ದೇಶದ ಆರ್ಥಿಕತೆಯನ್ನು‌ ಹದಗೆಡಿಸುವ ಉಚಿತ ಕೊಡುಗೆಗಳು!

ಆರ್ಥಿಕತೆ ಅನ್ನುವುದೊಂದು ಚಕ್ರೀಯ ಚಲನೆ. ಸರ್ಕಾರ ತೆರಿಗೆ ಇನ್ನಿತರೆ ಮೂಲಗಳಿಂದ ಸಂಗ್ರಹಿಸಿದ ದುಡ್ಡನ್ನು ವಾಪಾಸು ಸಾರ್ವಜನಿಕರ ಉಪಯೋಗಕ್ಕೆ ಖರ್ಚು ಮಾಡುತ್ತದೆ. ಇದರಲ್ಲಿ ಅಭಿವೃದ್ದಿ ಕಾರ್ಯಗಳು, ಮೂಲಭೂತ ಸೌಕರ್ಯಗಳ ಅಭಿವೃದ್ದಿಪಡಿಸುವಿಕೆ ಹೀಗೆ ಹತ್ತಾರು ಕೆಲಸಗಳು ಒಳಗೊಳ್ಳುತ್ತವೆ. ರಕ್ಷಣಾ ವಿಭಾಗದಂಥ ಕೆಲವು ಇಲಾಖೆಗಳಿಗೆ ಸರ್ಕಾರ ಯಾವುದೇ ಆದಾಯವನ್ನು ನಿರೀಕ್ಷಿಸದೇ ಖರ್ಚು ಮಾಡಬೇಕಾಗುತ್ತದೆ. ಇದರ ಜೊತೆಗೆ ದೇಶದ ದೀನ-ದಲಿತರನ್ನು ಸಮಾಜದ ಮುಖ್ಯವಾಹಿನಿ ಸೇರಿಸಲೋಸುಗ ಕೆಲವೊಂದು ರಿಯಾಯಿತಿಗಳನ್ನು ಒದಗಿಸುವುದು ವಾಡಿಕೆ. ಈ ಎಲ್ಲವನ್ನೂ ಆಧರಿಸಿ ಸರ್ಕಾರವೊಂದು ಬಜೆಟ್ ಮಂಡನೆ ಮಾಡುತ್ತೆ. ಯಾವಾಗ ಖರ್ಚು ಆದಾಯಕ್ಕಿಂತ ಜಾಸ್ತಿಯಾಗುತ್ತೋ ಆಗ ಅದೊಂದು ಡಿಫಿಸಿಟ್ ಬಜೆಟ್ ಅನಿಸಿಕೊಳ್ಳುತ್ತದೆ. ದೇಶದ ಆರ್ಥಿಕತೆ ಕುಗ್ಗುವುದು ಇದರಿಂದಲೇ ಎಂಬುದು ಸಾಮಾನ್ಯ ಜ್ಞಾನ.

ಪಕ್ಕದ ಶ್ರೀಲಂಕಾವನ್ನೇ ಉದಾಹರಣೆಯಾಗಿ ತೆಗೆದುಕೊಂಡರೇ ಅಲ್ಲಿನ ಸರ್ಕಾರ ಉಚಿತ ವಿತರಣೆ, ತೆರಿಗೆಯಲ್ಲಿ ಇಳಿಕೆಯ ಜೊತೆಗೆ ಪ್ರವಾಸೋದ್ಯಮ ಮತ್ತು ಕೃಷಿಯ ಹೊರತಾದ ಆದಾಯ ಮೂಲಗಳನ್ನು ಸೃಷ್ಟಿಸಿಕೊಳ್ಳದ ಕಾರಣಕ್ಕೆ ಆರ್ಥಿಕತೆ ಅಧೋಗತಿ ತಲುಪಿತು. ವೆನಿಜುವೆಲಾದ ಸ್ಥಿತಿಗೆ ಕಾರಣವೂ ಇದೆ.‌ ಒಂದು ದೇಶಕ್ಕೆ ಹಿರಿದಾದ ಉದ್ದೇಶವಿಲ್ಲದ ಹೊರತು ಅಲ್ಲಿನ ನಾಗರಿಕರಿಗೆ ಅಭಿವೃದ್ದಿಯ ಪರಿಕಲ್ಪನೆ ಬರುವುದೇ ಇಲ್ಲ. ಅಂಥ ನಾಗರಿಕರು ಸರ್ಕಾರವೆಂದರೆ ನಮಗೆ ಹೊಟ್ಟೆಹೊರೆಯಲಿರುವ ಸಂಸ್ಥೆ ಎಂದುಕೊಳ್ಳುತ್ತಾರಷ್ಟೆ. ಪಾಕಿಸ್ತಾನವೂ ಕೂಡಾ ಸರ್ಕಾರವೊಂದು ಮಹತ್ವಾಕಾಂಕ್ಷೆಯನ್ನು ಜನರಲ್ಲಿ ಬಿತ್ತಲಾರದ ಕಾರಣ ಇವತ್ತು ಅಕ್ಕಿ, ಗೋಧಿಗಾಗಿ ಜಗಳಾಡುವ ಪರಿಸ್ಥಿತಿ ಬಂದಿದೆ. ಇಷ್ಟು ದಿನ ಮತಾಂಧತೆಯ ಅಡಿಪಾಯದಲ್ಲಿ ಕಾಶ್ಮೀರವನ್ನು ನಮ್ಮ ತೆಕ್ಕೆಗೆ ತೆಗೆದುಕೊಳ್ಳುತ್ತೇವೆ ಅನ್ನುವ ಒಂದು ಉದ್ದೇಶದ ಹೊರತು ಮತ್ತಾವುದೇ ಉದ್ದೇಶದಿಂದ ಆ ದೇಶ ಬೆಳೆದು ಬರಲಿಲ್ಲ. ಅದಕ್ಕಾಗಿಯೇ ನಮ್ಮ ಜೊತೆಗೆ ಸ್ವತಂತ್ರಗೊಂಡರೂ ಅಭಿವೃದ್ಧಿಯನ್ನೋದು ಮರೀಚಿಕೆಯಾಯ್ತು.

ಬೇರೆ ದೇಶಗಳ ವಿಚಾರ ಬಿಡಿ ನಮ್ಮದೇ ದೇಶದ ಐದಾರು ರಾಜ್ಯಗಳನ್ನು ರೆಡ್ ಝೋನಿಗೆ ಆರ್ಥಿಕ ತಜ್ಞರು ಹಾಕಿದ್ದಾರೆ. ಆಂಧ್ರ ಪ್ರದೇಶ, ಪಕ್ಕದ ಕೇರಳ, ದೆಹಲಿ, ಪಂಜಾಬ್, ಪಶ್ಚಿಮ ಬಂಗಾಳ ಈ ಐದು ರಾಜ್ಯಗಳು ಆರ್ಥಿಕವಾಗಿ ಅಧೋಗತಿಯನ್ನು ಕಾಣುತ್ತಿವೆ ಅಲ್ಲದೇ ಅಲ್ಲಿನ ಜನರ ಮನಸ್ಥಿತಿ ಸರ್ಕಾರವೆಂದರೆ ಉಚಿತವಾಗಿ ಎಲ್ಲವನ್ನೂ ಕೊಡುವ ಎಜೆನ್ಸಿಯಂತಾಗಿದೆ‌.

ಈ ಹಾದಿಯಲ್ಲಿ ನಮ್ಮ‌ ಕರ್ನಾಟಕವೂ ಸಾಗುತ್ತಿರುವುದು ಆತಂಕಕಾರಿ ವಿಷಯ. ಈ ವಿಚಾರವನ್ನು ಮೋದಿ ಬೆಂಬಲಿಗರು ಹೇಳುತ್ತಿಲ್ಲ.‌ ಇತ್ತೀಚೆಗೆ ಸ್ವತಃ ಉಪಮುಖ್ಯಮಂತ್ರಿಗಳಾದ ಡಿ.‌ಕೆ. ಶಿವಕುಮಾರ್ ಅವರೇ “ಸರ್ಕಾರದ ಬಳಿ ಅಭಿವೃದ್ಧಿ ಕಾರ್ಯಕ್ಕೆ ದುಡ್ಡಿಲ್ಲ, ಎಲ್ಲವೂ ಗ್ಯಾರಂಟಿಗೆ ಹೋಗುತ್ತಿದೆ” ಅಂದಿದ್ದಾರೆ. ಅದಲ್ಲದೇ ಪರಿಶಿಷ್ಟರಿಗಾಗಿ ಮೀಸಲಿದ್ದ 11000 ಕೋಟಿ ರೂಪಾಯಿಗಳನ್ನು ಸರ್ಕಾರ ಉಚಿತ ವಿತರಣೆಗಾಗಿ ಬಳಸುತ್ತಿರೋದು ಯಾವ ಸಾಮಾಜಿಕ ನ್ಯಾಯದಡಿಯಲ್ಲಿ ಬರುತ್ತದೋ ದೇವರೇ ಬಲ್ಲ.

ಹಾಗೆಂದು ಸಂಪನ್ಮೂಲಗಳ ಉತ್ಪಾದನೆ ಜಾಸ್ತಿಯಾಗುತ್ತದೆಯೇ? ಅಕ್ಕಿ ನಮ್ಮ ರಾಜ್ಯದಲ್ಲಿ ಎಷ್ಟು ಬೆಳೆಯಲು ಸಾಧ್ಯವೋ ಅಷ್ಟನ್ನೇ ಬೆಳೆಯೋಕೆ ಆಗೋದು. ಅದರಲ್ಲಿ ಅಗತ್ಯ ವ್ಯಕ್ತಿಗಳಿಗೆ ತಲುಪಿಸುವಷ್ಟು ತಲುಪಿಸಿ ಮಿಕ್ಕದ್ದನ್ನು ಮಾರುಕಟ್ಟೆಗೆ ಬಿಟ್ಟರೇ ಹೊರ ರಾಜ್ಯಗಳಿಗೆ, ರಫ್ತು ಮಾಡಿದರೆ ಸರ್ಕಾರದ ಆದಾಯ ಜನಜೀವನ ಉತ್ತಮಿಕೆಯತ್ತ ಸಾಗುತ್ತದೆ. ಅದರ ಬದಲು ಒಬ್ಬೊಬ್ಬ ವ್ಯಕ್ತಿಗೆ ಹತ್ತತ್ತು ಕೆಜಿ ಅಕ್ಕಿಯನ್ನು ಉಚಿತವಾಗಿ ಕೊಟ್ಟರೇ ಮುಂದಿನ ದಿನಗಳಲ್ಲಿ ಅಕ್ಕಿಯ ದಾಸ್ತಾನು ಖಾಲಿಯಾಗಿ ಉಚಿತ ಪಡೆಯುವವರಿಗೂ ದುಡ್ಡು ಕೊಟ್ಟು ಪಡೆಯುವವರಿಗೂ ಅಕ್ಕಿ ಸಿಗುವುದು ಅನುಮಾನ. ರಾಜ್ಯ ಸರ್ಕಾರದವರು ಕೇಂದ್ರದವರನ್ನು ಹೊಣೆಯಾಗಿಸಿದರೂ ಕೇಂದ್ರದವರು ರಾಜ್ಯದವರನ್ನು ಹೊಣೆಯಾಗಿಸಿದರೂ ಕೊನೆಗೆ ಬಲಿಪಶುವಾಗೋದು ಸಾರ್ವಜನಿಕನೇ. ಇಷ್ಟೆಲ್ಲಾ ಉಚಿತಗಳಿಂದಾದ ದುಂದನ್ನು ಸರಿದೂಗಿಸಲು ಮತ್ತೆ ಬೆಲೆ ಏರಿಕೆಯ ಬರೆ ಎಳೆಯೋದು ಅದೇ ಸಾರ್ವಜನಿಕರ ಮೇಲೆ ಈಗಾಗಲೇ ರಾಜ್ಯದ ಜನತೆಗೆ ಆ ಬಿಸಿ ತಟ್ಟಿದೆ.

ಈ ಹಿಂದೆ ಕಾಂಗ್ರೆಸ್ ಸರ್ಕಾರವಿದ್ದಾಗ ದೇಶದ ಚಿನ್ನವನ್ನು ಅಡವಿಟ್ಟು ಡಾಲರ್ ತರಲು ಹೆಣಗಾಡಿದ್ದರು. UPA 2ನಲ್ಲಿ ರಕ್ಷಣಾ ಮಂತ್ರಿಗಳೇ ಶಸ್ತ್ರಾಸ್ತ್ರ ಖರೀದಿಗೆ ದುಡ್ಡಿಲ್ಲ ಎಂದು ಹೇಳಿದ್ದರು. ಅಂತರ್‌ರಾಷ್ಟ್ರೀಯ ಸಂಸ್ಥೆಗಳು ಭಾರತದ ಆರ್ಥಿಕತೆಯನ್ನು ಯಾವುದೇ ಕ್ಷಣದಲ್ಲಿ ಅಳಿದುಹೋಗಬಹುದಾದ ಐದು ಆರ್ಥಿಕತೆಯಲ್ಲಿ ಒಂದು ಅಂತ ಪಟ್ಟಿಗೆ ಸೇರಿಸಿತ್ತು. ಇವತ್ತು ಕರೋನಾದ ನಡುವೆ ಉಳಿದ ದೇಶದ ಆರ್ಥಿಕತೆ ತತ್ತರಿಸುವ ಕಾಲಘಟ್ಟದಲ್ಲಿ ಭಾರತದ ಆರ್ಥಿಕತೆ ವಿಶ್ವದ ಅಗ್ರಮಾನ್ಯ ಐದು ಆರ್ಥಿಕತೆಯಲ್ಲಿ ಒಂದಾಗಿದೆ. ಮತ್ತೊಮ್ಮೆ ಕಾಂಗ್ರೆಸ್ಸು ಗದ್ದುಗೆಗೇರಿದರೆ ಅವೈಜ್ಞಾನಿಕ ಆರ್ಥಿಕತೆಯ ಪರಿಣಾಮ ಆರ್ಥಿಕತೆ ಮತ್ತೊಮ್ಮೆ ಅಧಃಪತನದ ಹಾದಿ ಹಿಡಿದೀತು.