
ಕಾಂಗ್ರೆಸ್ಸಿನ ನಿರ್ಲಜ್ಜತನವನ್ನು ಮೆಚ್ಚಲೇಬೇಕು. 1951ರವರೆಗೆ ಭಾರತದಲ್ಲಿ ಇದ್ದ ಒಟ್ಟು ರಾಷ್ಟ್ರೀಯ ಹೆದ್ದಾರಿಯ ಪ್ರಮಾಣ 22,200 ಕಿ.ಮೀನಷ್ಟು. 1997ರ ವೇಳೆಗೆ ಅಂದರೆ, ಸುಮಾರು 46 ವರ್ಷಗಳ ನಂತರ ಇದು 34,298 ಕಿ.ಮೀಗಳಿಗೇರಿತು. ಈ ಐದು ದಶಕಗಳ ಅವಧಿಯಲ್ಲಿ ಕಾಂಗ್ರೆಸ್ಸು ಕೂಡಿಸಿದ ರಾಷ್ಟ್ರೀಯ ಹೆದ್ದಾರಿಯ ಪ್ರಮಾಣ 12,000 ಕಿ.ಮೀಗಳಷ್ಟು ಮಾತ್ರ. ಆದರೆ ವಾಜಪೇಯಿಯವರು ತಮ್ಮ ಅಧಿಕಾರಾವಧಿಯ ಏಳೇ ವರ್ಷಗಳಲ್ಲಿ 31,000 ಕಿ.ಮೀಗೂ ಹೆಚ್ಚು ರಾಷ್ಟ್ರೀಯ ಹೆದ್ದಾರಿಯನ್ನು ಭಾರತದ ಬುಟ್ಟಿಗೆ ಹಾಕಿದರು. ಅದ್ಭುತವಾದ ಯೋಜನೆಗಳನ್ನು ರೂಪಿಸಿ, ಕಾರ್ಯಗತಗೊಳಿಸಿ, ಆದರ್ಶ ಆಡಳಿತದ ನಮೂನೆಯನ್ನು ಹಾಕಿಕೊಟ್ಟಿದ್ದ ವಾಜಪೇಯಿಯವರನ್ನು ಅನುಸರಿಸಿದ್ದರೂ ಕಾಂಗ್ರೆಸ್ಸು ಇಂದು ತಲೆ ಎತ್ತಿಕೊಂಡು ತಿರುಗಾಡುವ ಸ್ಥಿತಿಯಲ್ಲಿರುತ್ತಿತ್ತು. ಅಟಲ್‌ಜಿಯವರ ಏಳು ವರ್ಷಗಳ ಅವಧಿಯ ನಂತರ ಹತ್ತು ವರ್ಷ ಭಾರತದ ಚುಕ್ಕಾಣಿಯನ್ನು ಹಿಡಿದ ಕಾಂಗ್ರೆಸ್ಸು ವಾಜಪೇಯಿಯವರ ಸಾಧನೆಯನ್ನು ಸರಿಗಟ್ಟುವುದಿರಲಿ, ಅದರ ಅರ್ಧಕ್ಕೂ ಬಂದಿರಲಿಲ್ಲ.
ಈಗೇಕೆ ಇದನ್ನು ನೆನಪಿಸಿಕೊಳ್ಳುತ್ತಿದ್ದೇನೆಂದರೆ ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್‌ವೇ ಸಮಾಜಕ್ಕೆ ಸಮರ್ಪಣೆಯಾಗುತ್ತಿರುವಾಗಲೇ ಕಾಂಗ್ರೆಸ್ಸಿಗರು ತಮ್ಮ ಎಂದಿನ ನಾಟಕ ಆರಂಭಿಸಿ ಈ ಹೆದ್ದಾರಿಯ ಪರೀಕ್ಷೆಯನ್ನು ಮಾಡುವ, ಅಲ್ಲಲ್ಲಿ ಕಾರ್ಯಕ್ರಮಗಳನ್ನು ಮಾಡಿ ಮೋದಿಯ ಪ್ರಭಾವವನ್ನು ತಗ್ಗಿಸುವ ಪ್ರಯತ್ನ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ, ಈ ಹೆದ್ದಾರಿಯ ಶ್ರೇಯ ತಮಗೇ ಸಲ್ಲಬೇಕೆಂಬ ಅತೀ ಕ್ಷುದ್ರ ವಾದವನ್ನು ಮಂಡಿಸಿ ಜನರ ಬಳಿ ಬಾಯ್ತುಂಬ ಉಗಿಸಿಕೊಳ್ಳುತ್ತಿದ್ದಾರೆ.
ಅಟಲ್ ಬಿಹಾರಿ ವಾಜಪೇಯಿಯವರನ್ನು ಭಾರತದ ಮೂಲಭೂತ ಸೌಕರ್ಯಗಳ ಕ್ರಾಂತಿಯ ಹರಿಕಾರ ಎನ್ನಲಾಗುತ್ತದೆ. ಅವರ ಏಳು ವರ್ಷಗಳ ಅವಧಿ ಸುವರ್ಣ ಯುಗವೇ ಸರಿ. ಅವರ ಕಾಲದಲ್ಲಿ ಭಾರತದ ಜಿಡಿಪಿ ಶೇಕಡಾ 8 ಕ್ಕಿಂತಲೂ ಹೆಚ್ಚಿತ್ತು ಮತ್ತು ಹಣದುಬ್ಬರ ಶೇಕಡಾ 4 ಕ್ಕಿಂತಲೂ ಕಡಿಮೆ ಇತ್ತು. ಇದಕ್ಕೆ ಮಹತ್ವದ ಕಾರಣವೇ ಅವರ ದೂರದೃಷ್ಟಿಯ ರಸ್ತೆ ನಿರ್ಮಾಣದ ಕನಸು ಎನ್ನಲಾಗುತ್ತದೆ. ದೆಹಲಿ, ಮುಂಬೈ, ಚೆನ್ನೈ ಮತ್ತು ಕೋಲ್ಕತ್ತಾದಂತಹ ನಾಲ್ಕು ಮಹಾನಗರಗಳನ್ನು ಬೆಸೆಯುವ ನಾಲ್ಕರಿಂದ ಆರು ಲೇನಿನ ರಾಷ್ಟ್ರೀಯ ಹೆದ್ದಾರಿಯ ನಿರ್ಮಾಣದ ಕನಸನ್ನು ಅಟಲ್‌ಜಿ ಕಟ್ಟಿದರು. ಇದಕ್ಕವರು ಕೊಟ್ಟ ಹೆಸರೇನು ಗೊತ್ತೇ? ‘ಸುವರ್ಣ ಚತುಷ್ಪಥ ರಸ್ತೆ’, ಸಿಂಪಲ್ಲಾಗಿ ಹೇಳಬೇಕೆಂದರೆ ‘ಚಿನ್ನದ ರಸ್ತೆ’. ಕಾಂಗ್ರೆಸ್ಸಿನ ಅಧಿಕಾರಾವಧಿಯಲ್ಲಿ ರಸ್ತೆಗಳು ಫೈಲುಗಳಲ್ಲಿರುತ್ತಿದ್ದವು, ಹಣ ಕಾಂಗ್ರೆಸ್ ನಾಯಕರ ಮನೆಯಲ್ಲಿರುತ್ತಿತ್ತು. ಅಟಲ್‌ಜಿ ಅಧಿಕಾರಕ್ಕೆ ಬಂದಮೇಲೆ ರಸ್ತೆ ಫೈಲಿನಿಂದ ಆಚೆಗೆ ಬಂದು ಜನರಿಗೆ ಕಾಣಲಾರಂಭಿಸಿತು. ಆ ನೆಪದಲ್ಲಿ ಉದ್ಯೋಗ ಸೃಷ್ಟಿಯಾಗಿ, ವ್ಯಾಪಾರ ಅಭಿವೃದ್ಧಿಯಾಗಿ, ಹಣ ಜನಸಾಮಾನ್ಯರಿಗೆ ತಲುಪಿತು. ಚಿನ್ನದ ರಸ್ತೆಯ ವೈಶಿಷ್ಟ್ಯ ಇದು. ಆದರೆ ವಾಜಪೇಯಿಯವರ ಕನಸು ಇಷ್ಟಕ್ಕೇ ನಿಂತಿರಲಿಲ್ಲ. ಅವರು ಉತ್ತರದಿಂದ ದಕ್ಷಿಣವನ್ನೂ ಪೂರ್ವದಿಂದ ಪಶ್ಚಿಮವನ್ನೂ ಬೆಸೆಯುವ ಕಾರಿಡಾರ್ ಯೋಜನೆಗಳನ್ನೂ ಕೈಗೆತ್ತಿಕೊಂಡರು. ಆ ಮೂಲಕ ಶ್ರೀನಗರದಿಂದ ಕನ್ಯಾಕುಮಾರಿ ಮತ್ತು ಗುಜರಾತಿನ ಪೋರ್ಬಂದರ್ನಿಂದ ಅಸ್ಸಾಮಿನ ಸಿಲ್ಚಾರ್‌ಗಳನ್ನು ಬೆಸೆಯುವ ರಾಷ್ಟ್ರೀಯ ಹೆದ್ದಾರಿಗಳು ರೂಪುಗೊಂಡವು. ಚಿನ್ನದ ರಸ್ತೆಗಳು ರಾಷ್ಟ್ರೀಯ ಹೆದ್ದಾರಿಗಳೇ ಆಗಬೇಕೆಂದಿಲ್ಲ. ಈ ಹೆದ್ದಾರಿಗೆ ಸಂಪರ್ಕ ಪಡೆಯುವ ಹಳ್ಳಿಯ ರಸ್ತೆಗಳೂ ಮಜಬೂತಾಗಬೇಕಲ್ಲ, ಹೀಗಾಗಿಯೇ ಇದಕ್ಕಿಂತಲೂ ಬೃಹತ್ತಾಗಿರುವ ಪ್ರಧಾನಮಂತ್ರಿ ಗ್ರಾಮ್ಸಡಕ್ ಯೋಜನೆಯನ್ನು ಕೈಗೆತ್ತಿಕೊಂಡು ಅಷ್ಟೇ ದೊಡ್ಡ ಪ್ರಮಾಣದಲ್ಲಿ ಅದನ್ನು ಕಾರ್ಯರೂಪಕ್ಕೆ ತರುವಲ್ಲಿ ಅಟಲ್ಜಿ ಮತ್ತವರ ತಂಡ ಶ್ರಮಿಸಿತು. ಬಹುಶಃ ಈ ಯೋಜನೆಯ ಕನಸನ್ನು ಕಾಂಗ್ರೆಸ್ಸಿಗರೇ ಕಂಡಿದ್ದರೆ ಅವರು ಅದಕ್ಕೆ ಇಂದಿರಾಗಾಂಧಿಯದ್ದೋ, ರಾಜೀವ್‌ಗಾಂಧಿಯದ್ದೋ ಅಥವಾ ರಾಹುಲ್‌ನದ್ದೋ ಹೆಸರು ಕೊಟ್ಟುಬಿಡುತ್ತಿದ್ದರು. ಅಟಲ್‌ಜಿ ತಮ್ಮ ಹೆಸರನ್ನೂ ಇಟ್ಟುಕೊಳ್ಳಲಿಲ್ಲ.

ಆರಂಭದಲ್ಲಿ ಈ ಇಡಿಯ ಯೋಜನೆಗೆ ಹಣ ಎಲ್ಲಿಂದ ತರುವುದು ಎಂಬುದೇ ದೊಡ್ಡ ಪ್ರಶ್ನೆಯಾಗಿತ್ತು. ವಿರೋಧಿಗಳ ಅಸ್ತ್ರವೂ ಅದರ ಸುತ್ತಲೇ ತಿರುಗುತ್ತಿತ್ತು. ಏಕೆಂದರೆ ಈ ಯೋಜನೆಯನ್ನು ಅನುಷ್ಠಾನಕ್ಕೆ ತರುವ ಕಲ್ಪನೆ ಕಟ್ಟಿದ ನಂತರ ವಿತ್ತೀಯ ಕೊರತೆ ಜಿಡಿಪಿಯ ಶೇಕಡಾ ಐದೂವರೆಯಷ್ಟಾಗಿತ್ತು. ಇಷ್ಟನ್ನೂ ಸರಿದೂಗಿಸುವಲ್ಲಿ ದೊಡ್ಡ ಸಾಹಸವನ್ನೇ ಮಾಡಬೇಕಾಗಿತ್ತು. ಇಂಧನಗಳ ಮೇಲೆ ವಿಧಿಸಿದ ಶೇಕಡಾ ಒಂದರಷ್ಟು ಸೆಸ್ ಈ ಯೋಜನೆಗೆ ಸಾಕಷ್ಟು ಹಣವನ್ನು ತಂದುಕೊಟ್ಟಿತಲ್ಲದೇ, ಕೆಲವು ಕಾಂಗ್ರೆಸ್ ನಾಯಕರ ಮೂರ್ಖತನದಿಂದಾಗಿ ಆರಂಭಗೊಂಡಿದ್ದ ಮತ್ತು ಅಪಾರ ನಷ್ಟವನ್ನು ಅನುಭವಿಸುತ್ತಿದ್ದ ಸಾರ್ವಜನಿಕ ವಲಯದ ಅನೇಕ ಉದ್ದಿಮೆಗಳಲ್ಲಿನ ಹೂಡಿಕೆಯನ್ನು ಹಿಂತೆಗೆದು ಗಳಿಸಿದ ಹಣವನ್ನು ರಸ್ತೆಗಳಿಗೆಂದು ವಿನಿಯೋಗಿಸಿದರು. ಸಾರ್ವಜನಿಕರು ಮತ್ತು ಖಾಸಗಿ ವಲಯದವರ ಸಹಭಾಗಿತ್ವವನ್ನೂ ಪಡೆದುಕೊಳ್ಳಲಾಯ್ತು. ನೋಡ-ನೋಡುತ್ತಲೇ ಅಗಾಧವಾಗಿ ಬೆಳೆದುನಿಂತ ಈ ಯೋಜನೆ ಜಗತ್ತಿನ ಐದನೇ ಅತಿದೊಡ್ಡ ರಾಷ್ಟ್ರೀಯ ಹೆದ್ದಾರಿ ಯೋಜನೆಯಾಗಿ ರೂಪುಗೊಂಡಿತು. ದಾರಿ ನಿರ್ಮಾಣ ಮಾಡುವ ಉದ್ದಕ್ಕೂ ಜನರ ಜಮೀನನ್ನು ಕೊಂಡುಕೊಳ್ಳುವುದರಿಂದ ಹಿಡಿದು ಯೋಜನೆಯನ್ನು ಸೂಕ್ತ ಸಮಯದಲ್ಲಿ ಮುಗಿಸಲು ಬೇಕಾದ ಸಮರ್ಥ ಕೌಶಲ್ಯವುಳ್ಳ ತಂಡವನ್ನು ಕಟ್ಟುವುದರಲ್ಲಿಯೂ ಅಟಲ್ ಬಿಹಾರಿ ವಾಜಪೇಯಿ ಚಾಣಾಕ್ಷತೆ ತೋರಿದರು.
ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ಸಿನ ಆಲೋಚನೆ ಎಷ್ಟು ಕಳಪೆ ಮಟ್ಟದ್ದು ಎಂದರೆ 2013ರಲ್ಲಿ ಸುವರ್ಣ ಚತುಷ್ಪಥದ ಎಲ್ಲ ಗುತ್ತಿಗೆದಾರರಿಗೂ ಒಂದು ಪತ್ರವನ್ನು ನ್ಯಾಷನಲ್ ಹೈವೇ ಅಥಾರಿಟಿ ಆಫ್ ಇಂಡಿಯಾದ ಮೂಲಕ ಕಳಿಸಿ ಪ್ರತಿ 25 ಕಿ.ಮೀಗೆ ಪ್ರಧಾನಮಂತ್ರಿ ಮನಮೋಹನ್‌ಸಿಂಗ್ ಮತ್ತು ಸೋನಿಯಾರ ಎತ್ತರೆತ್ತರದ ಕಟೌಟ್ಗಳನ್ನು ಹಾಕುವಂತೆ ಕೇಳಿಕೊಳ್ಳಲಾಗಿತ್ತು. ಈ ಕಟೌಟ್‌ಗಳು ಇಂಗ್ಲಿಷ್, ಹಿಂದಿ ಮತ್ತು ಸ್ಥಳೀಯ ಭಾಷೆಯಲ್ಲಿರಬೇಕೆಂದೂ 20 ಅಡಿ ಅಗಲ ಮತ್ತು 10 ಅಡಿ ಎತ್ತರಕ್ಕಿರಬೇಕೆಂದೂ ಹೇಳಲಾಗಿತ್ತು. ರಸ್ತೆಯ ಮೇಲ್ಭಾಗದಿಂದ ಸುಮಾರು ಮೂರು ಮೀಟರ್ ಎತ್ತರಕ್ಕೆ ಇದು ಪ್ರದರ್ಶಿತಗೊಳ್ಳಬೇಕು ಎಂಬುದನ್ನೂ ಸೇರಿಸಲಾಗಿತ್ತು. ಪ್ರತಿಯೊಂದು ಕಡೆ ಈ ಬೋರ್ಡುಗಳನ್ನು ಅಳವಡಿಸಲು ಸುಮಾರು ಒಂದರಿಂದ ಎರಡು ಲಕ್ಷದಷ್ಟು ವೆಚ್ಚವಾಗುತ್ತದೆ ಎಂಬ ಅಂದಾಜಿನಂತೆ ಇಂತಹ 1500 ಬೋರ್ಡುಗಳಿಗೆ 15 ರಿಂದ 30 ಕೋಟಿ ರೂಪಾಯಿ ಬೇಕಾಗುತ್ತದೆ ಎಂದು ಅಂದಾಜಿಸಲಾಗಿತ್ತು. 2004ರಲ್ಲಿ ಅಧಿಕಾರಕ್ಕೆ ಬಂದೊಡನೆ ಅವರು ಮಾಡಿದ್ದ ಮೊದಲ ಕೆಲಸವೇ ಅಟಲ್‌ಜಿಯ ಚಿತ್ರಗಳನ್ನು ಈ ಚಿನ್ನದ ರಸ್ತೆಗಳಿಂದ ತೆಗೆಸಿದ್ದು, ಮತ್ತೀಗ ತಮ್ಮ ನಾಯಕರ ಚಿತ್ರಗಳನ್ನು ಅಳವಡಿಸಲು ತಾಕೀತು ಮಾಡಿದ್ದರು. ಅಟಲ್ ಜಿ ಅಧಿಕಾರದಲ್ಲಿದ್ದಷ್ಟೂ ದಿನ ಈ ಯೋಜನೆಯನ್ನು ಟೀಕಿಸುತ್ತಲೇ ಬಂದ ಕಾಂಗ್ರೆಸ್ಸು ಅದೇ ರಸ್ತೆಗಳನ್ನು ತನ್ನ ಚುನಾವಣಾ ಪ್ರಚಾರಕ್ಕಾಗಿ ಬಳಸಿಕೊಂಡಿದ್ದು ದೌರ್ಭಾಗ್ಯ. ದುರಂತವೇನೆಂದರೆ ಸರ್ಕಾರದ ಯಾವ ಪ್ರಮುಖ ಹುದ್ದೆಯಲ್ಲೂ ಇರದಿದ್ದ ಸೋನಿಯಾ ಚಿತ್ರವನ್ನು ಜನರ ಹಣದಲ್ಲಿ ಉದ್ದಕ್ಕೂ ಹಾಕಿಸಬೇಕೆಂಬ ನಿರ್ಣಯ ಕೈಗೊಂಡಿದ್ದು! ಪ್ರತಿಪಕ್ಷಗಳು ಈ ವಿಚಾರಕ್ಕಾಗಿ ಪತ್ರಿಕಾಗೋಷ್ಠಿ ನಡೆಸಿ ಕೂಗಾಡಿದಾಗ ಆಡಳಿತ ಪಕ್ಷದ ವಕ್ತಾರರು ಉತ್ತರ ಕೊಡುವಷ್ಟೂ ಸೌಜನ್ಯ ತೋರಲಿಲ್ಲ ಅಥವಾ ಅವರ ಬಳಿ ಉತ್ತರವೇ ಇರಲಿಲ್ಲ.
ಆರ್ಗನೈಸೇಷನ್ ಫಾರ್ ಎಕನಾಮಿಕ್ ಕೊ-ಆಪರೇಶನ್ ಆಂಡ್ ಡೆವಲಪ್ಮೆಂಟ್ ಎಂಬ 37 ರಾಷ್ಟ್ರಗಳ ಸಂಸ್ಥೆಯೊಂದು ಇತ್ತೀಚೆಗೆ ರಸ್ತೆಗಳ ಅಭಿವೃದ್ಧಿ ಏಕೆ ಎಂಬ ಕುರಿತಂತೆ ವಿಸ್ತಾರವಾದ ವರದಿಯನ್ನು ಮುಂದಿರಿಸಿದೆ. ಅದರ ಪ್ರಕಾರ, ‘ರಸ್ತೆಗಳ ಅಭಿವೃದ್ಧಿಯಿಂದ ವಸ್ತುಗಳನ್ನು ಒಂದೆಡೆಯಿಂದ ಮತ್ತೊಂದೆಡೆ ಸಾಗಿಸಲು ಅನುಕೂಲವಾಗುತ್ತದಲ್ಲದೇ ವಸ್ತುವಿನ ದರವನ್ನೂ ಕಡಿಮೆ ಮಾಡುತ್ತದೆ. ಸ್ಥಳೀಯವಾಗಿ ಸ್ಪರ್ಧಿಸುವ ಅನೇಕ ವಸ್ತುಗಳು ಭಿನ್ನ-ಭಿನ್ನ ಮಾರುಕಟ್ಟೆಗಳನ್ನು ಪಡೆಯುತ್ತವೆ. ಜೊತೆಗೆ ದೇಶದ ಹೊರಗೂ ಸಾಕಷ್ಟು ಅವಕಾಶಗಳನ್ನು ಪಡೆದು ರಫ್ತು ವೃದ್ಧಿಯಾಗಿ ದೇಶದ ಆರ್ಥಿಕತೆ ಬಲಗೊಳ್ಳುತ್ತದೆ’ ಎಂದಿದೆ. ಅಷ್ಟೇ ಅಲ್ಲದೇ, ‘ರಸ್ತೆಗಳ ಅಭಿವೃದ್ಧಿಯಿಂದಾಗಿ ಉದ್ದಿಮೆಗಳು ಬೃಹತ್ತಾದ ಗ್ರಾಹಕ ಸಮೂಹಕ್ಕೆ ಇನ್ನೂ ಹತ್ತಿರವಾಗುತ್ತದೆ ಮತ್ತು ಹೆಚ್ಚಿನ ಉದ್ಯೋಗಾವಕಾಶಕ್ಕೆ ಕಾರಣವಾಗುತ್ತದೆ. ಉತ್ತಮ ರಸ್ತೆಯ ಕಾರಣದಿಂದಾಗಿಯೇ ಕಡಿಮೆ ಖರ್ಚಿನಲ್ಲಿ ದೊಡ್ಡ ಮಾರುಕಟ್ಟೆಯನ್ನು ಪ್ರವೇಶಿಸುವ ಈ ಉದ್ದಿಮೆಗಳು ತಮ್ಮ ಹಣವನ್ನು ಮತ್ತೂ ಹೆಚ್ಚಿನ ಆವಿಷ್ಕಾರಗಳಿಗೆ ಹೂಡಿಕೆ ಮಾಡಿ ಸ್ಪರ್ಧೆಯನ್ನು ಹೆಚ್ಚಿಸುತ್ತವೆ’ ಎಂದೂ ಹೇಳುತ್ತದೆ.
ಇನ್ನು ಭಾರತದ ಕಥೆ ಏನು ಹೇಳುವುದು. ರಸ್ತೆಗಳ ಮೂಲಕ ನಡೆಯುವ ವಹಿವಾಟು ಭಾರತದ ಜಿಡಿಪಿಗೆ ಸುಮಾರು ಶೇಕಡಾ 3.6ರಷ್ಟು ಕೊಡುಗೆ ನೀಡುತ್ತದೆ. ಸುಮಾರು ಶೇಕಡಾ 85ರಷ್ಟು ಮಂದಿ ತಮ್ಮ ಓಡಾಟಕ್ಕೆ ರಸ್ತೆಗಳನ್ನು ಬಳಸಿದರೆ, ಶೇಕಡಾ 65ರಷ್ಟು ವಸ್ತುಗಳು ರಸ್ತೆಯ ಮೂಲಕವೇ ಸಾಗಿಸಲ್ಪಡುತ್ತವೆ. ಹೆಚ್ಚು ಕಡಿಮೆ 55 ಲಕ್ಷ ಕಿ.ಮೀನಷ್ಟು ರಸ್ತೆಗಳನ್ನು ಹೊಂದಿರುವ ಭಾರತ ಜಗತ್ತಿನಲ್ಲೇ ಅತ್ಯಂತ ಹೆಚ್ಚು ರಸ್ತೆ ಜಾಲವನ್ನು ಹೊಂದಿರುವ ರಾಷ್ಟ್ರ. ಹೀಗಿರುವಾಗ ರಸ್ತೆಗಳ ಅಭಿವೃದ್ಧಿ ಭಾರತದ ಆದ್ಯ ಕರ್ತವ್ಯ.
ಈ ಹಿನ್ನೆಲೆಯಲ್ಲಿಯೇ ಮೋದಿ ನಗರಗಳನ್ನು ಸಂಪರ್ಕಿಸುವ ಭಾರತ್ ಮಾಲಾ ಯೋಜನೆಯನ್ನು 2015ರಲ್ಲಿ ಜಾರಿಗೆ ತಂದರು. ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಅಡಿಯಲ್ಲಿ ಬರುವ ಈ ಯೋಜನೆ ದಕ್ಷಿಣೋತ್ತರ ಪೂರ್ವ-ಪಶ್ಚಿಮದ ಕಾರಿಡಾರ್ಗಳಿಗೆ ಶಕ್ತಿ ತುಂಬುವ ಕಲ್ಪನೆ ಹೊಂದಿದೆ. ವಾಜಪೇಯಿಯವರು ಕಟ್ಟಿದ ಸುವರ್ಣ ಚತುಷ್ಪಥದ ಕನಸಿನ ಉದ್ದಕ್ಕೂ ಇರುವ ಅನೇಕ ಚೋಕ್ ಪಾಯಿಂಟ್ ಗಳನ್ನು ವಾಹನ ದಟ್ಟಣೆಯಿಂದ ಮುಕ್ತಗೊಳಿಸಿ ಸಂಚಾರವನ್ನು ಸುಗಮಗೊಳಿಸುವ ಕಲ್ಪನೆ ಇದರದ್ದು. 60,000 ಕಿ.ಮೀ ಉದ್ದದ ಹೆದ್ದಾರಿ ನಿರ್ಮಾಣದ ಗುರಿಯನ್ನು ಹೊಂದಿರುವ ಭಾರತ್ ಮಾಲಾ ಮೊದಲ ಹಂತದಲ್ಲಿ ಹತ್ತು ಲಕ್ಷ ಕೋಟಿ ಹೂಡಿಕೆಯೊಂದಿಗೆ 25,000 ಕಿ.ಮೀಗಳ ರಸ್ತೆ ನಿರ್ಮಾಣದ ಗುರಿ ಹೊಂದಿತ್ತು. ಅಗತ್ಯವಿದ್ದೆಡೆ ರಸ್ತೆ ವಿಸ್ತಾರ, ಹೊಸ ರಿಂಗ್‌ರೋಡುಗಳ ರಚನೆ, ಬೈಪಾಸುಗಳ ನಿರ್ಮಾಣ, ಕಾರಿಡಾರ್‌ಗಳು, ಲಾಜಿಸ್ಟಿಕ್ ಪಾರ್ಜುಗಳು ಇವೆಲ್ಲವನ್ನೂ ಭಾರತ್ ಮಾಲಾ ತನ್ನೊಡಲೊಳಗೆ ಬಚ್ಚಿಟ್ಟುಕೊಂಡಿದೆ. 6000 ಕಿ.ಮೀ ಉದ್ದದ ಕಾರಿಡಾರ್ ಮತ್ತು ಕೂಡು ರಸ್ತೆಗಳು, 2000 ಕಿ.ಮೀನಷ್ಟು ಗಡಿ ಮತ್ತು ಅಂತರ್ರಾಷ್ಟ್ರೀಯ ಸಂಪರ್ಕದ ರಸ್ತೆಗಳು, 800 ಕಿ.ಮೀಗಳಷ್ಟು ಹಸಿರು ರಸ್ತೆಗಳು, 9000 ಕಿ.ಮೀನಷ್ಟು ರಾಷ್ಟ್ರೀಯ ಹೆದ್ದಾರಿಯ ಅಭಿವೃದ್ಧಿ, 2000 ಕಿ.ಮೀಗಳಷ್ಟು ಬಂದರು ಸಂಪರ್ಕ, ಇವೆಲ್ಲವೂ ಮೊದಲ ಹಂತದ ಯೋಜನೆಯಲ್ಲಿದೆ. ಒಟ್ಟಾರೆ ಭಾರತವನ್ನು ರಸ್ತೆಗಳಿಂದ ಸಮೃದ್ಧಗೊಳಿಸಿ ಜನರ ಓಡಾಟಕ್ಕೆ ಮತ್ತು ವಸ್ತುಗಳ ಸಾಗಣೆಗೆ ಒಂದಿನಿತೂ ಧಕ್ಕೆ ಇಲ್ಲದಂತೆ ಮಾಡುವ ಪ್ರಯತ್ನ ಭಾರತ್‌ಮಾಲಾದು.

ಭಾರತ್ ಮಾಲಾ ಯೋಜನೆಯ ಮೂಲಕ ಮೋದಿ ಎರಡೂಕಾಲು ಕೋಟಿ ಉದ್ಯೋಗಗಳನ್ನು ಸೃಷ್ಟಿಸಿದರು. ಕರೋನಾ ಲಾಕ್ಡೌನಿನ ನಡುವೆಯೂ 13,000 ಕಿ.ಮೀಗೂ ಹೆಚ್ಚು ರಸ್ತೆಗಳನ್ನು ನಿರ್ಮಿಸಿ ದಿನಕ್ಕೆ 37 ಕಿ.ಮೀಗಳ ದಾಖಲೆ ಬರೆದರು. ಅವರ ಅಧಿಕಾರಾವಧಿಯ ಒಂಭತ್ತು ವರ್ಷಗಳಲ್ಲಿ ಸಾವಿರಾರು ಕಿ.ಮೀಗಳ ರಾಷ್ಟ್ರೀಯ ಹೆದ್ದಾರಿಗಳು ನಿರ್ಮಾಣಗೊಂಡರೆ ದೀರ್ಘಕಾಲದಿಂದ ನನೆಗುದಿಗೆ ಬಿದ್ದಿದ್ದ ಹತ್ತಾರು ಸೇತುವೆಗಳು ಪುನರ್‌ನಿರ್ಮಾಣಗೊಂಡವು. ಅವರ ಪ್ರಯಾಸದಿಂದಾಗಿ ಜನರ ಓಡಾಟದ ಅವಧಿ ಊಹಿಸಲಾಗದಷ್ಟು ಕಡಿಮೆಯಾದರೆ ಸರಕು ಸಾಗಣೆ ಹಿಂದೆಂದಿಗಿಂತಲೂ ಸಲೀಸಾಯ್ತು. ಉತ್ತರ ಪ್ರದೇಶದ ಎಕ್ಸ್‌ಪ್ರೆಸ್‌ವೇ ಉದ್ಘಾಟಿಸುತ್ತಾ ನರೇಂದ್ರಮೋದಿ, ‘ವ್ಯಕ್ತಿಯೊಬ್ಬ ಒಂದು ಮನೆಯನ್ನು ಕಟ್ಟಿದರೂ ಅದಕ್ಕೆ ರಸ್ತೆಯಿದೆಯೋ ಇಲ್ಲವೋ ಎಂದು ಮೊದಲು ಯೋಚಿಸುತ್ತಾನೆ. ಆನಂತರ ಆ ಸ್ಥಳದ ಮಣ್ಣು, ಕಲ್ಲು ಇತ್ಯಾದಿಗಳನ್ನು ನೋಡುತ್ತಾನೆ. ಉತ್ತರ ಪ್ರದೇಶದಲ್ಲಿ ಸುದೀರ್ಘಕಾಲ ಆಳಿದ ಮಂದಿ ಕಾರ್ಖಾನೆಗಳನ್ನು ತರುತ್ತೇವೆಂದು ಜನರಿಗೆ ಕನಸು ಕಾಣಿಸಿದರು. ಆದರೆ ಉತ್ಪನ್ನಗಳನ್ನು ಒಯ್ಯಲು ಬೇಕಾದ ರಸ್ತೆಗಳ ಬಗ್ಗೆ ಯೋಚಿಸಲೇ ಇಲ್ಲ. ಈ ಕಾರಣದಿಂದಾಗಿಯೇ ಇಲ್ಲಿ ಆರಂಭಗೊಂಡ ಅನೇಕ ಕೈಗಾರಿಕೆಗಳು ಸೂಕ್ತ ವ್ಯವಸ್ಥೆ ಇಲ್ಲದೇ ಬೀಗ ಜಡಿಯಲ್ಪಟ್ಟಿವೆ’ ಎಂದಿದ್ದರು.

ನರೇಂದ್ರಮೋದಿ ಕಟ್ಟಿದ ಎಕ್ಸ್‌ಪ್ರೆಸ್‌ವೇ ಕನಸುಗಳು ಸಾಮಾನ್ಯವಾದ್ದಲ್ಲ. ದೆಹಲಿ, ಮುಂಬೈ ಎಕ್ಸ್‌ಪ್ರೆಸ್‌ವೇ ಅಂತೂ ಕಣ್ಣು ಕುಕ್ಕುವಂಥದ್ದು. ಬರಲಿರುವ ದಿನಗಳಲ್ಲಿ ಈ ಹೆದ್ದಾರಿಯನ್ನು ನೋಡಲೆಂದೇ ಜನ ಬಂದರೆ ಅಚ್ಚರಿ ಪಡುವಂತಿಲ್ಲ. ದೆಹಲಿಯ ಸುತ್ತಲಿನ ಈಸ್ಟರ್ನ್ ಮತ್ತು ವೆಸ್ಟರ್ನ್ ಪೆರಿಫೆರಲ್ ಎಕ್ಸ್ಪ್ರೆಸ್‌ವೇ, ಉತ್ತರ ಪ್ರದೇಶದ ಪೂರ್ವಾಂಚಲ್ ಎಕ್ಸ್‌ಪ್ರೆಸ್‌ವೇ, ವಾರಣಾಸಿ-ಕೋಲ್ಕತ್ತಾ ಎಕ್ಸ್‌ಪ್ರೆಸ್‌ವೇ ಇವೆಲ್ಲ ಕಣ್ಣುಕುಕ್ಕುವಂಥವೇ. ಇನ್ನು ಎಕ್ಸ್ಪ್ರೆಸ್‌ವೇಯನ್ನು ಬಿಟ್ಟು ಸಾಕಷ್ಟು ರಾಷ್ಟ್ರೀಯ ಹೆದ್ದಾರಿಗಳನ್ನು ಈ ಸರ್ಕಾರ ಅಭಿವೃದ್ಧಿಪಡಿಸಿದೆ. ಗಡಿಗೆ ಹೊಂದಿಕೊಂಡ ಸುಮಾರು 5000 ಕಿ.ಮೀ ರಸ್ತೆಗಳ ನಿರ್ಮಾಣದ ಗುರಿ ಹಾಕಿಕೊಂಡು ದಾಖಲೆಯ ವೇಗದಲ್ಲಿ ಕೆಲಸ ನಿರ್ವಹಿಸುತ್ತಿವೆ. ಈಶಾನ್ಯ ರಾಜ್ಯಗಳಲ್ಲಿ ಸಾವಿರಾರು ಕಿ.ಮೀ ಹೆದ್ದಾರಿಯ ನಿರ್ಮಾಣವಾಗಿದೆ. ಇನ್ನು 21 ವರ್ಷಗಳಿಂದ ಕಟ್ಟಲ್ಪಡುತ್ತಲೇ ಇದ್ದ ಬೊಗಿಬೀಲ್ ಸೇತುವೆಯನ್ನು ಪೂರ್ಣಗೊಳಿಸಿದ್ದು ಮೋದಿ. ಹಿಮಾಲಯದ ಬುಡದಲ್ಲಿಯೇ ಕೊರೆದ ಅಟಲ್ ಟನಲ್ ಅಚ್ಚರಿಯ ರಸ್ತೆಗಳಲ್ಲೊಂದು. ಹೇಳುತ್ತಾ ಹೋದರೆ ಮೋದಿಯವರ ಸಾಧನೆ ಮುಗಿಯುವಂಥದ್ದಲ್ಲ. ಈ ಎಲ್ಲ ರಸ್ತೆಗಳೂ ಹೇಗಿವೆ ಎಂದು ಅರಿಯಬೇಕಾದರೆ ಒಮ್ಮೆ ಬೆಂಗಳೂರಿನಿಂದ ಮೈಸೂರಿಗೆ ಪ್ರಯಾಣ ಮಾಡಿ. 180 ನಿಮಿಷಗಳ ಈ ಪ್ರಯಾಣವನ್ನು ನೀವು 75 ನಿಮಿಷಗಳಲ್ಲಿ ಮುಗಿಸಬಲ್ಲಿರಿ. ಸುಮಾರು ಎಂಟುವರೆ ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಈ ರಸ್ತೆ ನಿಮ್ಮ ಎಲ್ಲ ಕಲ್ಪನೆಗಳನ್ನೂ ಮೀರಿ ಮುನ್ನಡೆಯಬಲ್ಲದ್ದು!