ಹಿಂದೂ ಪುನರುತ್ಥಾನದಲ್ಲಿ ಮೋದಿಜಿಯವರ ಪಾತ್ರ

ದೇಶ, ಅದಕ್ಕೊಂದೇ ಧರ್ಮ, ಅದನ್ನಾಳಲು ಒಂದು ಸಂವಿಧಾನ ಹಾಗೂ ಕಾನೂನು, ಜೊತೆಗೆ ಆ ದೇಶದಲ್ಲಿ ಒಂದೇ ದೇವರು, ಧರ್ಮವನ್ನು ಅನುಸರಿಸುವ ಜನ. ಇಷ್ಟೇ ಆಗಿದ್ದರೆ ಆ ದೇಶ ಹೇಗಿರುತ್ತದೆ? ಬಹುಶಃ ಜಪಾನ್ ಥರ ಇರುತ್ತದೆ. ಆದರೆ ಸಾವಿರಾರು ವರ್ಷಗಳ ಘಾಸಿಗೊಂಡ ಇತಿಹಾಸ, ವಿದೇಶಿಗರ ಆಕ್ರಮಣ, ವಿದೇಶೀ ಆಡಳಿತ, ಸ್ವಾತಂತ್ರ್ಯ ಬಂದರೂ ಮರೆಯಾದ ಸ್ವಂತಿಕೆ, ಹತ್ತಾರು ಧರ್ಮ, ಸಮುದಾಯಗಳು ಇವೆಲ್ಲ ಸೇರಿದರೆ ಆ ದೇಶ ಭಾರತದಂತಿರುತ್ತದೆ. ಕಳೆದ 65 ವರ್ಷಗಳ ಕಾಲ ಭಾರತದ ಧಾರ್ಮಿಕ ನಂಬಿಕೆಗಳು, ಜನರ ಧರ್ಮದ‌ ಅರಿವು ಹಾಗೂ ಧಾರ್ಮಿಕ ಪ್ರಜ್ಞೆಯನ್ನು ಗಣನೆಗೆ ತೆಗೆದುಕೊಂಡರೆ ಹಿಂದೂ ಎನಿಸಿಕೊಂಡವ ತನ್ನದೇ ದೇಶದಲ್ಲಿ ಸ್ವಾತಂತ್ರ್ಯ ಬಂದರೂ ಪರಕೀಯನಂತೆ ಬದುಕಿದ್ದ. ತನ್ನ ಸನಾತನ ಧರ್ಮ, ಪರಂಪರೆ, ಜೀವನಪದ್ಧತಿಯನ್ನು ಮರೆತಿದ್ದ. ತನ್ನ ದೇಶದಲ್ಲಿ ತನ್ನದೇ ಧರ್ಮದಿಂದ ತನ್ನ ಗುರುತಿಸಿಕೊಳ್ಳಲು ಹಿಂಜರಿಯುತ್ತಿದ್ದ. ಒಂದು ದೇಶದ ಪ್ರಜೆಗಳಿಗೆ ತಮ್ಮ ಧರ್ಮವನ್ನು ಬಹಿರಂಗವಾಗಿ ಒಪ್ಪಿಕೊಳ್ಳಲು ಹಿಂಜರಿಕೆಯಿದ್ದರೆ ಬಹುಶಃ ಅದು ಭಾರತದಲ್ಲಿ ಮಾತ್ರ. ವಿದೇಶಿ‌ ಆಕ್ರಮಣಕಾರರು ನಮ್ಮ ನಂಬಿಕೆ ಹಾಗೂ ಭರವಸೆಯ ತಾಣವಾಗಿದ್ದ ದೇವಾಲಯಗಳನ್ನು ನಾಶಪಡಿಸಿದಾಗ ದೇಶದ ಆತ್ಮವೇ ಘಾಸಿಗೊಂಡಿತ್ತು. ಅದ್ಯಾವ ಪರಿಗೆ ಎಂದರೆ ಹಿಂದೂ ತನ್ನ ತನವನ್ನೇ ಮರೆಯುವಷ್ಟು.

ನಮ್ಮ ದೇಶದಲ್ಲಿರುವುದು ಹಿಂದೂ ಕಾನೂನು. ನಮ್ಮ ದೇಶದ ಪ್ರಜೆಗಳನ್ನು ಗುರುತಿಸುವುದು ಹಿಂದೂ ಎಂದು. ನಮ್ಮ ದೇಶದ ಹೆಚ್ಚಿನ ಜನರು ಅನುಸರಿಸುವುದು ಹಿಂದೂಧರ್ಮವನ್ನು. ಹೀಗಿದ್ದರೂ ಜಾತ್ಯತೀತ ಸಂವಿಧಾನ ಅನುಸರಿಸುತ್ತಿದ್ದೇವೆ ಎಂಬ ಕಾರಣಕ್ಕೆ ಹಿಂದೂ ತನ್ನ ಅಸ್ತಿತ್ವವನ್ನೇ ಮರೆತಂತೆ ಇಷ್ಟು ವರ್ಷ ಬದುಕಿದ್ದ. ಇಲ್ಲಿ ಸಂವಿಧಾನವಷ್ಟೇ ಕಾರಣವಲ್ಲ. ಪ್ರಭುತ್ವದಲ್ಲಿದ್ದ ಸರ್ಕಾರ ಹಾಗೂ ಅದರ ನಾಯಕರ ನಡೆ ಕೂಡ ಕಾರಣವಾಗಿತ್ತು.

2014 ರಲ್ಲಿ ನರೇಂದ್ರಮೋದಿ ಅವರು ಪ್ರಧಾನಿಯಾದ ನಂತರ ಸನ್ನಿವೇಶಗಳು ಬದಲಾಗುತ್ತ ಬಂತು. ಯಾವಾಗ ದೇಶದ ಪ್ರಧಾನಿಯೇ ಗಂಗಾರತಿಯಲ್ಲಿ ಭಾಗವಹಿಸುತ್ತಾನೊ, ದೇವಸ್ಥಾನಗಳಿಗೆ ಭೇಟಿ ನೀಡುತ್ತಾನೊ, ದೇವಾಲಯದ ಪುನರ್ ನಿರ್ಮಾಣಕ್ಕೆ ನಿಲ್ಲುತ್ತಾನೊ, ದೇಶದ ಜನರಲ್ಲಿ ಹೊಸ ಹುರುಪು, ಭರವಸೆಗಳು ಮೂಡತೊಡಗಿದವು. ತಮ್ಮ ಅಸ್ತಿತ್ವವನ್ನು ಪುನಃ ನೆನಪಿಸಿಕೊಳ್ಳತೊಡಗಿದರು. ಇತಿಹಾಸದಲ್ಲಿ ತಮಗಾದ ಅನ್ಯಾಯದ ಕುರಿತು ಬಾಯಿ ಬಿಡತೊಡಗಿದರು. ಸ್ವಾತಂತ್ರ್ಯಾ ನಂತರ ತಮ್ಮನ್ನು ಸರ್ಕಾರಗಳು ನಡೆಸಿಕೊಂಡ ರೀತಿಯ ಬಗ್ಗೆ ಆಕ್ರೋಶ ವ್ಯಕ್ತಪಡಿಸತೊಡಗಿದರು. ತಮ್ಮ ಧಾರ್ಮಿಕ ಸ್ಥಳಗಳ ಸ್ಥಿತಿಗತಿಗಳ ಕುರಿತು ಕಳಕಳಿ ತೋರತೊಡಗಿದರು. ಶತಮಾನಗಳ ವಿದೇಶಿ ಆಡಳಿತದಿಂದ ತತ್ತರಿಸಿದ್ದ ಹಿಂದುವಿಗೆ ಮೋದಿಯವರ ಆಡಳಿತದಲ್ಲಿ ಕೊನೆಗೂ ತನಗೆ ದನಿಯಿದೆ ಎಂಬ ಅರಿವು ಮೂಡಿದಂತಿದೆ.

ಲಾಲ್ ಕೃಷ್ಣ ಅಡ್ವಾನಿ ಅವರ ನೇತೃತ್ವದಲ್ಲಿ ರಾಮಮಮಂದಿರ ನಿರ್ಮಾಣ ಹೋರಾಟ ಶುರುವಾದಾಗಲೇ ದೇಶದ ಹಿಂದುಗಳಲ್ಲಿ ಧರ್ಮಜಾಗೃತಿ ಶುರುವಾಗಿತ್ತು. ಅದು ಆಂದೋಲನವಾಗಿ, ದೇಶಾದ್ಯಂತ ಹಿಂದುತ್ವದ ಅಲೆ ನಿರ್ಮಾಣವಾಗುವ ಹೊತ್ತಿಗೆ ನರೇಂದ್ರ ಮೋದಿಯವರೂ ಪ್ರಧಾನಿಯಾದರು. 2014 ರಲ್ಲಿ ಆಡಳಿತ ಚುಕ್ಕಾಣಿ ಹಿಡಿಯುತ್ತಿದ್ದಂತೆ ಅವರು ಮೊದಲು ಮಾಡಿದ್ದು ವಾರಣಾಸಿಯಲ್ಲಿ ಗಂಗಾರತಿ. ಅಲ್ಲಿಂದ ಶುರುವಾದ ಹಿಂದು ಜಾಗೃತಿ ನಂತರ ಹಲವು ಮಜಲುಗಳನ್ನು ದಾಟಿತು. ನೆರೆ ಹಾವಳಿಯಿಂದ ಹಾನಿಗೊಳಗಾದ ಕೇದಾರನಾಥ ಕ್ಷೇತ್ರದ ಅದ್ಭುತವಾದ ಪುನರ್ ನಿರ್ಮಾಣವು ಭಕ್ತರಿಗೆ ಅಚ್ಚರಿಯ ಸಂತೋಷ ನೀಡಿತ್ತು. ಕಾರಣ ಅಲ್ಲಿಯವರೆಗೆ ಹಿಂದಿನ ಯಾವುದೇ ಸರ್ಕಾರವು ಹಿಂದೂ ದೇವಾಲಯದ ಪುನರ್ ನಿರ್ಮಾಣವನ್ನು ಅಷ್ಟು ಆಸ್ಥೆಯಿಂದ ಮಾಡಿರಲಿಲ್ಲ. ಓಲೈಕೆ ರಾಜಕಾರಣದಿಂದಾಗಿ ಹಿಂದೂಗಳ ಆತ್ಮಾಭಿಮಾನವನ್ನೇ ಹತ್ತಿಕ್ಕುತ್ತ ಬರಲಾಗಿತ್ತು. ಕೇದಾರವೊಂದೇ ಅಲ್ಲ, ಇನ್ನುಳಿದ ಚಾರ್‌ಧಾಮ್ ಗೆ ಉತ್ತಮ ರಸ್ತೆ ಸಂಪರ್ಕ ಕಲ್ಪಿಸುವ ಮೂಲಕ ಮೋದಿಜಿ ಸರ್ಕಾರವು ತಾವು ಹಿಂದುಗಳ ಭಾವನೆಯ ರಕ್ಷಣೆಗೆ ಸದಾ ಸಿದ್ಧ ಎಂಬ ಭರವಸೆ‌ ನೀಡಿತು.

ಒಂದು ದೇಶದ ಜನರ ಧಾರ್ಮಿಕ ನಂಬಿಕೆ ಹಾಗೂ ಆತ್ಮಾಭಿಮಾನವು ಸ್ಥಿರವಾಗಿರಬೇಕೆಂದರೆ ಅವರ ಶ್ರದ್ಧಾ ಕೇಂದ್ರಗಳು ಸುಭದ್ರವಾಗಿರಬೇಕು. ಇದು ಎಲ್ಲ ಧರ್ಮದವರಿಗೂ ಅನ್ವಯಿಸುತ್ತದೆ. ಆದರೆ ಕಾಶಿ ವಿಶ್ವನಾಥ ದೇವಾಲಯವನ್ನು 16 ನೇ ಶತಮಾನದಲ್ಲಿ ಔರಂಗಜೇಬ ನಾಶಪಡಿಸಿದಾಗ ಹಿಂದೂಗಳ ಅಸ್ಮಿತೆಯೇ ಅಲ್ಲಾಡಿಹೋಯಿತು. ನಂತರ 17 ನೇ ಶತಮಾನದಲ್ಲಿ ವಿಶ್ವನಾಥ ದೇವಾಲಯವನ್ನು ಪುನರ್ ನಿರ್ಮಿಸಿ ಹಿಂದೂಗಳ ಧಾರ್ಮಿಕ ಭರವಸೆಯನ್ನು ಎತ್ತಿ ಹಿಡಿಯಲು ಪ್ರಯತ್ನಿಸಿದ್ದು ಮಹಾರಾಣಿ ಅಹಲ್ಯಾ ಬಾಯಿ ಹೋಳ್ಕರ್. ಆಕೆಯ ನಂತರ ಹಿಂದೂ ದೇವಾಲಯಗಳ ಪುನರ್ ನಿರ್ಮಾಣ ಮಾಡಿದ್ದು ನರೇಂದ್ರ ಮೋದಿಯವರೇ.

ದೇವಸ್ಥಾನಗಳ ಪುನರ್ ನಿರ್ಮಾಣ ಹಾಗೂ ಭಾರತೀಯ ಸಂಸ್ಕೃತಿಯ ಪುನರುತ್ಥಾನದ ವಿಚಾರದಲ್ಲಿ ಮೋದಿಜಿ ನಿರ್ಬಿಡೆಯಿಂದ ಇದ್ದಾರೆ. ಕಾರಣ ಭಾರತೀಯ ಪ್ರಾಚೀನ ನಾಗರೀಕತೆ ಹಾಗೂ ಸಂಸ್ಕೃತಿಯ ಪುನರುತ್ಥಾನದಲ್ಲೇ ದೇಶದ ಅಭಿವೃದ್ಧಿಯಿದೆ. ನಾಗರಿಕರಿಗೆ ನಾಯಕನ ಮೇಲೆ ಭರವಸೆ ಹುಟ್ಟುವುದೇ ಇದರಿಂದ. ತಮ್ಮ ನಂಬಿಕೆಗಳಿಗೆ ಪೂರಕವಾಗಿ ತಮ್ಮ ನಾಯಕ ಹಾಗೂ ಸರ್ಕಾರವಿದೆ ಎಂದಾಗ ಸಹಜವಾಗಿಯೇ ಸಕಾರಾತ್ಮಕ ಬದಲಾವಣೆಗಳು ಪ್ರಾರಂಭವಾಗುತ್ತದೆ. ಸದ್ಯ ನರೇಂದ್ರಮೋದಿಯವರು ದೇಶದ ಹಲವಾರು ದೇವಾಲಯಗಳ ವೈಭವವನ್ನು ಮರಳಿ ತಂದಿದ್ದಾರೆ. ಮಹಾಕಾಲೇಶ್ವರ ದೇವಸ್ಥಾನ, ಕಾಶಿಯಲ್ಲಿ ವಿಶ್ವನಾಥ ಕಾರಿಡಾರ್, ನಮಾಮಿ ಗಂಗೆ ಹಾಗೂ ಸುಂದರ ಸ್ವಚ್ಛ ಗಂಗಾ ರಿವರ್ ಫ್ರಂಟ್ , ಶತಮಾನಗಳ ಅಯೋಧ್ಯೆ ಸಮಸ್ಯೆಗೆ ಪರಿಹಾರ ಹಾಗೂ ಶ್ರೀರಾಮನ ದೇವಾಲಯಕ್ಕೆ ಶಂಕುಸ್ಥಾಪನೆ, ಕೇದಾರದಲ್ಲಿ ಶಂಕರಾಚಾರ್ಯರ ಮೂರ್ತಿಸ್ಥಾಪನೆ, ಹೈದರಾಬಾದ್ನಲ್ಲಿ ಸಂತ ರಾಮಾನುಜರ ಮೂರ್ತಿ ಪ್ರತಿಷ್ಠಾಪನೆ, ಕೊಯಂಬತೂರಿನಲ್ಲಿ ಆದಿಯೋಗಿ ಮೂರ್ತಿ, ಕಾಶ್ಮೀರದ ಶಾರದಾಪೀಠಕ್ಕೆ 75 ವರ್ಷಗಳ ನಂತರ ಮೊದಲ ಪೂಜೆ ಹೀಗೆ ಅನೇಕಾನೇಕ ಹಿಂದೂ ಶ್ರದ್ಧಕೇಂದ್ರಗಳ ಪುನರ್‌ನಿರ್ಮಾಣ ಹಾಗೂ ಸ್ಥಾಪನೆಯಿಂದಾಗಿ ಜನರಲ್ಲಿ ಸಹಜವಾಗೇ ತಮ್ಮ ಧರ್ಮದ ಬಗ್ಗೆ ನಂಬಿಕೆ ಹಾಗೂ ಭರವಸೆಗಳು ಹೆಚ್ಚಿದವು.

ದೇವಾಲಯಗಳಷ್ಟೇ ಅಲ್ಲ, ಭಾರತೀಯ ಹಿಂದೂ ಜೀವನ ಪದ್ಧತಿಯ ಅವಿಭಾಜ್ಯ ಅಂಗವಾದ ಯೋಗವನ್ನು ಪುನರುಜ್ಜೀವನಗೊಳಿಸಿದ ಖ್ಯಾತಿಯೂ ಮೋದಿಜಿ ಅವರಿಗೇ ಸಲ್ಲುತ್ತದೆ. ಭಾರತೀಯರಾದ ನಾವೇ ಯೋಗವನ್ನು ಮರೆತುಬಿಟ್ಟಿದ್ದೆವು. ನಮಗೆ ಯುರೋಪಿಯನ್ನರು ಬಂದು ಯೋಗ ಕಲಿಸುವ ಸ್ಥಿತಿ ತಲುಪಿದ್ದೆವು. ಬಿಟ್ಟರೆ ಇನ್ನು ಕೆಲವೇ ವರ್ಷಗಳಲ್ಲಿ ಅಮೇರಿಕನ್ನರು ಯೋಗದ ಪೇಟೆಂಟ್ ಪಡೆದುಕೊಂಡು, ಯೋಗ ತಮ್ಮ ದೇಶಕ್ಕೆ ಸೇರಿದ್ದು ಎಂದುಬಿಡುತ್ತಿದ್ದರು. ಅಂದಮೇಲೆ ಹಿಂದುಗಳಿಗೆ ತಮ್ಮ ಜೀವನಪದ್ಧತಿ ಹಾಗೂ ಧರ್ಮದ ವಿಸ್ಮೃತಿ ಯಾವ ಹಂತಕ್ಕೆ ತಲುಪಿತ್ತು ಎಂದು ನೀವೇ ಊಹಿಸಿ.

ಇಂತಿಪ್ಪ ಯೋಗವನ್ನು ಜಗತ್ತಿಗೆ ಪರಿಚಯಿಸಿ ಜೂನ್ 21 ರಂದು ಪ್ರತೀವರ್ಷ ಇಡೀ ಜಗತ್ತೇ ಯೋಗಾ ಡೇಯಲ್ಲಿ ಭಾಗವಹಿಸುವಂತೆ ಮಾಡಿ, ಜಗತ್ತಿನ ಮೂರು ಕೋಟಿಗೂ ಅಧಿಕ ಮಂದಿ ಯೋಗ ಮಾಡುವಂತೆ ಮಾಡಿದ ಕೀರ್ತಿ ಮೋದಿಜಿಯವರಿಗೆ ಸಲ್ಲುತ್ತದೆ. ಇದಷ್ಟೇ ಅಲ್ಲದೆ ಭಾರತೀಯ ಆಯುರ್ವೇದ ವೈದ್ಯಕೀಯ ಪದ್ಧತಿಯನ್ನು ಮೇಲೆತ್ತುವಲ್ಲಿ ಕೂಡ ಮೋದಿಜಿಯವರ ಪಾತ್ರವಿದೆ. ಆಯುಷ್ ಇಲಾಖೆಗೆ ಹಿಂದೆಂದಿಗಿಂತಲೂ ಹೆಚ್ಚಿನ ಅನುದಾನ ನೀಡಲಾಗುತ್ತಿದ್ದು, ದೇಶದಲ್ಲಿ ಹಿಂದೆಂದಿಗಿಂತಲೂ ಹೆಚ್ಚಿನ ಜನ ಯೋಗ ಹಾಗೂ ಆಯುರ್ವೇದದತ್ತ ಮುಖ ಮಾಡಿದ್ದಾರೆ.

ಮೋದಿಜಿ‌ ಅವರ ನಾಯಕತ್ವದಲ್ಲಿ ಹಿಂದೂ‌ ನಾಗರೀಕತೆ ಹಾಗೂ ಸಂಸ್ಕೃತಿಯ ಪುನರುಜ್ಜೀವನಕ್ಕೆ ಹೀಗೆ ಅನೇಕ ಪ್ರಯತ್ನಗಳು ನಡೆಯುತ್ತಿವೆ. ಅದಕ್ಕೆ ಪೂರಕವಾಗಿ ಹಿಂದೂಗಳಿಗೆ ಹೊಸ ಭರವಸೆ, ಭದ್ರತೆ ಹಾಗೂ ಹೊಸ ಸ್ವಾಭಿಮಾನವೂ ಮೂಡಿದೆ. ಸಂಪೂರ್ಣವಾದ ಹಿಂದೂ ಪುನರುತ್ಥಾನವಾಗಬೇಕೆಂದರೆ ಈಗ ಮೂಡಿದ ಭರವಸೆ ಹಾಗೂ ಆತ್ಮನಿರ್ಭರತೆ ಇನ್ನಷ್ಟು ವರ್ಷಗಳ ಕಾಲ ಉಳಿಯಬೇಕಿದೆ. ಹಾಗೆ ಉಳಿಯಬೇಕೆಂದರೆ ಮೋದಿಜಿಯವರ ನಾಯಕತ್ವದ ಅಗತ್ಯ ಇನ್ನಷ್ಟು ವರ್ಷ ಬೇಕಿದೆ.

— ಗೀರ್ವಾಣಿ