ಥವಾಗಬೇಕು.ಇದಕ್ಕೆ ಪ್ರತಿಕ್ರಿಯೆಯಾಗಿ ಮೋದಿಯವರ ಬೆಂಬಲಕ್ಕೆ ನಿಂತಿರುವ ಕೋಟ್ಯಂತರ ಜನ ‘ಮೋದಿಯವರಿಗೆ ನಾವೇ ಪರಿವಾರ’ ಎಂದು ಜನರು ಸಾಮಾಜಿಕ ಜಾಲತಾಣಗಳಲ್ಲಿ ಪೋಟೋಗಳನ್ನು ಹಾಕುತ್ತಿದ್ದಾರೆ.ಇದು ಅದಾಗಲೇ ಟ್ರೆಂಡ್ ಆಗುತ್ತಿದೆ. ಟ್ವಿಟರ್‌(ಎಕ್ಸ್) ಮತ್ತು ಫೇಸ್‌ಬುಕ್‌ಗಳಲ್ಲಿ ತಮ್ಮ ಹೆಸರಿನ ಜೊತೆ ಮೋದಿಯ ಪರಿವಾರ ಎಂದು ಬರೆದುಕೊಳ್ಳುತ್ತಿದ್ದಾರೆ.

ಈಗಿನ ಕಾಲದಲ್ಲಿ ಒಬ್ಬ ರಾಜಕಾರಣಿ ಶಾಸಕ‌ನಾದರೆ ಸಾಕು ಅವರ ಕುಟುಂಬಸ್ಥರು ಅಧಿಕಾರದ ದುರುಪಯೋಗ ಪಡಿಸಿಕೊಂಡು ಮುಂದಿನ ಹತ್ತು ತಲೆಮಾರಿಗೆ ಆಗುವಷ್ಟು ಹಣಮಾಡುವುದನ್ನು ಕಾಣುತ್ತೇವೆ. ಇನ್ನು ಮಂತ್ರಿಯಾದರಂತೂ ಅವರ ಕಾಲುಗಳು ನೆಲದ ಮೇಲೆಯೇ ಇರುವುದಿಲ್ಲ. ಆದರೆ ನರೇಂದ್ರ ಮೋದಿಯವರು ಇದಕ್ಕೆ ಅಪವಾದದಂತೆ ತಮ್ಮ ಪರಿವಾರವನ್ನು ಹತ್ತಿರಕ್ಕೂ ಬಿಟ್ಟುಕೊಳ್ಳದೆ ಉಳಿದ ರಾಜಕಾರಣಿಗಳಿಗೆ ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ. ಇದುವರೆಗೂ ಅವರ ಸಹೋದರರಾಗಲಿ ಅಥವಾ ಅವರ ಕುಟುಂಬದವರಾಗಲಿ ಮಾಧ್ಯಮಗಳಿಗೂ ಕಾಣಿಸದೇ ಸಾಮನ್ಯರಂತೆ ಬದುಕು ನಡೆಸುತ್ತಿದ್ದಾರೆ. ಅಧಿಕಾರ‌ವಿರುವುದೇ ತಾವು ಮತ್ತು ತಮ್ಮ ಕುಟುಂಬ ಅನುಭವಿಸಲು ಎಂದು ತಿಳಿದಿರುವ ಲಾಲೂ ಪ್ರಸಾದ್, ಸೋನಿಯಾ ಗಾಂಧಿ, ಮುಲಾಯಮ್ ಸಿಂಗ್‌ರಂತಹ ಸ್ವಾರ್ಥಿಗಳಿಗೆ ಇದು ಹೇಗೆ ತಿಳಿದೀತು. ಆದರೆ ಭಾರತೀಯರಿಗೆ ಕಳೆದ ಹತ್ತು ವರ್ಷಗಳಲ್ಲಿ ಇದು ಅರ್ಥವಾಗಿದೆ. ಈಗ ಚುನಾವಣೆ ಎದುರಿಸಲು ಕುಟುಂಬದ ಹೆಸರಷ್ಟೇ ಸಾಲದು ಯೋಗ್ಯತೆ ಮತ್ತು ಅರ್ಹತೆಯೂ ಬೇಕು ಎಂಬುದನ್ನು ಜನರು ಅಪೇಕ್ಷಿಸುವ ವಾತಾವರಣವನ್ನು ಕಳೆದ ಹತ್ತು ವರ್ಷಗಳಲ್ಲಿ ಮೋದಿ ಸೃಷ್ಟಿಸಿದ್ದಾರೆ.

ತತ್ತ್ವ ಸಿದ್ಧಾಂತಗಳನ್ನು ಜೀವನದ ಭಾಗವಾಗಿಸಿಕೊಂಡಿದ್ದರೂ ಮೋದಿ ಎಂದಿಗೂ ನಿಂತ ನೀರಿನಂತಾಗಲಿಲ್ಲ. ಸಮಯಕ್ಕೆ ತಕ್ಕಂತೆ ತಂತ್ರಜ್ಞಾನದೊಂದಿಗೆ ತಮ್ಮನ್ನು ತಾವು ನವೀಕರಿಸಿಕೊಂಡಿದ್ದರಿಂದಲೇ ನರೇಂದ್ರ ಮೋದಿಯವರನ್ನು ಕಂಡರೆ ಯುವಪೀಳಿಗೆಗೆ ಅಚ್ಚುಮೆಚ್ಚು. 2014 ರ ಚುನಾವಣೆಯ ಸಂದರ್ಭದಲ್ಲಿ ಅವರ ವಿರೋಧಿಗಳು ಪ್ರಚಾರಕ್ಕೆ ಮಾಧ್ಯಮಗಳನ್ನು ಅವಲಂಬಿಸಿದ್ದರೆ ಇತ್ತ ಮೋದಿ ಟ್ವಿಟರ್ ಮೂಲಕ ನೇರವಾಗಿ ಜನರನ್ನು ತಲುಪುತ್ತಿದ್ದರು. ಅಷ್ಟೇ ಏಕೆ ಇತ್ತೀಚಿಗೆ ನೂರಾರು “ಕಂಟೆಂಟ್ ಕ್ರಿಯೇಟರ್” ಗಳನ್ನು ಒಂದೆಡೆ ಸೇರಿಸಿ ಅವರಿಗೆ ಇದೇ ಮೊದಲ ಬಾರಿಗೆ ರಾಷ್ಟ್ರೀಯ ಪುರಸ್ಕಾರ ನೀಡಿದ್ದು ಬಹುಶಃ ಉಳಿದವರ ಊಹೆಗೂ ನಿಲುಕದ ಸಂಗತಿ. ಈ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬ ಪ್ರಶಸ್ತಿ ವಿಜೇತರ ಜತೆ ಮಾತನಾಡುವಾಗ ಮೋದಿಯವರ ವಿಷಯ ಗ್ರಹಿಕೆ, ಪ್ರತಿಕ್ರಿಯಿಸುವ ರೀತಿ ಮತ್ತು ಅವರ ಕ್ರಿಯಾಶೀಲತೆ‌ ಅಚ್ಚರಿ ಮೂಡಿಸುತ್ತಿತ್ತು. ಪ್ರಶಸ್ತಿ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಒಬ್ಬೊಬ್ಬ ಕಂಟೆಂಟ್ ಕ್ರಿಯೆಟರ್‌ಗೂ ಸಹ ಲಕ್ಷಾಂತರ ಹಿಂಬಾಲಕರಿದ್ದಾರೆ. ಮೋದಿಯವರು ಇದನ್ನು ಸುಲಭವಾಗಿ ರಾಜಕೀಯ ವೇದಿಕೆಯಾಗಿ ಮಾಡಿಕೊಳ್ಳಬಹುದಿತ್ತು ಆದರೆ ಮೋದಿ ಹಾಗೆ ಮಾಡಲಿಲ್ಲ. ಬದಲಾಗಿ ‘ನಿಮ್ಮ ಮಾಧ್ಯಮವನ್ನು ವೇದಿಕೆಯಾಗಿ ಬಳಸಿಕೊಂಡು ಯುವಜನತೆ ಹೆಚ್ಚೆಚ್ಚು ಮತ ಚಲಾಯಿಸಲು ಪ್ರೇರಣೆ ನೀಡುವಂತೆ ಮತ್ತು ಭಾರತವನ್ನು ಮತ್ತಷ್ಟು ಉತ್ತಮಗೊಳಿಸುವಂತೆ ಪ್ರಯತ್ನಿಸಲು’ ಮನವಿ ಮಾಡಿದರು. ಇದು ಒಬ್ಬ ರಾಜಕೀಯ ಮುತ್ಸದ್ದಿ ನಡೆದುಕೊಳ್ಳುವ ರೀತಿ.

ಒಂದು ಕಡೆ ಮೌಲ್ಯಾಧಾರಿತ ರಾಜಕಾರಣ ಮಾಡುವ ಮೋದಿ ಅಭಿವೃದ್ಧಿಯ ಬಗ್ಗೆ ಮಾತನಾಡುತ್ತಿದ್ದಾರೆ‌. ಮತ್ತೊಂದು ಕಡೆ ತನ್ನ ಪ್ರತಿ ಭಾಷಣದಲ್ಲೂ ಜಾತಿಯ‌ ವಿಚಾರವನ್ನೇ ಮಾತನಾಡುವ ಹಾಗೂ ಜಿಎಸ್‌ಟಿ‌ಯನ್ನೂ ಜಾತಿಯೊಂದಿಗೆ ತಳಕು ಹಾಕುವ ರಾಹುಲ್‌ ಗಾಂಧಿ ಮಾತುಗಳನ್ನು ಕೇಳಿ ಸ್ವತಃ ಕಾಂಗ್ರೆಸ್ಸಿಗರೂ ಕಂಗಾಲಾಗಿದ್ದಾರೆ. ಇದೇ ಕಾರಣದಿಂದ ಈ ಬಾರಿ ಜನರನ್ನು ಬಿಡಿ ಕಾಂಗ್ರೆಸ್ ಕಾರ್ಯಕರ್ತರಿಗೂ ನ್ಯಾಯ ಯಾತ್ರೆಯ ಬಗ್ಗೆ ಆಸಕ್ತಿ ಇರಲಿಲ್ಲ. ಮೋದಿಯವರು 2026ರ ಹೊತ್ತಿಗೆ ಐದು ಟ್ರಿಲಿಯನ್ ಆರ್ಥಿಕತೆಯ ಕನಸು ಕಾಣುತ್ತಿದ್ದಾರೆ, 2036ರಲ್ಲಿ ಭಾರತ ಓಲಂಪಿಕ್ ಕ್ರೀಡಾಕೂಟವನ್ನು ಭಾರತ ಆತಿಥ್ಯ ವಹಿಸಲು ಸಿದ್ಛವಾಗುತ್ತಿದೆ, 2040 ಇಸವಿಗೆ ಚಂದ್ರನ ಮೇಲೆ ಮನುಷ್ಯನನ್ನು ಕಳುಹಿಸುವ ಯೋಜನೆ ರೂಪಿಸುತ್ತಿದ್ದಾರೆ ಮತ್ತು 2047ಕ್ಕೆ ಸ್ವಾತಂತ್ರ್ಯೋತ್ಸವದ ಶತಮಾನದ ಸಮಯದಲ್ಲಿ ಭಾರತ ಅಭಿವೃದ್ಧಿ ಹೊಂದಿದ ದೇಶಗಳ ಪಟ್ಟಿಯಲ್ಲಿರಲು ಮೋದಿ ಅವಿರತವಾಗಿ ಶ್ರಮಿಸುತ್ತಿದ್ದಾರೆ. ಆದರೆ ಕಾಂಗ್ರೆಸ್ ಸೇರಿದಂತೆ ಇಂಡಿ ಒಕ್ಕೂಟ ಈಗಲೂ ಜಾತಿಗಣತಿ, ಉಚಿತ ಗ್ಯಾರಂಟಿಗಳನ್ನು ಜಪಿಸುತ್ತಾ ಭಾರತೀಯರನ್ನು ವಂಚಿಸುವ ಯೋಚನೆಯಲ್ಲಿದ್ದಾರೆ. ಮೋದಿಯ ಗ್ಯಾರಂಟಿಗಳ ಮುಂದೆ ಇವರ ನಕಲಿ ಗ್ಯಾರಂಟಿಗಳು ನಿಲ್ಲುವುದಿಲ್ಲ.

ಚುನಾವಣೆಯ ಬಿಸಿ ನಿಧಾ‌ನಕ್ಕೆ ಏರುತ್ತಿದೆ. ರಾಜಕೀಯ ಪಕ್ಷಗಳ ಅಭ್ಯರ್ಥಿಗಳ ಘೋಷಣೆಯೂ ಹಂತಹಂತವಾಗಿ ಆರಂಭವಾಗಿದೆ. ಕೆಲವು ಕಡೆ ತಮಗೆ ಬೇಕಾದವರಿಗೆ ಟಿಕೆಟ್ ಸಿಗಲಿಲ್ಲವೆಂಬ ಅಸಮಾಧಾನ ಮತ್ತು ಇನ್ನೂ ಕೆಲವೆಡೆ ಅಪಾತ್ರರಿಗೆ ಅವಕಾಶ ಸಿಕ್ಕಿದೆಯೆಂಬ ಮಾತುಗಳು ಸಹಜವಾಗಿ ಕೇಳಿ ಬರುತ್ತಿವೆ. ನೆನಪಿರಲಿ, ಇದು ಪ್ರಧಾನ ಮಂತ್ರಿಯನ್ನು ಆಯ್ಕೆ ಮಾಡುವ ಚುನಾವಣೆ. ಅಭ್ಯರ್ಥಿಗಿಂತ ಅದಕ್ಕಿಂತ ಪ್ರಧಾನಿ ಯಾರಾಗ್ತಾರೆ ಎಂಬುದಕ್ಕೆ ಹೆಚ್ಚು ಪ್ರಾಮುಖ್ಯತೆ. ಕಾಶ್ಮೀರದಲ್ಲಿ ಆರ್ಟಿಕಲ್‌ 370 ತೆಗೆದಿದ್ದು, ರಾಮ ಮಂದಿರ ಮತ್ತು ಕಾಶಿ ಕಾರಿಡಾರ್ ನಿರ್ಮಾಣ, ತ್ರಿವಳಿ ತಲಾಖ್ ನಿಷೇಧ, ಯಶಸ್ವಿ G20 ಅಧಿವೇಶನದ‌ ಆಯೋಜನೆ, ಪ್ರಪಂಚದ ಐದನೆಯ ಆರ್ಥಿಕತೆಯಾಗಿ ಭಾರತ ಬೆಳೆದಿರುವುದಕ್ಕೆ, ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಜಾರಿಗೊಳಿಸಲು ಸಾಧ್ಯವಾಗಿದ್ದು ಸಮರ್ಥ ನಾಯಕತ್ವದ ಕಾರಣದಿಂದ. ನರೇಂದ್ರ ಮೋದಿಯವರು ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್’ ಘೋಷಣೆಯೊಂದಿಗೆ ಸರ್ವರನ್ನೂ ಒಳಗೊಂಡ ಅಭಿವೃದ್ಧಿ ಆಧಾರಿತ ಮತ್ತು ಭ್ರಷ್ಟಾಚಾರ ಮುಕ್ತ ಆಡಳಿತಕ್ಕೆ ನಾಂದಿ ಹಾಡಿದ್ದಾರೆ. ಅಂತ್ಯೋದಯದ ಕಲ್ಪನೆಯೊಂದಿಗೆ ವಿವಿಧ ಸರ್ಕಾರಿ ಸೇವೆಗಳನ್ನು ಮತ್ತು ಪ್ರಯೋಜನಗಳನ್ನು ಕಟ್ಟಕಡೆಯ ಭಾರತೀಯನಿಗೂ ತ್ವರಿತವಾಗಿ ಮತ್ತು ಪರಿಣಾಮಕಾರಿಯಾಗಿ ತಲುಪಿಸುವ ಕಾರ್ಯ ನಿರಂತರವಾಗಿ ನಡೆದಿದೆ. ಇಂದು ಚಿಕ್ಕ ತರಕಾರಿ ಅಂಗಡಿಯೂ ಡಿಜಿಟಲ್ ವಹಿವಾಟು ನಡೆಸುತ್ತದೆ. ಭಾರತವೀಗ ವಿಶ್ವದ ಅತಿದೊಡ್ಡ ಆರೋಗ್ಯ ಕಾರ್ಯಕ್ರಮವಾದ ‘ಆಯುಷ್ಮಾನ್ ಭಾರತ್‌’ ಯೋಜನೆಗೆ ನೆಲೆಯಾಗಿದೆ. ಈ ಕಾರ್ಯಕ್ರಮದಡಿಯಲ್ಲಿ ಅಮೇರಿಕದ ಒಟ್ಟು ಜನಸಂಖ್ಯೆಗಿಂತಲೂ ಹೆಚ್ಚಿ‌ನ ಜನರಿಗೆ ಕೈಗೆಟುಕುವ ಗುಣಮಟ್ಟದ ಆರೋಗ್ಯ ಸೇವೆಗಳನ್ನು ಒದಗಿಸಲಾಗಿದೆ. ಸ್ವಾತಂತ್ರ್ಯದ 70 ವರ್ಷಗಳ ನಂತರವೂ ವಿದ್ಯುತ್ ಸಂಪರ್ಕವಿಲ್ಲದ 18,000 ಹಳ್ಳಿಗಳಿಗೆ ವಿದ್ಯುತ್ ನೀಡಲಾಗಿದೆ. ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಸೇರಿದಂತೆ ಹಣದುಬ್ಬರ ಬೇರೆ ದೇಶಗಳಿಗೆ ಹೋಲಿಸಿದರೆ ನಿಯಂತ್ರಣದಲ್ಲಿದೆ. ಇದೆಲ್ಲಕ್ಕೂ ನರೇಂದ್ರ ಮೋದಿಯವರ ಸಾರಥ್ಯವೇ ಮುಖ್ಯ ಕಾರಣ ಎಂಬುದರಲ್ಲಿ ಸಂಶಯವಿಲ್ಲ. ಹಾಗಾಗಿ ಮೋದಿಯನ್ನು ಮತ್ತೆ ಪ್ರಧಾನಿಯಾಗಿಸೋಣ, ಆ ಮೂಲಕ ಭಾರತದ ಭವಿಷ್ಯವನ್ನು ಭದ್ರಗೊಳಿಸೋಣ. ಅಭ್ಯರ್ಥಿಯ ವಿಷಯ ಬಿಟ್ಟಾಕಿ, ತಪ್ಪದೇ ಮೋದಿಗೆ ಮತಹಾಕಿ! ಏನಂತೀರಿ?

ಗುರುಪ್ರಸಾದ್ ಆರ್