ನ ಖಾವೂಂಗಾ, ನ ಖಾನೆದೂಂಗಾ-ನುಡಿದಂತೆ ನಡೆದ ಮೋದಿ

ನರೇಂದ್ರ ಮೋದಿಯವರ “ನ ಖಾವೂಂಗಾ, ನ ಖಾನೆದೂಂಗಾ” ಎಂಬ ಘೋಷಣೆಯನ್ನು ಕೇಳಿಯೇ ಇದ್ದೇವೆ. ಹಿಂದೆ ಕಾಂಗ್ರೆಸ್ ಆಡಳಿತದ ಹಗರಣಗಳು ಭಾರತದ ಅಭಿವೃದ್ಧಿಯನ್ನು ನುಂಗಿ ಹಾಕಿದ್ದು ಮಾತ್ರವಲ್ಲ ರಾಜಕೀಯ ಅಂದ್ರೆನೇ ಭ್ರಷ್ಟಾಚಾರಿಗಳ ಕೂಡುಕೂಟ ಎಂಬಂತಾಗಿತ್ತು. ಆದರೆ ಕಳೆದ ಹತ್ತು ವರ್ಷಗಳ ಮೋದಿಯವರ ಭ್ರಷ್ಟಾಚಾರ ರಹಿತ ಆಡಳಿತದಿಂದ ಸಮಾಜದಲ್ಲಿ ಮತ್ತೆ ಭರವಸೆ ಮೂಡುತ್ತಿದೆ. ರಫೇಲ್,ಅದಾನಿ-ಅಂಬಾನಿ,ಈಗ ಎಲೆಕ್ಷನ್ ಬಾಂಡ್‌ಗಳು ಹೀಗೆ ಮೋದಿ ವಿರುದ್ಧ ಹೂಡಿದ ಆಧಾರ ರಹಿತ ಆರೋಪಗಳು ತರೆಗೆಲೆಯಂತೆ ಬಿದ್ದು ಕಾಂಗ್ರೆಸ್ಸಿಗೆ ತಿರುಗು ಬಾಣವಾಗುತ್ತಿವೆ. ಮೊದಲ ಬಾರಿಗೆ ಮತ ಚಲಾಯಿಸುತ್ತಿರುವ ಯುವಕ ಯುವತಿಯರು ಮೋದಿಯವರ ಅಮೃತ ಕಾಲವನ್ನು ಮಾತ್ರ ನೋಡಿದ್ದಾರೆ. ಹಾಗಾಗಿ ಕಾಂಗ್ರೆಸ್‌ನ ಕರಾಳಯುಗದ ನೆನಪನ್ನೊಮ್ಮೆ ಮಾಡಿಕೊಡುವ ಪ್ರಯತ್ನವಿದು. ಹಗರಣಗಳ ವಿಷಯದಲ್ಲಿ ಕಾಂಗ್ರೆಸ್‌ನದ್ದು ಸಿಂಹಪಾಲು.

ಜೀಪ್ ಹಗರಣ :
1948ರ ಜೀಪ್ ಖರೀದಿ ಹಗರಣ ಬಹುಶಃ ಸ್ವತಂತ್ರ ಭಾರತ ಕಂಡ ಮೊದಲ ಹಗರಣ. ಭಾರತ-ಪಾಕ್ ಯುದ್ಧ ನಡೆಯುತ್ತಿದ್ದರಿಂದ ಭಾರತೀಯ ಸೇನೆಗೆ ಜೀಪ್‌ಗಳ ತುರ್ತು ಅಗತ್ಯವಿತ್ತು. ಬೇಕಾಗಿದ್ದ 4603 ಜೀಪ್‌ಗಳ‌ ಪೈಕಿ 1000 ಜೀಪ್‌ಗಳನ್ನು ಅಮೇರಿಕಾದಿಂದ ಆಮದು ಮಾಡಿಕೊಳ್ಳಲಾಯಿತು. ಉಳಿದ ಜೀಪ್‌ಗಳನ್ನು ಭಾರತೀಯ ಹೈಕಮಿಷನರ್ ಮತ್ತು ನೆಹರೂರವರ ಆಪ್ತರಾಗಿದ್ದ ಕೃಷ್ಣ ಮೆನನ್ ಅವರ ಶಿಫಾರಸ್ಸಿನಂತೆ ಲಂಡನ್‌ನಿ‌ಂದ ಆಮದು ಮಾಡಿಕೊಳ್ಳಲು M/s Anti-Mistantes ಎಂಬ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಯಿತು. ಈ ಒಪ್ಪಂದದ ಪ್ರಕ್ರಿಯೆಯಲ್ಲಿ ಸೈನ್ಯವನ್ನು ಸಂಪೂರ್ಣವಾಗಿ ಬೈಪಾಸ್ ಮಾಡಲಾಗಿತ್ತು. ಹೊಸ ಜೀಪ್‌ಗಳನ್ನೇ ಕೊಳ್ಳಬಹುದಾಗಿದ್ದ ಬೆಲೆಗೆ ಸರ್ಕಾರ ನವೀಕರಿಸಿದ (Refurbished) ಜೀಪ್‌ಗಳನ್ನು ಖರೀದಿಸಿದ್ದು ಮೊದಲು ಸೋಜಿಗವೆನಿಸಿತ್ತು. ಒಪ್ಪಂದದ ಪ್ರಕಾರ 65% ಹಣವನ್ನು ವಾಹನಗಳ ತಪಾಸಣೆಯ ನಂತರ, 20% ಹಣವನ್ನು ವಾಹನಗಳು ಭಾರತಕ್ಕೆ ತಲುಪಿದ ನಂತರ ಹಾಗೂ ಬಾಕಿ 15% ಹಣವನ್ನು ಒಂದು ತಿಂಗಳ ನಂತರ ಪಾವತಿಸಬೇಕಿತ್ತು. ಆದರೆ ನೆಹರೂರ ಸ್ನೇಹಿತ ಮೆನನ್, ಜೀಪ್‌ಗಳನ್ನು ತಪಾಸಣೆ ಮಾಡದೆಯೇ ಹಣವನ್ನು ಪಾವತಿಸಲು ಒಪ್ಪಿಗೆ ನೀಡಿದ್ದರು.1948 ರ ಡಿಸೆಂಬರ್ ಮೊದಲ ವಾರದಲ್ಲಿ ಬರಬೇಕಾಗಿದ್ದ ಜೀಪ್‌ಗಳು ತಿಂಗಳು ಕಳೆದರೂ ಒಂದೇ ಒಂದು ಜೀಪ್ ಭಾರತಕ್ಕೆ ಬರಲಿಲ್ಲ. ಮೆನನ್ ಅವರು 1300 ಜೀಪುಗಳನ್ನು ರವಾನಿಸಲಾಗಿದೆ ಎಂದು ಸರ್ಕಾರಕ್ಕೆ ಹೇಳಿದ್ದರು.ಆದರೆ ಭಾರತಕ್ಕೆ ಬಂದಿದ್ದು ಕೇವಲ 155 ಜೀಪ್‌ಗಳು ಮಾತ್ರ! ಮತ್ತು ಈ ಜೀಪ್‌ಗಳೂ ಸಹ ಸೇವೆಗೆ ಅರ್ಹವಿಲ್ಲ ಎಂದು ಸೇನೆ ತಿರಸ್ಕರಿಸಿತು. ವಾಹನಗಳ ಗುಣಮಟ್ಟದ ಬಗ್ಗೆ ಮಾಹಿತಿ ಪಡೆಯಲು ಕಂಪನಿಗೆ ಹೋದರೆ ಅಲ್ಲಿ ಕಂಪನಿಯೇ ಇರಲಿಲ್ಲ. ಆಗಲೇ ತಿಳಿದಿದ್ದು ಭಾರತದ ಬೊಕ್ಕಸಕ್ಕೆ ಕೃಷ್ಣ ಮೆನನ್ ‘ನೆಹರೂ ಟೋಪಿ’ ಹಾಕಿ 80,00,000 ರೂಗಳಷ್ಟು ಹಣವನ್ನು ಮೋಸ ಮಾಡಿದ್ದಾರೆ ಎಂದು. ಆಗಷ್ಟೇ ಸ್ವಾತಂತ್ರ್ಯಗೊಂಡು ಕಣ್ಣುಬಿಡುತ್ತಿದ್ದ ಭಾರತವೆಂಬ ಹಸುಗೂಸಿಗಿದು ಬರೆ ಎಳೆದಂತೆಯೇ ಸರಿ.‌

ತೈಲ ಹಗರಣ (1976)
ಪ್ರಸ್ತುತ ಇರುವ ಬೆಲೆಯಲ್ಲಿಯೇ ಭವಿಷ್ಯದಲ್ಲಿ ತೈಲವನ್ನು ಆಮದು ಮಾಡಿಕೊಳ್ಳುವ ಉದ್ದೇಶದಿಂದ ಹಾಂಗ್ ಕಾಂಗ್‌ನ ಕಂಪನಿಯೊಂದಿಗೆ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಮೂಲಕ ಸುಮಾರು $200-ಮಿಲಿಯನ್ ರೂಪಾಯಿಗಳ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಆದರೆ ಒಪ್ಪಂದ ಮಾಡಿಕೊಂಡಿದ್ದ ಹಾಂಗ್‌ಕಾಂಗ್‌ನ ಆ ಕಂಪನಿ ಅಸ್ತಿತ್ವದಲ್ಲಿಯೇ ಇಲ್ಲವೆಂದು ನಂತರ ಗೊತ್ತಾಯಿತು. ಇದರಿಂದ ಸರ್ಕಾರಕ್ಕೆ 13‌ ಕೋಟಿ ರೂಪಾಯಿ ನಷ್ಟವಾಯ್ತು. ಈ ಹಣ ಪರೋಕ್ಷವಾಗಿ ಇಂದಿರಾ ಮತ್ತು ಸಂಜಯ್‌ಗಾಂಧಿಯವರಿಗೆ ಕಿಕ್‌ಬ್ಯಾಕ್ ಮೂಲಕ ತಲುಪಿದೆ ಎಂದು ಪತ್ರಿಕೆಗಳಲ್ಲಿ ವರದಿಯಾಗಿತ್ತು.

ಬೋಫೋರ್ಸ್ ಹಗರಣ :
ಬೋಫೋರ್ಸ್ ಭಾರತದ ಎಲ್ಲ ಹಗರಣಗಳ ತಾಯಿ ಎಂದರೆ ತಪ್ಪಾಗಲಾರದು. 1986 ರ ಮಾರ್ಚ್ 24ರಂದು 1437 ಕೋಟಿ ರೂಪಾಯಿಗಳ ವೆಚ್ಚದಲ್ಲಿ 410 ಫಿರಂಗಿಗಳನ್ನು ಬೋಫೋರ್ಸ್ ಕಂಪನಿಯಿಂದ ಖರೀದಿಸಲು ನಿರ್ಧರಿಸಲಾಯಿತು. ಇದರಲ್ಲಿ ಭ್ರಷ್ಟಾಚಾರದ ವಾಸನೆ ಗ್ರಹಿಸಿದ ರಕ್ಷಣಾ ಖಾತೆಯ ರಾಜ್ಯಮಂತ್ರಿಯಾಗಿದ್ದ ಅರುಣ್‌ಸಿಂಗ್ ಮತ್ತು ಸೇನಾದಂಡನಾಯಕ ಸುಂದರಜೀ ಈ ಫಿರಂಗಿಗಳನ್ನು ಕೊಳ್ಳುವ ಒಪ್ಪಂದವನ್ನು ರದ್ದುಪಡಿಸಬೇಕೆಂದು ಒತ್ತಾಯಿಸಿದ್ದರು. ಆದರೂ ಪ್ರಧಾನಿ ರಾಜೀವ್‌ಗಾಂಧಿ ಸ್ವೀಡನ್ ಫಿರಂಗಿಗಳನ್ನು ಸರಬರಾಜು ಮಾಡಲು ಬೋಫೋರ್ಸ್ ಕಂಪೆನಿಗೇ ಗುತ್ತಿಗೆ ನೀಡಿದ್ದರು.
“ಫಿರಂಗಿಗಳ ಈ ಒಪ್ಪಂದದಲ್ಲಿ ಅಪಾರ ಮೊತ್ತದ ಲಂಚ ಕೊಡಲಾಗಿದೆ, ಬೋಫೋರ್ಸ್ ಒಪ್ಪಂದಕ್ಕಾಗಿ 1.3 ಮಿಲಿಯನ್ ಡಾಲರ್ ಹಣ ಕಮಿಷನ್ ರೂಪದಲ್ಲಿ ರಾಜೀವ್ ಗಾಂಧಿ ಸೇರಿದಂತೆ ಕಾಂಗ್ರೇಸ್‌ನ ರಾಜಕಾರಣಿಗಳಿಗೆ ಸಂದಾಯ ಮಾಡಿದೆ” ಎಂದು ಸ್ವೀಡನ್ ಪತ್ರಿಕೆಗಳು ಬಯಲು ಮಾಡಿದ್ದವು. ಪರಿಣಾಮವಾಗಿ ಚುನಾವಣೆಯಲ್ಲಿ ರಾಜೀವ್ ಗಾಂಧಿ ನೇತೃತ್ವದ ಕಾಂಗ್ರೆಸ್ ಹೀನಾಯ ಪರಾಭವ ಅನುಭವಿಸಿತ್ತು. ವಿಚಿತ್ರವೆಂದರೆ 60 ಕೋಟಿಯ ಈ ಹಗರಣದ ತನಿಖೆಗೆಂದು 100 ಕೋಟಿ ರೂಪಾಯಿ ಖರ್ಚಾಯಿತು!

ಮೇವು ಹಗರಣ – 9,00,00,00,000 ರೂ

ದೇಶದ ಭ್ರಷ್ಟ ರಾಜಕಾರಣಿಗಳ ಸಾಲಿನಲ್ಲಿ ಮುಂಚೂಣಿಯಲ್ಲಿ ನಿಲ್ಲುವ ಹೆಸರು ಲಾಲೂ ಪ್ರಸಾದ್ ಯಾದವ್. ಮಾಧ್ಯಮಗಳೂ ಸಹ ಲಾಲೂ ಮಾತಿಗೆ ಪ್ರಚಾರ ಕೊಟ್ಟು ಆತ ಸದಾ ಸುದ್ದಿಯಲ್ಲಿರುವಂತೆ ಮಾಡಿ ಆತನ ಭ್ರಷ್ಟಾಚಾರಕ್ಕೆ ಕವರ್ ಫೈರಿಂಗ್ ಕೊಡುತ್ತಿದ್ದವು. 1992 ರಲ್ಲಿ ನಡೆದಿದ್ದ ಈ ಹಗರಣದ ಮೊತ್ತ 900 ಕೋಟಿ ರೂಪಾಯಿಗಳು. ಬಿಹಾರದ ಜಾನುವಾರುಗಳಿಗೆ ಮೇವು ಹಾಗೂ ಔಷಧ ಒದಗಿಸುವ ನೆಪದಲ್ಲಿ ಅಧಿಕಾರಿಗಳು, ರಾಜಕಾರಣಿಗಳು ಸೇರಿಕೊಂಡು ಸರ್ಕಾರದ ಹಣವನ್ನು ಲೂಟಿ ಮಾಡಿದ್ದರು. ಅನೇಕ ವರ್ಷಗಳ ಕಾಲ ಅವ್ಯಾಹತವಾಗಿ ನಡೆದ ಈ ಲೂಟಿ ತಡವಾಗಿ ಬೆಳಕಿಗೆ ಬಂದು ಲಾಲೂ ಜೈಲು ಸೇರಿದ್ದ. ಸಾರ್ವಜನಿಕರ ಲೆಕ್ಕವಿಲ್ಲದಷ್ಟು ಹಣ ದೋಚಿದ್ದ ಇಂತಹ ಭ್ರಷ್ಟ ರಾಜಕಾರಣಿ ನಮ್ಮ ರೈಲ್ವೆ ಸಚಿವನಾಗಿದ್ದ ಎಂಬುದೇ ಈ ದೇಶದ ದೌರ್ಭಾಗ್ಯ.

ಕಾಮನ್‌ವೆಲ್ತ್ ಹಗರಣ – 70,000 ಕೋಟಿ

ರಾಷ್ಟ್ರದ ಗೌರವ ಮತ್ತು ಕೀರ್ತಿಯನ್ನು ಹೆಚ್ಚಿಸಬೇಕಾಗಿದ್ದ ಕ್ರೀಡಾಕೂಟವೊಂದು ಕಾಂಗ್ರೆಸ್‌ನ ದುರಾಸೆಯಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ ತಲೆತಗ್ಗಿಸುವಂತೆ ಮಾಡಿತ್ತು. 2010 ರ ಕಾಮನ್‌ವೆಲ್ತ್ ಕ್ರೀಡಾಕೂಟದ ಆಯೋಜನೆಯ ಪ್ರತಿ ಹೆಜ್ಜೆಯಲ್ಲೂ ಭಾರೀ ಭ್ರಷ್ಟಾಚಾರ ನಡೆದಿತ್ತು.ಕ್ರೀಡಾಕೂಟದ ಪರಿಕರಗಳ ಖರೀದಿಯಲ್ಲಿ, ಗುತ್ತಿಗೆ ನೀಡುವಲ್ಲಿ, ಕ್ರೀಡಾಂಗಣಗಳ ನವೀಕರಣ ಮತ್ತು ನಿರ್ಮಾಣದಲ್ಲಿ, ಮಾಧ್ಯಮಗಳ ಪ್ರಸಾರದ ಹಕ್ಕನ್ನು ನೀಡುವಲ್ಲಿ , ಕ್ರೀಡಾಂಗಣಕ್ಕೆ ಕುರ್ಚಿಗಳ ಖರೀದಿ ಕಡೆಗೆ ಟಾಯ್ಲೆಟ್ ಪೇಪರ್‌ಗಳ ಖರೀದಿಯಲ್ಲಿಯೂ ಭ್ರಷ್ಟಾಚಾರ ನಡೆದಿದ್ದನ್ನು ವರದಿಗಳು ಸಾಕ್ಷಿ ಸಮೇತ ಸಾಬೀತುಪಡಿಸಿದ್ದವು. ಇದರಲ್ಲಿ ನಷ್ಟವಾದ ಸಾರ್ವಜನಿಕರ ಒಟ್ಟು ಹಣ ಸುಮಾರು 70,000 ಕೋಟಿ! ಹಗರಣದ ರೂವಾರಿ ಕಾಮನ್ ವೆಲ್ತ್ ಸಮಿತಿಯ ಚೇರ್ಮನ್ ಆಗಿದ್ದ ಸುರೇಶ್ ಕಲ್ಮಾಡಿ ಭ್ರಷ್ಟಾಚಾರದ ಆರೋಪದಡಿ ಬಂಧಿಸಲ್ಪಟ್ಟರು. ಹೀಗೆ ದೇಶವೇ‌ ತಲೆ ತಗ್ಗಿಸುವಂತೆ ಮಾಡಿದ ಕೀರ್ತಿ ಮನಮೋಹನ‌ ಸಿಂಗ್‌ರ ಸರ್ಕಾರದ್ದು‌.

2G ಸ್ಪೆಕ್ಟ್ರಮ್ ಹಗರಣ – 1,76,00,00,00,000 ರೂ

2008 ರಲ್ಲಿ ಆಗಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ 2ಜಿ ತರಂಗಗಳ ಪರವಾನಿಗೆ ಹಂಚಿಕೆಯ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ಪ್ರಾಮಾಣಿಕತೆಯ ಕೊರತೆ ಎದ್ದು ಕಾಣುತ್ತಿದೆ ಎಂದು ಸಿಎಜಿ ವರದಿ ನೀಡಿದ್ದು ದೇಶದಲ್ಲಿ ಕೋಲಾಹಲ ಉಂಟುಮಾಡಿತ್ತು. ಇಡಿಯ ಹಗರಣ ಪ್ರಧಾನ ಮಂತ್ರಿಗಳ ಮೂಗಿನ ಕೆಳಗೆ ನಡೆದರೂ ಮೌನವಾಗಿಯೇ ಉಳಿದಿದ್ದು ಅಂದಿನ ಆಡಳಿತದ ನಿಷ್ಕ್ರಿಯತೆಗೆ ಸಾಕ್ಷಿ. ಈಗ ಇಂಡಿ ಕೂಟದ ಭಾಗವಾಗಿರುವ ಆಗಿನ ಕೇಂದ್ರದ ಸಚಿವರಾಗಿದ್ದ ಎ.ರಾಜಾ, ಡಿಎಂಕೆ ಮುಖ್ಯಸ್ಥ ಕರುಣಾನಿಧಿಯವರ ಮಗಳು ಸಂಸದೆ ಕನ್ನಿಮೋಳಿ ಈ ಹಗರಣದ ಪ್ರಮುಖ ಆರೋಪಿಗಳು. ಈ ಪ್ರಕರಣದ ನಂತರ ಭಾರತ ಭ್ರಷ್ಟಾಚಾರದ ವಿರುದ್ಧ ಎದ್ದುನಿಂತ ಪರಿಣಾಮ ಕಾಂಗ್ರೆಸ್ ಸರ್ಕಾರ ಅಧಿಕಾರ ಕಳೆದುಕೊಂಡಿತು. ಭ್ರಷ್ಟಾಚಾರದಿಂದ ರೋಸಿ ಹೋಗಿದ್ದ ಜನ ಮೋದಿಯವರನ್ನು ಆಯ್ಕೆ ಮಾಡಿದರು.

ಇವು ಕೆಲವು ಹಗರಣಗಳ ಪರಿಚಯವಷ್ಟೇ. ಭ್ರಷ್ಟಾಚಾರದ ಮೂಲಕ ದೇಶದ ಆರ್ಥಿಕತೆಯನ್ನೇ ಬುಡಮೇಲು ಮಾಡಿದ ಹಗರಣಗಳಿಗೆ ಕಾಂಗ್ರೆಸ್‌ ಆಡಳಿತದಲ್ಲೇನು ಬರವಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ನೂರು ವರ್ಷಗಳ ಇತಿಹಾಸವಿರುವಂತೆ ಅದರ ಭ್ರಷ್ಟಾಚಾರಕ್ಕೂ ಅಷ್ಟೇ ವರ್ಷದ ಇತಿಹಾಸವಿದೆ. ನೆಹರೂ ಕಾಲದಿಂದ ಅವರ ಮರಿಮೊಮ್ಮಗ ರಾಹುಲ್‌ನ ಕಾಲದವರೆಗೂ ಕಾಂಗ್ರೆಸ್‌ನಲ್ಲಿ ಬದಲಾಗದೇ ಇರೋದು ಭ್ರಷ್ಟಾಚಾರ ಮತ್ತು ಅಧಿಕಾರದ ದಾಹ ಮಾತ್ರ!

ಭ್ರಷ್ಟಚಾರದ ವಿರುದ್ಧ ಅಭಿಯಾನದ ಮೂಲಕ ರಾಜಕೀಯಕ್ಕೆ ಬಂದಿದ್ದ ಆಪ್ ಪಕ್ಷದ ಅರವಿಂದ್ ಕೇಜ್ರಿವಾಲ್ ಸೇರಿದಂತೆ‌ ಹಲವು ಸಚಿವರು ಭ್ರಷ್ಟಾಚಾರ ನಡೆಸಿ ಜೈಲು ಸೇರಿದ್ದಾರೆ‌. ಹೀಗಿರುವಾಗ ಅಭಿವೃದ್ಧಿ ಕಾರ್ಯಗಳಿಂದ ಮಾತ್ರವಲ್ಲದೇ ತಮ್ಮ ಪ್ರಾಮಾಣಿಕತೆಯಿಂದಲೂ ಕಳೆದ ಎರಡು ದಶಕಗಳಿಂದ ನರೇಂದ್ರ ಮೋದಿಯವರು ರಾಜಕಾರಣಿಗಳಿಗೆ ಮೇಲ್ಪಂಕ್ತಿಯಾಗಿದ್ದಾರೆ. ಆ ಮುಖೇನ ಮುಂಬರುವ ದಿನಗಳನ್ನು ಆಶಾದಾಯಕಗೊಳಿಸಿದ್ದಾರೆ. ಇಂತಹ ಧೀಮಂತ ನಾಯಕನನ್ನು ಕಳೆದುಕೊಳ್ಳುವಂತಿಲ್ಲ. ಹಾಗಾಗಿ ಮೋದಿ ಮತ್ತೊಮ್ಮೆ ಅಷ್ಟೇ.

-ಗುರುಪ್ರಸಾದ್ ಆರ್