
ಕೃತಕ ಬುದ್ಧಿಮತ್ತೆ ಮತ್ತು ಯಂತ್ರ ಕಲಿಕೆಗಳನ್ನು ಉಪಯೋಗಿಸಿಕೊಂಡು ಪ್ರಾರಂಭಿಸಿದ್ದ ವಂಚನಾ-ನಿಗ್ರಹ ಕಾರ್ಯಸೂಚಿಯಿಂದ 9.5 ಕೋಟಿ ರೂಪಾಯಿಯಷ್ಟು ದಂಡವನ್ನು ಪಡೆದುಕೊಳ್ಳಲಾಗಿದೆ.
ಈ ಕಾರ್ಯಸೂಚಿ ಜಗತ್ತಿನ ಅತ್ಯಂತ ದೊಡ್ಡ, ಸರ್ಕಾರವೇ ನಡೆಸುತ್ತಿರುವ ವಿಮಾ ಯೋಜನೆ ಆಯುಷ್ಮಾನ್ ಭಾರತ್-ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆಯನ್ನು ರಕ್ಷಿಸುವ ಗುರಿಯನ್ನು ಹೊಂದಿದೆ. ಇದರ ಆಧಾರದ ಮೇಲೆ ಪಡೆದ ಮಾಹಿತಿಯಿಂದ 5.3 ಲಕ್ಷ ಆಯುಷ್ಮಾನ್ ಕಾರ್ಡುಗಳನ್ನು ನಿಷ್ಕ್ರಿಯಗೊಳಿಸಲಾಗಿದೆ ಮತ್ತು 210 ಆಸ್ಪತ್ರೆಗಳ ದಾಖಲಾತಿಯನ್ನು ರದ್ದುಗೊಳಿಸಲಾಗಿದೆ.
ಈ AI (ಕೃತಕ ಬುದ್ಧಿಮತ್ತೆ) ಕಾರ್ಯಸೂಚಿಯನ್ನು ಬಳಸಲು ಪ್ರಾರಂಭಿಸಿದಾಗಿನಿಂದ ಆಯುಷ್ಮಾನ್ ಭಾರತ್ ಯೋಜನೆಯಡಿಯಲ್ಲಿ ನೇಮಕಾತಿಗೊಂಡಿದ್ದ ಆಸ್ಪತ್ರೆಗಳಲ್ಲಿ 0.18 ಪ್ರತಿಶತದಷ್ಟು ಮೋಸ ಮಾಡಲೆಂದೇ ಇದ್ದವು ಎಂಬ ಸತ್ಯ ಹೊರಬಂದಿದೆ. ಇದರ ಪರಿಣಾಮವಾಗಿ, 188 ಆಸ್ಪತ್ರೆಗಳನ್ನು ಅಮಾನತುಗೊಳಿಸಿ, 20.17 ಕೋಟಿ ರೂಪಾಯಿಯ ದಂಡವನ್ನು ವಸೂಲು ಮಾಡಲಾಗಿದೆ.
ಮೋಸವನ್ನು ಕಂಡು ಹಿಡಿಯಲು ಮತ್ತು ತಡೆಯಲು ಆರೋಗ್ಯ ಸಚಿವಾಲಯ ಸಮಗ್ರವಾದ ವಿಶ್ಲೇಷಣೆಯೊಂದನ್ನು ನಡೆಸುತ್ತದೆ, ಅದು ಕೃತಕ ಬುದ್ಧಿಮತ್ತೆಯನ್ನು ಉಪಯೋಗಿಸಿಕೊಳ್ಳುತ್ತದೆ. ಆಯುಷ್ಮಾನ್ ಭಾರತ್ ಯೋಜನೆಯನ್ನು ಜಾರಿಗೊಳಿಸುವ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ ಈ ಹಿಂದೆ ವಂಚನೆ ತಡೆಗಟ್ಟಲು ಒಂದಷ್ಟು ಮಾರ್ಗಸೂಚಿಗಳನ್ನೂ ಸಹ ನೀಡಿತ್ತು. ಈ ಮಾರ್ಗಸೂಚಿ ವಂಚನೆಯನ್ನು ತಡೆಗಟ್ಟಲು ಮತ್ತು ವಿಮಾ ಯೋಜನೆಯ ಸಮಗ್ರತೆಯನ್ನು ಉಳಿಸಿಕೊಳ್ಳುವಲ್ಲಿ ಸಹಾಯ ಒದಗಿಸುತ್ತಿದೆ.
ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ವಂಚನಾ-ನಿಗ್ರಹ ಸಲಹೆಗಳನ್ನು ಕಳಿಸಿಕೊಡಲಾಗಿದೆ. ಆರೋಗ್ಯ ಸಚಿವಾಲಯ ರಾಷ್ಟ್ರೀಯ ವಂಚನಾ ನಿಗ್ರಹ ದಳವನ್ನು ಪ್ರಾರಂಭಿಸಿದ್ದು, ಅದು ರಾಜ್ಯ ವಂಚನಾ ನಿಗ್ರಹ ದಳದೊಂದಿಗೆ ಸೇರಿ ಆಯಾ ರಾಜ್ಯಕ್ಕೆ ತಕ್ಕಂತೆ ಕಾರ್ಯಯೋಜನೆಯನ್ನು ಜಾರಿಗೊಳಿಸುತ್ತದೆ. ಈ ಕಾರ್ಯಸೂಚಿ ಅನುಮಾನಕರ ವೈದ್ಯಕೀಯ ಚಿಕಿತ್ಸೆ ಅಥವಾ ಇನ್ನಾವುದೇ ರೀತಿಯ ವಂಚನೆಯನ್ನೂ ಸಹಿಸುವುದಿಲ್ಲ. ಸಚಿವಾಲಯದ ಪ್ರಕಾರ, ಎಲ್ಲಾ ಚಿಕಿತ್ಸೆಗೂ ಕೇಳಿದ ದಾಖಲೆಗಳನ್ನು ಮತ್ತು ರೋಗಿಯ ಹಾಸಿಗೆಯ ಮೇಲಿರುವ ಭಾವಚಿತ್ರವನ್ನೂ ಕಡ್ಡಾಯವಾಗಿ ಕೊಡಲೇಬೇಕು. ಈ ಎಲ್ಲಾ ಅವಶ್ಯಕತೆಗಳನ್ನು ಪೂರೈಸಿದ ನಂತರವೇ ರೋಗಿಯ ಅರ್ಜಿಯನ್ನು ಅಂಗೀಕರಿಸಿ, ಹಣವನ್ನು ಪಾವತಿಸಲಾಗುತ್ತದೆ. ಅದೂ ಅಲ್ಲದೇ, ಖಾಸಗಿ ಆಸ್ಪತ್ರೆಗಳು ರೋಗಿಗಳ ದಾಖಲಾತಿ ಮತ್ತು ಚಿಕಿತ್ಸೆ ಮುಗಿದು ಡಿಸ್ಚಾರ್ಜ್ ಮಾಡಿಸುವಾಗಿ ಆಧಾರ್ ಕಾರ್ಡ್ ಆಧಾರಿತ ಬಯೋಮೆಟ್ರಿಕ್ ಪರಿಶೀಲನೆಯನ್ನು ಅಳವಡಿಸಿಕೊಂಡಿವೆ.
2023ರ ಜುಲೈ 4ರ ವೇಳೆಗೆ ಈ ಎಐ ಆಧಾರಿತ ಕಾರ್ಯಸೂಚಿ 99 ಪ್ರತಿಶತ ಕೇಸುಗಳನ್ನು, ಅಂದರೆ 3.93 ಲಕ್ಷ ಕೇಸುಗಳನ್ನು ಪರಿಹರಿಸಿದೆ. ಸರ್ಕಾರಿ ಮಾಹಿತಿಯ ಪ್ರಕಾರ ಆಯುಷ್ಮಾನ್ ಭಾರತ್- ಪ್ರಧಾನಮಂತ್ರಿ ಜನ್ ಆರೋಗ್ಯ ಯೋಜನೆ 33 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಜಾರಿಗೊಳಿಸಲಾಗಿದೆ. ಒಟ್ಟು 24 ಕೋಟಿ ಆರೋಗ್ಯ ಕಾರ್ಡುಗಳನ್ನು ವಿತರಿಸಲಾಗಿದೆ.
ಸರ್ಕಾರವೀಗ ಆಯುಷ್ಮಾನ್ ಕಾರ್ಡಿನ ಸದ್ಬಳಕೆ, ಆರೋಗ್ಯ ಕಿಯಾಸ್ಕ್ ಸ್ಥಾಪನೆ, ಸರಿಯಾದ ಸಮಯಕ್ಕೆ ಅರ್ಜಿಯನ್ನು ಪರಿಶೀಲಿಸುವುದು, ದಾಖಲಿತ ಆಸ್ಪತ್ರೆಗಳ ಜಾಲವನ್ನು ವಿಸ್ತಾರಗೊಳಿಸುವ ಕುರಿತು ಗಮನ ಹರಿಸುತ್ತಿದೆ.
ಇದರ ಜೊತೆಗೆ, ಆರೋಗ್ಯ ಸಚಿವಾಲಯ ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ ಅನ್ನು ಜಾರಿಗೊಳಿಸುವ ಯೋಜನೆ ಹಾಕಿಕೊಂಡಿದೆ. ಇದರ ಉದ್ದೇಶ ರಾಷ್ಟ್ರೀಯ ಡಿಜಿಟಲ್ ವ್ಯವಸ್ಥೆಯೊಂದನ್ನು ಸ್ಥಾಪಿಸಿ, ಆ ಮೂಲಕ ವ್ಯಕ್ತಿಯ ಆರೋಗ್ಯಕ್ಕೆ ಸಂಬಂಧಿಸಿದ ವಿಚಾರಗಳ ಖಾಸಗಿತನವನ್ನು, ಸುರಕ್ಷತೆಯನ್ನು ಮತ್ತು ರಹಸ್ಯವನ್ನು ಕಾಪಾಡಿಕೊಳ್ಳುವುದಾಗಿದೆ.
ಪ್ರಧಾನಮಂತ್ರಿ- ಆಯುಷ್ಮಾನ್ ಭಾರತ್ ಆರೋಗ್ಯ ಮೂಲಸೌಕರ್ಯ ಮಿಷನ್ಗೆ 2021-22 ರಿಂದ 2025-26ರವರೆಗೆ 64,180 ಕೋಟಿ ರೂಪಾಯಿಯನ್ನು ನೀಡಲಾಗಿದೆ. ಸರ್ಕಾರ ಈಗ ಆರೋಗ್ಯ ಮತ್ತು ಕ್ಷೇಮಾಭಿವೃದ್ಧಿ ಕೇಂದ್ರಗಳ, ಬ್ಲಾಕ್ ಮಟ್ಟದ ಸಾರ್ವಜನಿಕ ಆರೋಗ್ಯ ಕೇಂದ್ರಗಳ ಅಭಿವೃದ್ಧಿ, ರೋಗ ತಪಾಸಣಾ ವ್ಯವಸ್ಥೆಯ ವಿಸ್ತಾರ, ವಿವಿಧ ರೀತಿಯ ಪಿಡುಗುಗಳ ಸಂಶೋಧನೆಯನ್ನು ವೃದ್ಧಿಸುವತ್ತ ಕಾರ್ಯ ನಿರ್ವಹಿಸುತ್ತಿದೆ.