ಮಣಿಪುರದ ಅಶಾಂತಿಯನ್ನು ಕಂಡು ಮೋದಿ ಸರ್ಕಾರ ಕೈಕಟ್ಟಿ ಕುಳಿತಿದೆಯೇ?

ಮೈತೇಯಿ ಪಂಗಡವನ್ನು ಪರಿಶಿಷ್ಟ ಜಾತಿಯ ಪಟ್ಟಿಗೆ ಸೇರಿಸಬೇಕೆಂಬ ಬೇಡಿಕೆ ಸುಮಾರು ಎರಡು ದಶಕಗಳಷ್ಟು ಹಳೆಯದು. ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಂ ವಿ ಮುರಳೀಧರನ್ ಅವರನ್ನೊಳಗೊಂಡ ಮಣಿಪುರದ ಹೈಕೋರ್ಟ್ ನ ಏಕಸದಸ್ಯ ಪೀಠವು ಏಪ್ರಿಲ್ 20, 2023 ರಂದು ಪರಿಶಿಷ್ಟ ಜಾತಿಯ ಪಟ್ಟಿಗೆ ಮೈತೇಯಿಗಳನ್ನು ಸೇರಿಸಲು ಬುಡಕಟ್ಟು ವ್ಯವಹಾರಗಳ ಸಚಿವಾಲಯಕ್ಕೆ ಶಿಫಾರಸು ಕಳುಹಿಸಲು ಸೂಚಿಸಿತು. ನ್ಯಾಯಾಂಗದ ಈ ಆದೇಶವನ್ನು ಕಂಡೊಡನೆ ಮಣಿಪುರದಲ್ಲಿ ತಮ್ಮ ಅಸ್ತಿತ್ವ ಕಳೆದುಕೊಳ್ಳುತ್ತಿದ್ದ ಅವಕಾಶವಾದಿ ಇವ್ಯಾಂಜಲಿಸ್ಟ್ ಗಳು, ಚೀನಾ, ಮಾಯನ್ಮಾರ್ ಪ್ರೇರಿತ ಭಯೋತ್ಪಾದಕರು, ಮಾದಕ ದ್ರವ್ಯ ಧಂಧೆಕೋರರು, ಅಕ್ರಮ ಅಫೀಮು ಬೆಳೆಗಾರರಿಗೆ ಮಣಿಪುರದಲ್ಲಿ ಜನಾಂಗೀಯ ದಂಗೆ ಎಬ್ಬಿಸಲು, ಹೈಕೋರ್ಟ್ ಆದೇಶದ ವಿರುದ್ಧದ ಹೋರಾಟಕ್ಕೆ ಬಲ ತುಂಬಿದರು. ಆಲ್ ಟ್ರೈಬಲ್ ಸ್ಟೂಡೆಂಟ್ಸ್ ಯೂನಿಯನ್ ಮಣಿಪುರ (ATSUM) ಶಾಂತಿಯ ಪ್ರತಿಭಟನೆ ಹೆಸರಿನಲ್ಲಿ ಕುಕಿಗಳನ್ನು ನಾಗಾಗಳನ್ನು ಬೀದಿಗಿಳಿಸಿತು.

ಶಾಂತಿಯ ಹೆಸರಲ್ಲಿ ಬೀದಿಗೆ ಬಂದ ದಂಗೆಕೋರರು ಮೇ 3ರಂದು ಹಿಂಸಾಚಾರದ ಕಿಡಿಯನ್ನು ಹೊತ್ತಿಸಿದರು ಅಂದಿನಿಂದ ಇಂದಿನವರೆಗೂ ಅಲ್ಲಿಯ ಗಲಭೆಗಳನ್ನು ವರ್ಣರಂಜಿತವಾಗಿ ತೋರಿಸುತ್ತಾ ಜಾಗತಿಕ ಸುದ್ದಿಯನ್ನಾಗಿ ಮಾಡಿ ದೇಶದ ಜನರ ಭಾವನೆಗಳನ್ನು ಕೆರಳಿಸಲಾಗುತ್ತಿದೆ. ಮಣಿಪುರ ಹೊತ್ತಿ ಉರಿಯುತ್ತಿದ್ದರೂ ಮೋದಿ ಸುಮ್ಮನಿದ್ದಾರೆ, ಮೋದಿ ಚುನಾವಣಾ ಪ್ರಚಾರದಲ್ಲಿ ಮುಳುಗಿದ್ದಾರೆ, ಮೋದಿ ಏನೂ ಮಾಡುತ್ತಿಲ್ಲ ಎಂದು ದೇಶದ ಜನರನ್ನು ನಂಬಿಸಲು ಪ್ರಯತ್ನ ಮಾಡಿದರು ಮತ್ತು ಈಗಲೂ ಮಾಡುತ್ತಿದ್ದಾರೆ. ಹಾಗಾದರೆ ಮೋದಿ ಏನು ಮಾಡಿಲಿಲ್ಲವೇ?

ಮಣಿಪುರದಲ್ಲಿ ದಂಗೆ ಆರಂಭವಾದ ದಿನದಂದೇ ಕೇಂದ್ರಸರ್ಕಾರ ಸೇನೆಯ 55 ತುಕಡಿಗಳನ್ನು ನಿಯೋಜಿಸಿತು. ಭಾರತೀಯ ಸೇನೆ ಆ ರಾತ್ರಿಯೇ ಸುಮಾರು 9,000 ಜನರನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿ, ಪರಿಸ್ಥಿತಿಯನ್ನು ಸಹಜ ಸ್ಥಿತಿಗೆ ತರಲು ಅವಿರತ ಪ್ರಯತ್ನ ನಡೆಸಿತು. ಈವರೆಗೆ ಅಸ್ಸಾಂ ರೈಫಲ್ಸ್, ಸುಮಾರು 50,000 ಕ್ಕೂ ಹೆಚ್ಚು ಜನರನ್ನು ರಕ್ಷಿಸಿ ವಸತಿ, ಆಹಾರ ಮತ್ತು ಔಷಧಿಗಳನ್ನು ಕಲ್ಪಿಸಿದೆ. ಗಾಯಗೊಂಡವರು ಮತ್ತು ಸ್ಥಳಾಂತರಿಸಲ್ಪಟ್ಟವರ ಯೋಗಕ್ಷೇಮಕ್ಕಾಗಿ, ಸರ್ಜನ್ ಗಳನ್ನು ಮನೋವೈದ್ಯ, ಪ್ರಸೂತಿ ವೈದ್ಯರು, ತುರ್ತು ಆರೈಕೆಗಾಗಿ AIIMS-ಕಲ್ಯಾಣಿ, AIIMS-ಗುವಾಹಟಿ ಮತ್ತು NEIGRIHMS-ಶಿಲ್ಲಾಂಗ್ ನ ನುರಿತ ವೈದ್ಯರ ತಂಡವನ್ನು ರವಾನಿಸಿದೆ. ಇದರೊಟ್ಟಿಗೆ ರಾಜ್ಯದ ಆರೋಗ್ಯ ಸೌಲಭ್ಯಗಳಿಗೆ ಹೆಚ್ಚುವರಿ ಸಹಾಯವನ್ನು ನೀಡಿ ಸಾವು-ನೋವಿನ ಪ್ರಮಾಣ ಕಡಿಮೆ ಆಗುವಂತೆ ಮುಂಜಾಗ್ರತೆ ತೆಗೆದುಕೊಂಡಿದೆ. ಗಲಭೆಗೆ ಸಿಕ್ಕು ಅನಾಥವಾಗಿದ್ದ ಐವತ್ತು ಮುಗ್ಧ ಮಕ್ಕಳನ್ನು ರಕ್ಷಿಸಿದೆ.

ಅಕ್ರಮ ಶಸ್ತ್ರಾಸ್ತ್ರಗಳೊಂದಿಗೆ ತಿರುಗಾಡುವ ಜನರಿಂದ ರೈತರನ್ನು ರಕ್ಷಿಸಲು, ಕೃಷಿ ಚಟುವಟಿಕೆಗಳು ನಿರ್ಭೀತವಾಗಿ ಸಾಗಲು ಹೆಚ್ಚುವರಿ 2000 ಯೋಧರನ್ನು ರಕ್ಷಣೆಗೆ ನಿಯೋಜಿಸಿದ್ದು ಇದೇ ಮೋದಿಯವರ ಸರ್ಕಾರ. ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ತೊಂದರೆಯಾಗದಂತೆ ರಕ್ಷಿಸಲು ಅಸ್ಸಾಂ ರೈಫಲ್ಸ್ ಬೆಂಗಾವಲಿಗೆ ನಿಂತಿದೆ, NH-37 ಮೂಲಕ ಇಂಫಾಲ್ ಕಣಿವೆಗೆ ಔಷಧಗಳು, ತೈಲದಂತಹ ಅಗತ್ಯ ವಸ್ತುಗಳನ್ನು ಸಾಗಿಸುವ 9000 ಟ್ರಕ್ಕುಗಳನ್ನು ಯಾವುದೇ ಸಮಸ್ಯೆ ಇಲ್ಲದೆ ಸಂಚಾರಿಸುವಂತೆ ನೋಡಿಕೊಂಡಿದೆ.

ದಂಗೆಯನ್ನು ಶಮನಗೊಳಿಸಲು ಗೃಹಮಂತ್ರಿ ಅಮಿತ್ ಶಾ ಖುದ್ದು ಅಖಾಡಕ್ಕೆ ಇಳಿಯುತ್ತಿದ್ದಂತೆ ಇತ್ತ ರಕ್ಷಣಾ ಪಡೆಗಳು ದಂಗೆಕೋರ ಗುಂಪುಗಳ ಕೈಲಿದ್ದ AK 47, ಸ್ನೈಪರ್, ಮಾರ್ಟರ್ ಶೆಲ್ ಸೇರಿದಂತೆ ವಿದೇಶಿ ನಿರ್ಮಿತ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಹಾಗೂ ಪೋಲಿಸ್ ಠಾಣೆಯಿಂದ ಕಳುವು ಮಾಡಿದ್ದ ಶಸ್ತ್ರಾಸ್ತ್ರಗಳೂ ಸೇರಿದಂತೆ 1600ಕ್ಕೂ ಹೆಚ್ಚು ಮಾರಕ ಆಯುಧಗಳನ್ನು ವಶಪಡಿಸಿಕೊಂಡಿತು.

ಗೃಹಮಂತ್ರಿಗಳು ಮೇಲಿಂದ ಮೇಲೆ ಅಧಿಕಾರಿಗಳ ಸಭೆ ಮಾಡಿ ಮಾಹಿತಿ ಪಡೆಯುತ್ತ ದಂಗೆಯ ಶಮನಕ್ಕೆ ಯೋಜನೆ ರೂಪಿಸಿ ಹಿಲ್ ಟ್ರೈಬಲ್ ಕೌನ್ಸಿಲ್, ಕುಕಿ ವಿದ್ಯಾರ್ಥಿ ಸಂಘಟನೆ, ಕುಕಿ ಮುಖ್ಯಸ್ಥರ ಸಂಘ, ತಮಿಳು ಸಂಗಮ್, ಗೂರ್ಖಾ ಸಮಾಜ ಮತ್ತು ಮಣಿಪುರಿ ಮುಸ್ಲಿಂ ಮಂಡಳಿಯ ನಿಯೋಗವನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಅಧಿಕಾರಿಗಳು ಮತ್ತು ವಿವಿಧ ಸಮುದಾಯಗಳ ಮುಖಂಡರೊಂದಿಗೆ ಸಭೆ ನಡೆಸಿ ಸಮನ್ವಯ ಸಾಧಿಸುವ ಪ್ರಯತ್ನ ಮಾಡಿದ್ದಾರೆ.

ಹಿಂಸಾಚಾರದಲ್ಲಿ ಭಾಗಿಯಾಗಿದ್ದ 13000 ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ. ಮೇ 4 ರಂದು ತೌಬಲ್ ಜಿಲ್ಲೆಯಲ್ಲಿ ಇಬ್ಬರು ಮಹಿಳೆಯರನ್ನು ಬೆತ್ತಲೆ ಮೆರವಣಿಗೆ ಮಾಡಿ ಲೈಂಗಿಕ ದೌರ್ಜನ್ಯ ಎಸಗಿದ್ದ ಏಳು ಜನ ಕ್ರೂರಿಗಳನ್ನು ಬಂಧಿಸಿದ್ದಾರೆ, ಕುಕಿ ಮತ್ತು ಮೈತೇಯಿಗಳ 290 ಅಡಗುತಾಣಗಳನ್ನು ನಾಶಪಡಿಸಿ ಸಾವಿರಾರು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದೆ.

ಹಿಂಸಾಚಾರದ ಸಮಯದಲ್ಲಿ ಮನೆ-ಮಠ ಕಳೆದುಕೊಂಡವರಿಗೆ ಹೊಸದಾದ ಪಕ್ಕಾ ಮನೆಗಳನ್ನು ನಿರ್ಮಿಸುವವರೆಗೆ ತಾತ್ಕಾಲಿಕ ವಸತಿಗಾಗಿ ಸರ್ಕಾರ 3000-4000 ರೆಡೆಮೇಡ್ ಮನೆಗಳನ್ನು ನಿರ್ಮಿಸಿಕೊಟ್ಟಿದೆ.

ದಂಗೆ ಆರಂಭವಾದಾಗಿನಿಂದ ಇಂದಿನವರೆಗೂ ಪ್ರಧಾನಿ ಮೋದಿಯವರು ನಿರಂತರ ಮಾಹಿತಿ ಪಡೆಯುತ್ತ, ಕಾನೂನು ಮತ್ತು ಸುವ್ಯವಸ್ಥೆಯ ಪರಿಸ್ಥಿತಿಯಿಂದ ಉಂಟಾದ ಅಗತ್ಯ ವಸ್ತುಗಳು, ಧಾನ್ಯ ಮತ್ತು ಇಂಧನದ ಕೊರತೆಯನ್ನು ನೀಗಿಸಲು ಮಾಡಬೇಕಾದ ಎಲ್ಲ ವ್ಯವಸ್ಥೆಯನ್ನು ಮಾಡಿದ್ದಾರೆ. ಭಾರತ ಸರ್ಕಾರ ಎಲ್ಲ ಟೀಕೆಗಳ ನಡುವೆಯೇ ಮಣಿಪುರ ಮತ್ತೆ ಸಹಜ ಸ್ಥಿತಿಗೆ ಬರುವಂತೆ ಪ್ರಯತ್ನಿಸುತ್ತಿದೆ. ಇದೆಲ್ಲದರ ಪರಿಣಾಮವಾಗಿ ಈಗ ರೈಲು ಸಂಚಾರ ಆರಂಭಗೊಂಡಿದೆ. 4,617 ಶಾಲೆಗಳ ಪೈಕಿ 4521 ಶಾಲೆಗಳು ಆರಂಭವಾಗಿವೆ. ಉಳಿದ 96 ಶಾಲಾ ಕಟ್ಟಡಗಳು ಪರಿಹಾರ ಕ್ರಮದ ಉದ್ದೇಶಕ್ಕೆ ಬಳಕೆಯಲ್ಲಿವೆ.

ಸರ್ವಪಕ್ಷಗಳ ಸಭೆ ಕರೆದ ಗೃಹಮಂತ್ರಿ ಅಮಿತ್ ಶಾ ಮಣಿಪುರದಲ್ಲಿ ತೆಗೆದುಕೊಳ್ಳಲಾಗುತ್ತಿರುವ ಎಲ್ಲಾ ಕ್ರಮಗಳ ಬಗ್ಗೆ ವಿವರಿಸಿ ಬಂಧನಗಳು, FIR ಗಳ ಸಂಖ್ಯೆ ಇತ್ಯಾದಿಗಳ ಬಗ್ಗೆ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ.

ಈ ಎಲ್ಲದರ ನಡುವೆ, ರಣಹದ್ದಿನಂತೆ ದಂಗೆಯನ್ನು ರಾಜಕೀಯ ವಸ್ತುವಾಗಿ ಬಳಸಿಕೊಂಡು ದಂಗೆ ಜೀವಂತವಾಗಿಡಲು ಯತ್ನಿಸುತ್ತಿದ್ದ ಕಾಂಗ್ರೆಸ್ ನ ನಡೆಯನ್ನು ಖಂಡಿಸಿ, ಮಣಿಪುರ ಪೇಟ್ರಿಯಾಟಿಕ್ ಪಾರ್ಟಿಯ ಪ್ರಧಾನ ಕಾರ್ಯದರ್ಶಿ ‘ನವೋರೆಮ್ ಮೊಹೆನ್’, ಈಶಾನ್ಯ ಗುಡ್ಡಗಾಡು ರಾಜ್ಯದಲ್ಲಿನ ಪ್ರಸ್ತುತ ಬಿಕ್ಕಟ್ಟಿಗೆ ಕಾಂಗ್ರೆಸ್ ಪಕ್ಷವೇ ಮೂಲ ಕಾರಣ ಎಂದು ರಾಹುಲ್ ಗಾಂಧಿಗೆ ಬಹಿರಂಗ ಪತ್ರಬರೆದು ಕಾಂಗ್ರೆಸ್‌ನ ಬಣ್ಣ ಬಯಲು ಮಾಡಿದ್ದಾರೆ.