ಭಾರತೀಯರ ಚಿಂತನಾ ಕ್ರಮವನ್ನು ಬದಲಿಸಿದ ಮೋದಿಯುಗ!

೨೦೧೪ ರ ಹಿಂದಿನ ಭಾರತೀಯರ ಆಲೋಚನಾಕ್ರಮಕ್ಕೂ, ೨೦೨೪ ರ ಭಾರತದ ಚಿಂತನಾ ಕ್ರಮಕ್ಕೂ ಬಹಳವೇ ವ್ಯತ್ಯಾಸವಾಗಿದೆ. ಅದು ರಾಜಕೀಯವಾಗಿರಬಹುದು, ಧಾರ್ಮಿಕವಾಗಿರಬಹುದು, ಸಾಮಾಜಿಕವಾಗಿರಬಹುದು, ಎಲ್ಲ ದೃಷ್ಟಿಯಲ್ಲೂ ಮೋದಿಯುಗವು ಅನೂಹ್ಯ ಬದಲಾವಣೆಯನ್ನು ಮಾಡಿದೆ. ಯೋಚನಾಕ್ರಮದ ಬದಲಾವಣೆಯೇ ಎಷ್ಟೋ ಸಲ ಅರ್ಧದಷ್ಟು ಸಮಸ್ಯೆಯನ್ನು ಪರಿಹರಿಸುತ್ತದೆ ಮತ್ತು ನಿಜವಾದ ಅಭಿವೃದ್ಧಿಗೆ ಕಾರಣವಾಗುತ್ತದೆ. ಮೋದಿಯುಗಕ್ಕಿಂತ ಮುಂಚೆ ಭಾರತೀಯರಲ್ಲಿ ದೇಶದ ಅಭಿವೃದ್ಧಿಯ ಬಗ್ಗೆ, ಭವಿಷ್ಯತ್ತಿನ ಬಗ್ಗೆ ಯಾವ ವಿಶ್ವಾಸವೂ ಇರಲಿಲ್ಲ. ಸರ್ಕಾರದ ಎಲ್ಲ ಘೋಷಣೆಗಳೂ ಕೇವಲ ಔಪಚಾರಿಕವಾದ ಘೋಷಣೆಗಳಾಗಿಯೋ, ಚನಾವಣಾ ಸಮಯದ ವಾಗ್ದಾನಗಳಾಗಿಯೋ ಕಾಣಿಸುತ್ತಿತ್ತು. ಹಾಗಾಗಿ ಯಾವುದೇ ಯೋಜನೆಗಳು ಬಂದರೂ ಜನರಲ್ಲಿ ಯಾವ ಆಶಾವಾದವೂ ಮೂಡುತ್ತಿರಲಿಲ್ಲ. ಯಾರೇ ಅಧಿಕಾರಕ್ಕೆ ಬಂದರೂ ದೇಶ ಉದ್ಧಾರವಾಗುವುದು ಅಷ್ಟರಲ್ಲೇ ಇದೆ ಎಂಬ ಗೊಣಗಾಟದ ಮನಃಸ್ಥಿತಿಗೆ ದೇಶ ಹೋಗಿಬಿಟ್ಟಿತ್ತು.
ಆದರೆ ಕಳೆದ ಕೇವಲ ಒಂಬತ್ತು ವರ್ಷಗಳ ಮೋದಿಯುಗದಲ್ಲಿ ಭಾರತೀಯರ ಮನಃಸ್ಥಿತಿಯಲ್ಲಿ ಮತ್ತು ಚಿಂತನಾಕ್ರಮದಲ್ಲಿ ಅದ್ಭುತವಾದ ಬದಲಾವಣೆಗಳು ಮೂಡಿವೆ. ಇವತ್ತು ದೇಶದ ಭವಿಷ್ಯತ್ತಿನ ಬಗ್ಗೆ ಎಲ್ಲ ಭಾರತೀಯರೂ ತುಂಬು ವಿಶ್ವಾಸದಿಂದ ಕೂಡಿದ್ದಾರೆ. ಎಲ್ಲರಲ್ಲಿಯೂ ದೇಶದ ಬಗ್ಗೆ ಅಭಿಮಾನ ಮೂಡುತ್ತಿದೆ. ಹಾವಾಡಿಗರ ದೇಶ ಭಾರತ ಎನ್ನುತ್ತಿದ್ದ ಕಾಲದಿಂದ ಹೊರಬಂದು ಭಾರತೀಯರೆಲ್ಲರೂ ಎದೆಯುಬ್ಬಿಸಿ, ನಾನು ಭಾರತೀಯ ಎನ್ನುವ ಕಾಲಘಟ್ಟಕ್ಕೆ ಬಂದು ತಲುಪಿದ್ದೇವೆ. ಅಭಿವೃದ್ಧಿ ಹೊಂದಿದ ದೇಶಗಳು ಮತ್ತು ಅಭಿವೃದ್ಧಿ ಹೊಂದುತ್ತಿರುವ ದೇಶಗಳು ಎಂಬ ವರ್ಗೀಕರಣ ಭಾರತ್ ವಿಷಯದಲ್ಲಿ ತೆಳುವಾಗುತ್ತಿದೆ. ಈ ಹಿಂದೆ ನಾವಿನ್ನೂ ಅಭಿವೃದ್ಧಿಯನ್ನು ಹೊಂದುತ್ತಿರುವ ರಾಷ್ಟ್ರವೆಂಬ ಕೀಳರಿಮೆಯಲ್ಲಿಯೇ ಮಗ್ನರಾಗಿರುತ್ತಿದ್ದೆವು. ಇಂದು ಆ ವ್ಯತ್ಯಾಸ ನಮ್ಮನ್ನು ಕೀಳರಿಮೆಗೆ ದೂಡುತ್ತಿಲ್ಲ. ಬದಲಿಗೆ ಆರ್ಥಿಕತೆಯಲ್ಲಿ, ಸಾಮಾಜಿಕ ಭದ್ರತೆಯಲ್ಲಿ, ಅಭಿವೃದ್ಧಿಯಲ್ಲಿ ಸೇರಿದಂತೆ ಎಲ್ಲ ವಿಷಯಗಳಲ್ಲಿಯೂ ನಾವಿಂದು ಯಾರಿಗೂ ಕಮ್ಮಿಯಿಲ್ಲ ಎಂಬಷ್ಟರ ಮಟ್ಟಕ್ಕೆ ಬಂದಿದ್ದೇವೆ. ಅಭಿವೃದ್ಧಿ ಹೊಂದಿದ ಸ್ಥಿತಿಗಿಂತಲೂ ಅಭಿವೃದ್ಧಿಯನ್ನು ತೀವ್ರ ವೇಗದಲ್ಲಿ ಹೊಂದುತ್ತಿರುವ ಸ್ಥಿತಿಯಲ್ಲಿಯೇ ಹೆಚ್ಚಿನ ಲಾಭವಿದೆ ಎಂಬುದು ಎಲ್ಲರಿಗೂ ಅರಿವಿಗೆ ಬರುತ್ತಿದೆ.
ಮೋದಿಯುಗವು ತಂದ ಮೊದಲ ಪ್ರಮುಖ ಬದಲಾವಣೆಯೆಂದರೆ ಭಾರತೀಯರ ಆಲೋಚನೆಯಲ್ಲಿನ ಬದಲಾವಣೆ. ಅತ್ಯಂತ ಸೂಕ್ಷ್ಮವಾದ ಬದಲಾವಣೆ ಕೂಡ ಸಮಾಜದಲ್ಲಿ ಒಂದು ಸಕಾರಾತ್ಮಕವಾದ ಅಲೆಯನ್ನು ಮೂಡಿಸುತ್ತದೆ. ಇದಕ್ಕೆ ಒಂದು ಉದಾಹರಣೆಯೆಂದರೆ ಅಂಗವಿಕಲರನ್ನು ದಿವ್ಯಾಂಗ ಎಂದು ಕರೆಯುವ ಘೋಷಣೆ. ಮೋದಿಯವರೇ ಸ್ವತಃ ಇದನ್ನು ಸಂಸತ್ತಿನಲ್ಲಿ ಹೇಳಿದಂದಿನಿಂದ ದಿವ್ಯಾಂಗ ಶಬ್ದವು ಈಗ ಪ್ರಚಲಿತದಲ್ಲಿದೆ. ಒಂದು ಶಬ್ದ ಬದಲಿಸಿದರೆ ಏನೂ ಬದಲಾಗದೇ ಇರಬಹುದು, ಆದರೆ ಆ ಸಮುದಾಯದಲ್ಲಿ ಅದು ತರುವ ಆತ್ಮವಿಶ್ವಾಸ ಅತ್ಯಂತ ದೊಡ್ಡದು. ಇಂಥದೇ ಮತ್ತೊಂದು ನಡಾವಳಿಯೆಂದರೆ, ತನ್ನ ಪರಂಪರೆಯನ್ನು, ಶ್ರದ್ಧೆಯನ್ನು ಧೈರ್ಯದಿಂದ ಮತ್ತು ಯಾವುದೇ ಭಿಡೆಯಿಲ್ಲದೇ ಅನುಸರಿಸುವುದು. ತನ್ನ ಸಂಪ್ರದಾಯ, ಮತ, ಧರ್ಮಕ್ಕೆ ಸಂಬಂಧಪಟ್ಟ ಗುರುತುಗಳನ್ನು ಹೆಮ್ಮೆಯಿಂದ ಧರಿಸುವುದು ಕೂಡ ಮೋದಿಯವರು ಈ ಕಾಲದ ಯುವಕರಿಗೆ ಕಲಿಸಿಕೊಟ್ಟ ದೊಡ್ಡ ಪಾಠ. ತನ್ನ ಪರಂಪರೆ, ಇತಿಹಾಸದ ಬಗ್ಗೆ ಹೆಮ್ಮೆ ಪಡುವುದನ್ನು ಕೂಡ ಮೋದಿ ಬಂದ ಮೇಲೆಯೇ ಕಲಿಯುತ್ತಿದ್ದೇವೆ.
ರಾಷ್ಟ್ರ ಮೊದಲು ಎಂಬ ಘೋಷಣೆಯನ್ನು ಮಾಡಿ, ಅದರಂತೆಯೇ ಅವಿಶ್ರಾಂತವಾಗಿ ಕಾರ್ಯವನ್ನು ಮಾಡುತ್ತಿರುವ ಮೋದಿಯವರು, ದೇಶದ ಜನರಲ್ಲೂ ಆ ಭಾವವನ್ನು ತಂದಿದ್ದಾರೆ. ಇಂದು ಅಂಬಾನಿಯಂಥ ಗಟ್ಟಿಕುಳಗಳೂ ಕೂಡ ಬೇರೆ ಯಾವುದೋ ದೇಶಕ್ಕೇ ಹೋಗದೇ ಭಾರತದಲ್ಲಿಯೇ ಕೋಟ್ಯಂತರ ಖರ್ಚು ಮಾಡಿ, ವಿದೇಶದವರೆಲ್ಲ ಇಲ್ಲಿಗೇ ಬಂದು ಭಾಗವಹಿಸುವಂತೆ ತಮ್ಮ ಕುಟುಂಬದ ವೈಭವದ ವಿವಾಹ ಮುಂತಾದ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ. ಮೇಕ್ ಇನ್ ಇಂಡಿಯಾದ ಮೂಲಕ ನಾವು ಉಪಯೋಗಿಸುವುದನ್ನೆಲ್ಲ ನಮ್ಮ ದೇಶದಲ್ಲಿಯೇ ತಯಾರಿಸುವ ಅಭಿಯಾನದಿಂದಾಗಿ, ಪ್ರತಿಭಾ ಪಲಾಯನವು ಕಡಿಮೆಯಾಗುತ್ತಿದೆ. ಸ್ಟಾರ್ಟ್ ಅಪ್ ಇಂಡಿಯಾದಂಥ ಯೋಜನೆಗಳ ಮೂಲಕ ಪ್ರತಿಭಾವಂತ ಯುವಕರು ಹೊಸ ಹೊಸ ಉದ್ದಿಮೆಗಳನ್ನು ಭಾರತದಲ್ಲಿಯೇ ಆರಂಭಿಸಿ ಯಶಸ್ವಿಯಾಗುತ್ತಿದ್ದಾರೆ. ಉಚಿತಗಳ ಬಲೆಯಿಂದ ತಪ್ಪಿಸಲು ಮೋದಿಯವರು ಇನ್ನಿಲ್ಲದಷ್ಟು ಪ್ರಯತ್ನಪಡುತ್ತಿದ್ದಾರೆ. ಈಸ್ ಆಫ್ ಡುಯಿಂಗ್ ಮೂಲಕ ಹೊಸ ಹೊಸ ಉದ್ದಿಮೆಗಳನ್ನು ಸ್ಥಾಪಿಸಲು ಮುಕ್ತವಾದ ಮತ್ತು ಸುಲಭವಾದ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದೆ. ಇದರಿಂದ ಭಾರತವನ್ನು ತಮ್ಮ ಉತ್ಪನ್ನಗಳ ಕ್ರಯಣಭೂಮಿಯಾಗಿ ಕಾಣುತ್ತಿದ್ದವರ ದೃಷ್ಟಿಯಲ್ಲಿ ಭಾರತವು ನಿರ್ಮಾತೃಗಳ ಭೂಮಿಯಾಗಿ ಪರಿವರ್ತಿತವಾಗುತ್ತಿದೆ.
ಮೋದಿಯುಗದಲ್ಲಿ ಅನೇಕ ಅನಾವಶ್ಯಕ ಕಾನೂನುಗಳು, ಔಪಚಾರಿಕತೆಗಳು ನಿಂತುಹೋಗಿ ವಾಸ್ತವಕ್ಕೆ ಉಪಯೋಗವಾಗುವ, ಪ್ರಾಯೋಗಿಕವಾಗಿ ಸಾಧುವೆನ್ನಿಸುವ, ದೇಶದ ಜನರ ಸಮಯವನ್ನೂ, ಸಂಪತ್ತನ್ನೂ ಉಳಿಸುವ ಹೊಸ ಪ್ರಯತ್ನಗಳನ್ನು ಮಾಡಲಾಗಿದೆ. ಭಾರತವನ್ನು ವಸಾಹತುಶಾಹಿ ಪ್ರಜ್ಞೆಯಿಂದ ಹೊರತರುವ ಬಹುದೊಡ್ಡ ಪ್ರಯತ್ನವನ್ನು ಮಾಡಲಾಗಿದೆ ಅಷ್ಟೇ ಅಲ್ಲ, ನೂತನ ಶಿಕ್ಷಾನೀತಿಯಂಥ ಕ್ರಾಂತಿಕಾರಕ ಹೆಜ್ಜೆಗಳ ಮೂಲಕ, ಶಿಕ್ಷಣದಲ್ಲಿ ಇರುವ ವಸಾಹತುಶಾಹಿಯ ಮೂಲ ಬೇರನ್ನು ಕೀಳಲು ಕೈ ಹಾಕಲಾಗಿದೆ. ನಮ್ಮತನದ ಬಗೆಗಿನ ಹೇವರಿಕೆಯ ಭಾವ ಹೋಗಿ, ನಮ್ಮತನದ ಬಗೆಗೆ ಹೆಚ್ಚು ಹೆಚ್ಚು ತಿಳಿದುಕೊಳ್ಳುವ ಪ್ರವೃತ್ತಿ ಬರುತ್ತಿದೆ. ಡೋಂಗಿ ಸೆಕ್ಯುಲರಿಸಮ್ಮು, ಡೋಂಗಿ ಸಮಾಜವಾದ, ಡೋಂಗಿ ಜಾತ್ಯತೀತತೆಗಳೆಲ್ಲದರ ಬಣ್ಣ ಮಾಸಿ ಹೋಗುತ್ತಿದೆ. ವೋಟ್ ಬ್ಯಾಂಕ್ ರಾಜಕಾರಣಕ್ಕೆ ಮರುಳಾಗುವ ಜನರ ಮಾನಸಿಕತೆ ನಿಧಾನಕ್ಕೆ ಬದಲಾಗಿ, ಪ್ರಾಮಾಣಿಕತೆಗೆ, ಕಾರ್ಯಕ್ಕೆ ಬೆಲೆ ಕೊಡಬೇಕೆಂಬ ಮನೋಭಾವ ಜನರಲ್ಲಿ ಹೆಚ್ಚುತ್ತಿದೆ.
ನಾವಿಂದು ಕೇಂದ್ರದ ಬಜೆಟ್ ಮೇಲೆ ಕಣ್ಣರಳಿಸಿ ನೋಡುವ ಅನಗತ್ಯ ಕೌತೂಹಲವನ್ನು ಕಡಿಮೆಗೊಳಿಸಿ, ಬಜೆಟ್ ಎಂಬುದು ಕೇವಲ ಸೂಚಕ, ಅದನ್ನು ಅನುಷ್ಠಾನಗೊಳಿಸುವುದೇ ಮುಖ್ಯವೆಂಬ ಪ್ರಜ್ಞೆಯನ್ನು ಮೋದಿಯುಗ ಜನರಲ್ಲಿ ತುಂಬುತ್ತಾ ಬರುತ್ತಿದೆ. ರೈಲ್ವೇ ಬಜೆಟ್ ಎಂಬ ಕೇವಲ ಘೋಷಣೆಗಳ ಭಾಷಣವನ್ನು ನಿಲ್ಲಿಸಿ, ದೇಶದ ಎಲ್ಲ ರೈಲ್ವೇ ಸ್ಟೇಷನ್ ಗಳೂ ಅತ್ಯಂತ ಸ್ವಚ್ಛವಾಗಿರುವಂತೆ ನೋಡಿಕೊಳ್ಳಲಾಗುತ್ತಿದೆ. ಭಾಷಣದ ಸಮಯವನ್ನು ಕೆಲಸಕ್ಕೆ ಕೊಡಲಾಗುತ್ತಿದೆ. ಇವತ್ತು ವಂದೇ ಭಾರತ್ ಎಕ್ಸ್ಪ್ರೆಸ್ ನಂಥ ಹೊಸ ಹೊಸ ಉಪಕ್ರಮಗಳಿಂದಾಗಿ ರೈಲ್ವೇ ಇಲಾಖೆಯಿಂದ ಯಾವೆಲ್ಲ ಕಾರ್ಯವಾಗಬೇಕಿತ್ತೋ ಅವೆಲ್ಲ ಆಗುತ್ತಿವೆ. ಪ್ರಯಾಣಿಕರ ಸುರಕ್ಷೆಗೆ ಮಹತ್ತ್ವ ಕೊಡಲಾಗಿದೆ. ಸ್ವಚ್ಛತೆಗೆ ಆದ್ಯತೆ ಕೊಡಲಾಗಿದೆ. ರೈಲುಗಳು ಇಂದು ಸಾರ್ವಜನಿಕ ಶೌಚಾಲಯಗಳಾಗಿ ಉಳಿದಿಲ್ಲ.
ಮೋದಿಯುಗದಲ್ಲಿ ಉಂಟಾದ ಮತ್ತೊಂದು ಬದಲಾವಣೆಯೆಂದರೆ ಸಮಯದ ಉಳಿತಾಯ. ಒಂದೆರಡು ತಾಸುಗಳಲ್ಲಿ ಬಜೆಟ್ ಭಾಷಣ ಮುಗಿಸುವ ಮೂಲಕ, ಬಜೆಟ್ ಅನ್ನು ಚುನಾವಣಾ ಪ್ರಣಾಳಿಕೆಯ ಭಾಷಣವಾಗಿಸುತ್ತಿದ್ದ ಈ ಹಿಂದಿನ ಸಂಪ್ರದಾಯವನ್ನು ನಿಲ್ಲಿಸಲಾಗಿದೆ. ವಾಯುಯಾನ ಇಂದಿಗೆ ಎಲ್ಲರಿಗೂ ಕೈಗೆ ನಿಲುಕುತ್ತಿದೆ. ಒಬ್ಬ ಸಾಮಾನ್ಯ ರೈತ ಕೂಡ ವಿಮಾನದಲ್ಲಿ ಇಂದು ಪ್ರಯಾಣಿಸಬಹುದಾಗಿದೆ. ಹೆಚ್ಚಿನ ಎಲ್ಲ ಉಪನಗರಗಳನ್ನೂ ಕೂಡಿಸುವಂತೆ ವಿಮಾನ ನಿಲ್ದಾಣಗಳ ನಿರ್ಮಾಣ, ವಿಮಾನಗಳ ಸಂಪರ್ಕ ಹೆಚ್ಚಿದೆ. ಈ ಮೂಲಕ ಮೂಲಭೂತಸೌಕರ್ಯಗಳಿಗೆ ಹೆಚ್ಚಿನ ಮಹತ್ತ್ವ ಕೊಡಲಾಗುತ್ತಿದೆ. ಇದರಿಂದ ದೇಶದ ಜನರ ಸಮಯ ಉಳಿಯುತ್ತಿದೆ. ಅಷ್ಟೇ ಅಲ್ಲ, ದೂರದೂರಿನ ಪ್ರಯಾಣ ಸುಲಭವಾಗಿದೆ. ಡಿಜಿಟಲ್ ಪೇಮೆಂಟ್ ಮೂಲಕ ನಾವಿಂದು ಏಟಿಎಂ ಎದುರು, ಬ್ಯಾಂಕಿನ ಎದುರು ಸಾಲುಗಟ್ಟಿ ನಿಲ್ಲುವುದನ್ನು ನಿಲ್ಲಿಸಿದ್ದೇವೆ. ಇದರಿಂದ ಅದೆಷ್ಟೋ ಸಮಯ ಉಳಿತಾಯವಾಗಿದೆ. ಚಿಲ್ಲರೆ ಸಮಸ್ಯೆಗಳಿಲ್ಲ. ಬುಕ್ ಮಾಡಿದ ಕೆಲವೇ ನಿಮಿಷಗಳಲ್ಲಿ ಗ್ಯಾಸ್ ಮನೆಗೆ ಬರುತ್ತಿದೆ. ಈ ಮೂಲಕ ಅಲ್ಲಿಯೂ ಸಮಯದ ಉಳಿತಾಯವಾಗುತ್ತಿದೆ.
ಸರ್ಕಾರದಿಂದ ಬರುವ ಯಾವುದೇ ಹಣವೂ ನೇರವಾಗಿ ಅಕೌಂಟಿಗೆ ತಲುಪುತ್ತಿದೆ. ಈ ಮೂಲಕ ಒಂದು ರೂಪಾಯಿಯಲ್ಲಿ ಹದಿನೈದು ಪೈಸೆ ಮಾತ್ರ ಬಡವರಿಗೆ ಸಲ್ಲುತ್ತದೆ ಎಂಬ ಭಾವನೆ ಈಗ ಹೊರಟುಹೋಗಿದೆ. ಸರ್ಕಾರೀ ಸೇವೆಗಳ ವೇಗ ಅಧಿಕವಾಗಿದೆ. ಡಿಜಿಟಲ್ ಇಂಡಿಯಾ ಮೂಲಕ, ವ್ಯಾಪಾರ-ವ್ಯವಹಾರ, ಶಿಕ್ಷಣ, ಪರಸ್ಪರ ಸಂಬಂಧ ಎಲ್ಲವೂ ವರ್ಧಿಸುತ್ತಿದೆ. ಜಗತ್ತಿನ ಅಭಿವೃದ್ಧಿ ಹೊಂದಿದ ದೇಶಗಳಿಗೆ ಸರಿಸಮನಾಗಿ ನಿಲ್ಲುತ್ತಿದ್ದೇವೆ. ಭಾರತೀಯರ ಬಗ್ಗೆ ಎಲ್ಲರಲ್ಲಿಯೂ ಗೌರವ ಭಾವನೆ ಬೆಳೆಯುತ್ತಿದೆ.
ಪುರಸ್ಕಾರಗಳು ಪ್ರಾಮಾಣಿಕ ಸಾಧಕರಿಗೆ ದೊರೆಯುತ್ತಿದೆ. ಕ್ರೀಡಾಕ್ಷೇತ್ರದಲ್ಲಿಉ ಅಪರಿಮಿತ ಬದಲಾವಣೆ ಉಂಟಾಗಿದೆ. ಯೋಗ್ಯರೇ ರಾಜ್ಯಸಭೆಗಳಂಥ ಗೌರವಪೂರ್ಣ ಸದಸ್ಯತ್ವವನ್ನು ಪಡೆಯುತ್ತಿದ್ದಾರೆ. ಪ್ರಾಮಾಣಿಕತೆಯಲ್ಲಿ, ಶಿಸ್ತಿನಲ್ಲಿ, ಸರಳತೆಯಲ್ಲಿ, ಪರಿಶ್ರಮದಲ್ಲಿ ಸ್ಪರ್ಧೆಯುಂಟಾಗುವ ವಾತಾವರಣ ನಿರ್ಮಾಣವಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ನಮ್ಮ ಆತ್ಮಹೀನತೆಯ ಭಾವ ಇಂದು ಕಮ್ಮಿಯಾಗಿದೆ. ಒಂದೇ ಒಂದು ಭಯೋತ್ಪಾದಕ ಕೃತ್ಯಗಳಿಲ್ಲದ, ಒಂದೇ ಒಂದು ಭ್ರಷ್ಟಾಚಾರವಿಲ್ಲದ ದೇಶವಾಗಿ ನಾವು ಪರಿವರ್ತಿತರಾಗಿದ್ದೇವೆ. ಬರೀ ಒಂಬತ್ತು ವರ್ಷಗಳ ಮೋದಿಯುಗ ಇಷ್ಟೆಲ್ಲ ಪರಿವರ್ತನೆಯನ್ನು ಉಂಟುಮಾಡಿದೆ. ಮೋದಿಯೆಂಬ ಶಕ್ತಿಯು ಭಾರತವನ್ನು ಅತಿ ಎತ್ತರಕ್ಕೆ ಕೊಂಡೊಯ್ಯುತ್ತಿದೆ.

ವಿ. ಸುಂಕಸಾಳ